ಮುಂಬೈಗೆ ಗೆಲುವೊಂದೇ ಮಂತ್ರ, ಹೊಸ ಚೈತನ್ಯದಲ್ಲಿ ಆರ್ಸಿಬಿ
ಮುಂಬೈ: ಆರಂಭದ ಐದು ಪಂದ್ಯಗಳಲ್ಲಿ ಸತತ ಸೋಲುಂಡ ನಂತರ ಆರನೇ ಪಂದ್ಯದಲ್ಲಿ ಮೊದಲ ಜಯದ ಕೇಕೆ ಹಾಕುವಲ್ಲಿ ಯಶಸ್ವಿಯಾಗಿದ್ದ ಮುಂಬೈ ಇಂಡಿಯನ್ಸ್ ಈಗ ಪ್ರತಿ ಹೆಜ್ಜೆಯಲ್ಲೂ ಗೆಲವು ಕಂಡುಕೊಳ್ಳುತ್ತ ಮುಂದೆ ಸಾಗಬೇಕಿದೆ. ಒಂದೇ ಒಂದು ಪಂದ್ಯ ಸೋತರೂ ಅದಕ್ಕೆ ಸೆಮಿಫೈನಲ್ ಬಾಗಿಲು ಬಹುತೇಕ ಮುಚ್ಚಿದಂತೆಯೇ. ಹಾಗಾಗಿ, ಮುಂಬೈ ಇಂಡಿಯನ್ಸ್ ಆಟಗಾರರು ಯಾವುದೇ ಕಾರಣಕ್ಕೂ ಸೋಲಬಾರದೆಂಬ ಮನೋಭಾವದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ.
ಮತ್ತೊಂದೆಡೆ, ಬೆಂಗಳೂರಿನಲ್ಲಿ ನಿನ್ನೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತೇ ಬಿಟ್ಟೆವು ಎಂಬ ಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತನ್ನ ರೌದ್ರಾವತಾರದ ಬ್ಯಾಟಿಂಗ್ ಮೂಲಕ ಅಂತಿಮವಾಗಿ ಗೆಲವು ತಂದುಕೊಟ್ಟ ಎಬಿ ಡಿವಿಲಿಯರ್ಸ್, ನಿಜಕ್ಕೂ ತಂಡದಲ್ಲಿ ಹೊಸ ಭರವಸೆಯ ಆಶಾಕಿರಣ ಮೂಡುವಂತೆ ಮಾಡಿದ್ದಾರೆ. ಈ ಅದ್ಧೂರಿ ಗೆಲವಿನೊಂದಿಗೆ ಆತ್ಮವಿಶ್ವಾಸವನ್ನು ದುಪ್ಪಟ್ಟು ಹೆಚ್ಚಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಕದನಕ್ಕೆ ರೆಡಿಯಾಗಿ ನಿಂತಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಏಳನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು, ರೋಚಕ ಕದನ ನಿರೀಕ್ಷಿಸಲಾಗಿದೆ.
ಇದೇ ಅಂಕಣದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ತನ್ನ ಆರನೇ ಪಂದ್ಯದಲ್ಲಿ 5 ವಿಕೆಟ್ಗಳಿಂದ ಎದುರಾಳಿಯನ್ನು ಮಣಿಸಿ ಮೊದಲ ಜಯ ದಾಖಲಿಸಿದ್ದ ಮುಂಬೈ ಮತ್ತೊಮ್ಮೆ ತವರು ಅಂಕಣದ ಲಾಭ ಪಡೆಯುವ ಮೂಲಕ ಆರ್ಸಿಬಿ ತಂಡಕ್ಕೆ ಸೋಲುಣಿಸುವ ಲೆಕ್ಕಾಚಾರದಲ್ಲಿದೆ. ಮುಂಬೈ ತಂಡ ನಾಯಕ ರೋಹಿತ್ ಶರ್ಮಾ, ಅಂಬಟಿ ರಾಯುಡು, ಮೈಕ್ ಹಸ್ಸಿ, ಬೆನ್ ಡಂಕ್, ಕೋರೆ ಆ್ಯಂಡರ್ಸನ್, ಕೀರನ್ ಪೊಲಾರ್ಡ್ರಂತಹ ಘಟಾನುಘಟಿ ಬ್ಯಾಟ್ಸ್ಮನ್ಗಳನ್ನು ಹೊಂದಿದೆ. ಆದರೆ, ಸ್ಥಿರ ಪ್ರದರ್ಶನ ನೀಡುವಲ್ಲಿ ದಾಂಡಿಗರು ವೈಫಲ್ಯ ಕಾಣುತ್ತಿರುವುದರಿಂದಲೇ ಮುಂಬೈ ಪಡೆಗೆ ಒಂದರಮೇಲೊಂದರಂತೆ ಸೋಲುಗಳು ಬೆನ್ನುಹತ್ತಿದವು.
