ಪತ್ತಂಡ, ಪಾಲೇಕಂಡ ತಂಡಗಳಿಗೆ ಮುನ್ನಡೆ
ವಿರಾಜಪೇಟೆ: ತಾತಂಡ ಕೊಡವ ಕಪ್ ಕೌಟುಂಬಿಕ ಹಾಕಿ ಉತ್ಸವದ 15ನೇ ದಿನವಾದ ಸೋಮವಾರ ಪತ್ತ ಂಡ, ಪಾಲೇಕಂಡ ತಂಡ ಸೇರಿದಂತೆ 12 ತಂಡಗಳು ಮುನ್ನಡೆ ಸಾಧಿಸಿದವು. ಮೈದಾನ 1ರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಾಲೇಕಂಡ ತಂಡ ಕಾಲಿಮಾಡ ತಂಡವನ್ನು 1-0 ಗೋಲುಗಳಿಂದ ಮಣಿಸಿ ವಿಜಯ ಸಾಧಿಸಿತು. ಪಂದ್ಯದಲ್ಲಿ ದಾಖಲಾದ ಏಕೈಕ ಗೋಲನ್ನು ಶಾಶ್ವತ್ ದಾಖಲಿಸಿ ಪಾಲೇಕಂಡಕ್ಕೆ ಜಯ ಒದಗಿಸಿದರು.
2ನೇ ಪಂದ್ಯದಲ್ಲಿ ಅಮ್ಮಂಡ ತಂಡ ಮೂಕೋವಂಡ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಅಮ್ಮಂಡ ತಂಡದ ಪರವಾಗಿ ಅಯ್ಯಪ್ಪ ಮತ್ತು ರೋಹನ್ ತಲಾ 1 ಗೋಲು ದಾಖಲಿಸಿದರು. ಮೂಕೋವಂಡ ತಂಡದ ಪರವಾಗಿ ಮಾಚಯ್ಯ 1 ಗೋಲು ದಾಖಲಿಸಿ ಸೋಲಿನ ಅಂತರವನ್ನು ಕುಗ್ಗಿಸಲು ನೆರವಾದರು. 3ನೇ ತಂಡದಲ್ಲಿ ಪುಲ್ಲೇಟಿರ ತಂಡ ಪೊನೇರಿರ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಪುಲ್ಲೇಟಿರ ತಂಡದ ಪರವಾಗಿ ಶುಭಾನ್ ಮತ್ತು ನಂದಾ ತಲಾ 1 ಗೋಲು ಗಳಿಸಿದರು. ಪೊನೇರಿರ ತಂಡದ ಪರವಾಗಿ ಮಂದಣ್ಣ 1 ಗೋಲು ದಾಖಲಿಸಿ ತಂಡಕ್ಕೆ ಸಮಾಧಾನ ತಂದು ಕೊಟ್ಟರು. ನಾಲ್ಕನೇ ಪಂದ್ಯದಲ್ಲಿ ಅಲೆಮಾಡ ತಂಡ ಮಾಚಿಮಾಡ ತಂಡವನ್ನು 4-0 ಗೋಲುಗಳ ಅಂತರದಲ್ಲಿ ಭರ್ಜರಿಯಾಗಿ ಸೋಲಿಸಿತು. ಅಲೆಮಾಡ ತಂಡದ ಪರವಾಗಿ ಚರ್ಮಣ್ಣ 1 ಗೋಲು ದಾಖಲಿಸಿದರೆ ಗೋಲುಗಳ ಸರದಾರ ಚೀಯಣ್ಣ 3 ಗೋಲು ದಾಖಲಿಸಿ ತಂಡಕ್ಕೆ ಜಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
5ನೇ ಪಂದ್ಯದಲ್ಲಿ ಕುಟ್ಟಂಡ(ಅಮ್ಮತ್ತಿ) ತಂಡ ಮಲ್ಚೀರ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಕುಟ್ಟಂಡ ತಂಡದ ಪರವಾಗಿ ಸಂದೀಪ್ ಮತ್ತು ಪೂಣಚ್ಚ ತಲಾ 1 ಗೋಲು ದಾಖಲಿಸಿದರು. ಮಲ್ಚೀರ ತಂಡದ ಪರವಾಗಿ ಪ್ರಗತ್ 1 ಗೋಲು ದಾಖಲಿಸಿದರು.
ಮೈದಾನ 1ರಲ್ಲಿ ನಡೆದ ದಿನದ ಕೊನೆಯ ಪಂದ್ಯದಲ್ಲಿ ಕರಿನೆರುವಂಡ ತಂಡ ಕೊಕ್ಕಂಡ ತಂಡವನ್ನು 3-0 ಗೋಲುಗಳ ಅಂತರದಿಂದ ಭರ್ಜರಿಯಾಗಿ ಮಣಿಸಿತು. ಕರಿನೆರುವಂಡ ತಂಡದ ಪರವಾಗಿ ರತನ್, ಲಿತೀಶ್ ಹಾಗೂ ವಸಂತ ತಲಾ 1 ಗೋಲು ದಾಖಸಿದರು.
ಮೈದಾನ 2: ಮೈದಾನ 2ರಲ್ಲಿ ನಡೆದ ಮೊದಲ ಪಂದ್ಯದಲ್ಲಿ ತೀತಿಮಾಡ ತಂಡ ಬಾದುಮಾಡ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ತೀತಿಮಾಡ ತಂಡದ ಪರವಾಗಿ ದಿಕ್ಕಿತ್ ಮತ್ತು ಬೋಪಣ್ಣ ತಲಾ 1 ಗೋಲು ದಾಖಲಿಸಿ ತಂಡಕ್ಕೆ ಜಯ ಒದಗಿಸಿದರು.
