ಮಾಜಿ ಟೆನಿಸ್ ಆಟಗಾರ್ತಿ ಬಾಲ್ತಾಚಾ ಕ್ಯಾನ್ಸರ್ಗೆ ಬಲಿ
ಲಂಡನ್: ಕ್ಯಾನ್ಸರ್ನಿಂದ ಬಳಲುತ್ತಿದ್ದ ಇಂಗ್ಲೆಂಡ್ನ ಮಾಜಿ ನಂಬರ್ 1 ಟೆನಿಸ್ ಆಟಗಾರ್ತಿ ಎಲೆನಾ ಬಾಲ್ತಾಚಾ ಅವರು ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ.
30 ವರ್ಷದ ಮತ್ತು ವಿಶ್ವದ ಟಾಪ್ 50 ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಎಲೆನಾ ಅವರು ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಸುತ್ತುವರೆದಾಗಲೇ ಕೊನೆಯುಸಿರೆಳೆದಿದ್ದಾರೆ ಎಂದು ಮಹಿಳಾ ಟೆನಿಸ್ ಸಂಸ್ಥೆ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ. ಕೀವ್ ಮೂಲಕ ಬಾಲ್ತಾಚಾ ಅವರು 2012ರ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂಗ್ಲೆಂಡ್ ದೇಶವನ್ನು ಪ್ರತಿನಿಧಿಸಿದ್ದರು. ಜನವರಿಯಲ್ಲಿ ಅವರು ಅನಾರೋಗ್ಯಕ್ಕೀಡಾಗಿದ್ದರು. ಅಂತಾರಾಷ್ಟ್ರೀಯ ಟೆನಿಸ್ ವೃತ್ತಿಗೆ ನಿವೃತ್ತಿ ಹೇಳಿ 2 ತಿಂಗಳು ಆದ ನಂತರ ಮತ್ತು ತಮ್ಮ ದೀರ್ಘ ಕಾಲದ ಕೋಚ್ ನಿನೋ ಸೆವೆರಿನೋ ಅವರನ್ನು ವಿವಾಹವಾಗಿ ಕೇವಲ ಒಂದು ವಾರ ನಂತರ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. 'ಬಾಲ್ತಾಚಾ ದೂರವಾಗಿರುವುದು ನಮ್ಮ ಹೃದಯ ಮುರಿದಂತಾಗಿದೆ. ಅವರು ನಿಶ್ಚಯವಾಗಿಯೂ ಪ್ರತಿಭಾನ್ವಿತ ಆಟಗಾರ್ತಿಯಾಗಿದ್ದರು. ಅಲ್ಲದೆ, ಬಾಲ್ತಾಚಾ ಅದ್ಭುತ ವ್ಯಕ್ತಿತ್ವ ಹೊಂದಿದ್ದರು. ಸ್ಫೂರ್ತಿಯುತ ಪ್ರದರ್ಶನ ನೀಡುತ್ತಿದ್ದ ಅವರು ಹಲವರ ಹೃದಯವನ್ನು ಮುಟ್ಟಿದ್ದರು' ಎಂದು ಸೆವೆರಿನೋ ಅವರು ತಿಳಿಸಿದ್ದಾರೆ.ಬಾಲ್ತಾಚಾ ಅವರು ಕ್ರೀಡೆಯ ಹಿನ್ನೆಲೆಯನ್ನು ಹೊಂದಿದ ಕುಟುಂಬದಲ್ಲೇ ಜನಸಿದ್ದಾರೆ. ಅವರ ತಂದೆ ಸೆರ್ಜಿಯೋ ಅವರು ಡಿನಾಮೋ ಕೀವ್ ಮತ್ತು ಇಂಗ್ಲೆಂಡ್ ಕ್ಲಬ್ ಐಪ್ಸೋವಿಚ್ ಪರ ಫುಟ್ಬಾಲ್ ಆಡಿದ್ದಾರೆ. ಅಲ್ಲದೆ, 1980ರಲ್ಲಿ ಮಾಸ್ಕೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೋವಿಯತ್ ಯುನಿಯನ್ ಪರ ಕಂಚಿನ ಪದಕ ಗೆದ್ದುಕೊಂಡಿದ್ದರು. ತಾಯಿ ಒಲ್ಗಾ ಅವರು ಪೆಂಟೆಥ್ಲಾನ್ನಲ್ಲಿ ಸೋವಿಯತ್ ಯುನಿಯನ್ ಪ್ರತಿನಿಧಿಸಿದ್ದರು.