ಕಿಂಗ್ಸ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಕೊಂಚ ಸುಧಾರಣೆ ತಂದುಕೊಂಡಿರುವ ಮುಂಬೈ ದಾಂಡಿಗರು ನಾಳಿನ ಪಂದ್ಯದಲ್ಲೂ ಒಂದು ತಂಡವಾಗಿ ಸ್ಫೋಟಿಸಬೇಕಾಗಿದೆ. ಪ್ರಮುಖವಾಗಿ ಗಂಭೀರ ಸಮಸ್ಯೆಯಾಗಿ ಕಾಡುತ್ತಿರುವ ಆರಂಭಿಕ ಆಟಗಾರರ ವೈಫಲ್ಯದಿಂದ ತಂಡ ಹೊರಬರುವುದು ಅಗತ್ಯವಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಲಸಿತ್ ಮಾಲಿಂಗ, ಜಹೀರ್ ಖಾನ್ ಹಾಗೂ ಸ್ಪಿನ್ನರ್ ಹರ್ಭಜನ್ ಸಿಂಗ್ ಉತ್ತಮ ದಾಳಿ ನಡೆಸುತ್ತಿದ್ದಾರೆ. ಇದುವರೆಗೆ ಮುಂಬೈ ತಂಡದ ಬ್ಯಾಟಿಂಗ್ಗಿಂತಲೂ ಬೌಲಿಂಗ್ ವಿಭಾಗವೇ ಹೆಚ್ಚು ಮಿಂಚಿದೆ.
ಆದರೆ ಕಳೆದ ಪಂದ್ಯದಲ್ಲಿ ಭುಜದ ನೋವಿಗೊಳಗಾಗಿ ತಮ್ಮ ನಾಲ್ಕನೇ ಓವರ್ನ್ನು ಪೂರ್ಣಗೊಳಿಸಲಾಗದೇ ಅರ್ಧಕ್ಕೆ ಅಂಗಣ ತೊರೆದು ಹೊರನಡೆದಿದ್ದ ಜಹೀರ್ ನಾಳಿನ ಪಂದ್ಯಕ್ಕೆ ಲಭ್ಯರಾಗುವುದು ಇನ್ನೂ ಸ್ಪಷ್ಟವಾಗಿಲ್ಲ.
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಗೆಲವು ಅಗತ್ಯವಾಗಿದೆ. ಆಡಿದ 6 ಪಂದ್ಯಗಳಲ್ಲಿ ತಲಾ 3 ಗೆಲವು ಮತ್ತು ಸೋಲುಗಳನ್ನು ಅನುಭವಿಸಿರುವ ಆರ್ಸಿಬಿ ತಂಡ ಅಂಕಪಟ್ಟಿಯಲ್ಲಿ ಇನ್ನೂ ಸುಭದ್ರ ಸ್ಥಾನ ಹೊಂದಿಲ್ಲ. ಸೆಮಿಫೈನಲ್ ಹಾದಿ ಪ್ರವೇಶಿಸಬೇಕಾದರೆ, ಹೆಚ್ಚಿನ ಪಂದ್ಯಗಳನ್ನು ಗೆದ್ದುಕೊಳ್ಳಬೇಕಾಗಿದೆ.