2ನೇ ಪಂದ್ಯದಲ್ಲಿ ನಾಲ್ಕು ಬಾರಿ ಕೊಡವ ಕಪ್ ವಿಜೇತ, ಕಳೆದ ಬಾರಿಯ ರನ್ನರ್ ಅಪ್ ಆದ ತಳಂಗಡ ತಂಡ ಬೋಲೆರ ತಂಡವನ್ನು ಟೈಬ್ರೇಕರ್ನಲ್ಲಿ 4-1 ಗೋಲುಗಳಿಂದ ಮಣಿಸಿತು. ಪಂದ್ಯದ ಅವಧಿ ಮುಗಿದಾಗ ಎರಡೂ ತಂಡಗಳೂ ಗೋಲು ದಾಖಲಿಸುವಲ್ಲಿ ವಿಫಲವಾದವು. ಟೈಬ್ರೇಕರ್ನಲ್ಲಿ ತಳಂಗಡ ತಂಡ ಮುನ್ನಡೆ ಸಾಧಿಸುವುದರೊಂದಿಗೆ ಪಂದ್ಯವನ್ನು ತನ್ನದಾಗಿಸಿಕೊಂಡಿತು.
3ನೇ ಪಂದ್ಯದಲ್ಲಿ ಚೇಂದಂಡ ತಂಡ ನಂಬುಡಮಾಡ ತಂಡದ ವಿರುದ್ಧ 5-2 ಗೋಲುಗಳ ಅಂತರದಿಂದ ಭರ್ಜರಿ ವಿಜಯ ಸಾಧಿಸಿತು. ಚೇಂದಂಡ ತಂಡದ ಪರವಾಗಿ ಚಿರಾಟ್, ಬೋಪಣ್ಣ, ಚಿದ್ದು, ತಿಮ್ಮಯ್ಯ ಮತ್ತು ತಲಾ ಒಂದು ಗೋಲು ದಾಖಲಿಸಿ ತಂಡಕ್ಕೆ ವಿಜಯ ಒದಗಿಸಿದರು. ನಂಬುಂಡಮಾಡ ತಂಡದಲ್ಲಿ ಲಿತಿನ್ 2 ಗೋಲು ದಾಖಲಿಸಿದರೂ ತಂಡ ಜಯದಿಂದ ದೂರ ಉಳಿಯಿತು.
ನಾಲ್ಕನೇ ಪಂದ್ಯದಲ್ಲಿ ಕಲಿಯಂಡ ತಂಡ ಕರ್ತಮಾಡ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. ಕಲಿಯಂಡ ತಂಡದ ಪರವಾಗಿ ಬಿದ್ದಪ್ಪ ಮತ್ತು ಭರತ್ ತಲಾ 1 ಗೋಲು ದಾಖಲಿಸಿದರು.
5ನೇ ಪಂದ್ಯದಲ್ಲಿ ಪೊನ್ನಲ್ತಂಡ ತಂಡ ಚಕ್ಕೇರ ತಂಡಕ್ಕೆ 4-2 ಗೋಲುಗಳಿಂದ ಸೋಲುಣಿಸಿತು. ಪೊನ್ನಲ್ತಂಡ ತಂಡದ ಪರವಾಗಿ ದೇವಯ್ಯ ಎರಡು ಗೋಲು ದಾಖಲಿಸಿದರೆ, ಮುದ್ದಪ್ಪ ಹಾಗೂ ತಮ್ಮಯ್ಯ ತಲಾ 1 ಗೋಲು ದಾಖಲಿಸಿದರು. ಚಕ್ಕೇರ ತಂಡದ ಪರವಾಗಿ ಶಾನ್ ಮತ್ತು ಆದರ್ಶ್ ತಲಾ 1 ಗೋಲು ದಾಖಲಿಸಿದರು.
ಮೈದಾನ 2ರಲ್ಲಿ ನಡೆದ ದಿನದ ಕೊನೇ ಪಂದ್ಯದಲ್ಲಿ ಪತ್ತಡ ತಂಡ ಬಿದ್ದಾತಂಡ ತಂಡವನ್ನು ಟೈಬ್ರೇಕರ್ನಲ್ಲಿ 4-3 ಗೋಲುಗಳ ಅಂತರದಿಂದ ಸೋಲಿಸಿತು. ಎರಡೂ ತಂಡಗಳ ಆಟಗಾರರು ಕ್ರೀಡಾಸ್ಫೂರ್ತಿಯಿಂದ ಆಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದರು. ಎರಡೂ ತಂಡಗಳು ಮೈದಾನದಲ್ಲಿ 1-1 ಸಮ ಗೋಲುಗಳನ್ನು ದಾಖಲಿಸಿದ್ದರಿಂದ ಪಂದ್ಯ ಟೈಬ್ರೇಕರ್ ಹಂತ ತಲುಪಿತು. ಪತ್ತಡ ತಂಡದ ಪರವಾಗಿ ಸಚಿನ್ 1 ಗೋಲು ದಾಖಲಿಸಿದರೆ, ಬಿದ್ದಾತಂಡ ತಂಡದ ಪರವಾಗಿ ಕಾವೇರಪ್ಪ 1 ಗೋಲು ಹೊಡೆದರು.