ಈಗಾಗಲೇ ಯುಎಇನಲ್ಲಿ ನಡೆದ ಟೂರ್ನಿಯ ಮೊದಲ ಹಂತದಲ್ಲಿ ಆರ್ಸಿಬಿ ತಂಡ ದುಬೈನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಸುತ್ತಿನ ಸಮರದಲ್ಲಿ 7 ವಿಕೆಟ್ಗಳಿಂದ ಜಯ ಸಂಪಾದಿಸಿತ್ತು. ಇಲ್ಲಿ ಮಂಬೈ ಪಡೆಯನ್ನು ಕೇವಲ 115 ರನ್ಗಳಿಗೆ ಕಟ್ಟಿಹಾಕಿದ್ದ ರಾಯಲ್ ಚಾಲೆಂಜರ್ಸ್ 17.3 ಓವರುಗಳಲ್ಲಿಯೇ ಗುರಿ ತಲುಪಿತ್ತು. ಕ್ರಿಸ್ ಗೇಯ್ಲ್, ನಾಯಕ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಮತ್ತು ಎಬಿ ಡಿವಿಲಿಯರ್ಸ್ರಿಂದ ಕೂಡಿದ ಬಲಾಢ್ಯ ಬ್ಯಾಟಿಂಗ್ ಪಡೆಯನ್ನು ಆರ್ಸಿಬಿ ಹೊಂದಿದೆ. ಎಂತಹ ಸಂದಿಗ್ಧ ಪರಿಸ್ಥಿತಿ ಇದ್ದಾಗಲೂ ತಂಡವನ್ನು ಸಮರ್ಥವಾಗಿ ಮೇಲೆತ್ತುವ ಸಾಹಸ ಬ್ಯಾಟ್ಸ್ಮನ್ಗಳು ಇವರಾಗಿದ್ದಾರೆ. ಇವರನ್ನು ಬೇಗನೆ ಕಟ್ಟಿಹಾಕದ ಹೊರತು ಮುಂಬೈ ತಂಡ ಗೆಲುವಿನ ಬಗ್ಗೆ ಯೋಚಿಸುವುದೇ ಕಷ್ಟ.
ಇತ್ತೀಚಿನ ಕೆಲ ಪಂದ್ಯಗಳಲ್ಲಿ ಫಾರ್ಮ್ ಕೊರತೆ ಅನುಭವಿಸುತ್ತಿರುವ ಕೊಹ್ಲಿ ಸಿಡಿಯಬೇಕಿದೆ. ಹಾಗೆಯೇ ಯುವರಾಜ್ರಿಂದಲೂ ದೊಡ್ಡ ಇನಿಂಗ್ಸ್ ಹೊರಹೊಮ್ಮುವ ನಿರೀಕ್ಷೆಯಲ್ಲಿ ಆರ್ಸಿಬಿ ಇದೆ. ಇನ್ನು ಬೌಲಿಂಗ್ನಲ್ಲಿ ಹೆಚ್ಚು ಸಮತೋಲನವಿದೆ. ವರುಣ್ ಆರೋನ್, ಮಿಚೆಲ್ ಸ್ಟಾರ್ಕ್ ಮತ್ತು ಲೆಗ್ ಸ್ಪಿನ್ನರ್ ಯುಜವೇಂದ್ರ ಚಾಹಲ್ ಉತ್ತಮ ದಾಳಿ ನಡೆಸುತ್ತಿದ್ದು, ದಿಗ್ಗಜ ದಾಂಡಿಗರನ್ನು ಬೇಗನೆ ಪೆವಿಲಿಯನ್ಗೆ ಕಳುಹಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಒಟ್ಟಾರೆಯಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ರೋಚಕ ಕದನಕ್ಕೆ ಸಾಕ್ಷಿಯಾಗುವ ಆಶಾಭಾವನೆ ಹೊಂದಲಾಗಿದೆ.