ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಡ್- ಹಾಕ್ ಸಮಿತಿ ರಚನೆ

Vishwanath S
Updated On : 7 May 2014, 12:54 pm

ಏಪ್ರಿಲ್ 30 , 2014ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಬಿಸಿಸಿಐ ಅಥವಾ ಯಾವುದೇ ವ್ಯಕ್ತಿ ಈ ನಿರ್ಧಾರದ ವಿರುದ್ಧವಾಗಿ, ಕಾನೂನು ವಿರುದ್ಧವಾಗಿ ನಡೆದುಕೊಂಡಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶನ ನೀಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ತೀರ್ಪಿನ ನಂತರ, ಬಿಸಿಸಿಐ ಹಂಗಾಮಿ ಅಧ್ಯಕ್ಷ ಶಿವಲಾಲ್ ಯಾದವ್ ಅವರು ಬಿಸಿಸಿಐನ 32 (7ನೇ) ನಿಯಮದನ್ವಯ ತಮ್ಮ ಅಧಿಕಾರದಿಂದ, ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಸದಸ್ಯತ್ವವನ್ನು ವಜಾಗೊಳಿಸಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಡಳಿತ ನೋಡಿಕೊಳ್ಳಲು, ಹಾಗೂ ಕ್ರೀಡೆಯ ಮತ್ತು  ಆಟಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಅಡ್-ಹಾಕ್ ಸಮಿತಿ ರಚಿಸಲಾಗುವುದು ಎಂದು ತಿಳಿಸಲಾಗಿದೆ.

ಬಿಸಿಸಿಐ ವಿರುದ್ಧ ಆರ್‌ಸಿಎ ಹೋರಾಟ
ಬಿಸಿಸಿಐನ ಈ ಕ್ರಮವನ್ನು ಪ್ರಶ್ನಿಸಿರುವ ಆರ್‌ಸಿಎ, ನ್ಯಾಯಾಲಯದ ಮೆಟ್ಟಿಲೇರಿದೆ. ಈ ಪರಿಸ್ಥಿತಿಯನ್ನು ನಾವು ಸಮರ್ಥ ರೀತಿಯಲ್ಲಿ ಎದುರಿಸಲಿದ್ದು, ಹೈಕೋರ್ಟ್ ಮೆಟ್ಟಿಲೇರುವುದಾಗಿ ಲಲಿತ್ ಮೋದಿ ಪರ ವಕೀಲರಾಗಿರುವ ಮೆಹಮೂದ್ ಅಬ್ದಿ ತಿಳಿಸಿದ್ದಾರೆ.
ನಾವು ರಾಜ್ಯವೊಂದರ ಕ್ರೀಡಾ ನಿಯಮದ ಪ್ರಕಾರ ಆಡಳಿತ ನಡೆಸುತ್ತಿದ್ದೇವೆ. ಆದರೆ ಬಿಸಿಸಿಐ ಕೇವಲ ನೊಂಣಿಯಾಗಿರುವ ಮಂಡಳಿಯಾಗಿದೆ ಅಷ್ಟೇ. ಈ ಎಲ್ಲಾ ವಿಷಯವನ್ನು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಲಾಗುವುದು ಎಂದಿದ್ದಾರೆ ಮೋದಿ ವಕೀಲರು.
ರಾಜ್ಯ ಸಂಸ್ಥೆಯೊಂದರೆ ಮೇಲೆ ನಿಷೇಧ ಹೇರಿಸುವುದು ನ್ಯಾಯಸಮ್ಮತವಲ್ಲ. ಸಂಸ್ಥೆಯ ಕೆಲವು ಸದಸ್ಯರನ್ನು ವಿಶೇಷ ಮಂಡಳಿ ಸಭೆಗೆ ಕಳುಹಿಸುವ ಪ್ರಯತ್ನ ನಡೆಸುತ್ತಿದ್ದು, ಈ ವಿಷ್ಯವನ್ನು ಅಲ್ಲಿ ಪ್ರಸ್ತಾಪಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಮೋದಿ ಆರ್‌ಸಿಎಯನ್ನು ತಮ್ಮ ಕಾರ್ಯಕಾರಿ ಸಮಿತಿ ಮೂಲಕ ಆಡಳಿತ ನಡೆಸಲಿದ್ದಾರೆ. ಇಲ್ಲಿನ ಭದ್ರತಾ ಪರಿಸ್ಥಿತಿಗಳು ಸುಧಾರಿಸಿದ ನಂತರ ಮೋದಿ ಭಾರತಕ್ಕೆ ಮರಳುವ ವಿಶ್ವಾಸವಿದೆ ಎಂದು ಅಬ್ದಿ ತಿಳಿಸಿದರು.
ಬೆಂಗಳೂರು ವಿಶ್ವ 10ಕೆ ಮ್ಯಾರಥಾನ್‌ಗೆ ದಾಖಲೆ ಪ್ರವೇಶ
ಬೆಂಗಳೂರು: ವಿಶ್ವ ವಿಖ್ಯಾತ ಅಥ್ಲೀಟ್ ಕಾರ್ಲ್ ಲೂಯಿಸ್ ಅವರು ರಾಯಭಾರಿಯಾಗಿರುವ ಮತ್ತು ಉದ್ಯಾನ ನಗರಿಯಲ್ಲಿ ಇದೇ ತಿಂಗಳು ನಡೆಯಲಿರುವ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್ ಸ್ಪರ್ಧೆಯಲ್ಲಿ ಈ ಬಾರಿ ದಾಖಲೆಯ 25,000ಕ್ಕೂ ಅಧಿಕ ಅಥ್ಲೀಟ್‌ಗಳು ಹೆಸರು ನೋಂದಾಯಿಸಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ 3000 ಅಥ್ಲೀಟ್‌ಗಳು ಹೆಚ್ಚಾಗಿದ್ದಾರೆ.
7 ವರ್ಷಗಳ ಹಿಂದೆ ಆರಂಭವಾದ ಮ್ಯಾರಥಾನ್‌ಗೆ ವರ್ಷದಿಂದ ವರ್ಷಕ್ಕೆ ಅಧಿಕ ಅಥ್ಲೀಟ್‌ಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇದೇ ಮೇ 18ರಂದು ಮ್ಯಾರಾಥಾನ್ ಸ್ಪರ್ಧೆ ನಡೆಯಬೇಕಿರುವ ಹಿನ್ನೆಲೆಯಲ್ಲಿ, ಸ್ಪರ್ಧೆ ಆರಂಭಕ್ಕೂ ಮೂರು ವಾರಗಳ ಮುನ್ನವೇ ಅಥ್ಲೀಟ್‌ಗಳ ನೋಂದಣಿ ಮುಕ್ತಾಯಗೊಂಡಿದೆ.
ಇನ್ನು ಮುಕ್ತ 10ಕೆ 'ನೈಕಿ-ದಿ ಯಂಗ್ ಆ್ಯಂಡ್ ದಿ ಫಾಸ್ಟ್‌' ಮತ್ತು 'ಡಿಎಚ್‌ಎಲ್ ಕಾರ್ಪೊರೇಟ್ ಚಾಂಪಿಯನ್‌ಶಿಪ್‌' ವಿಭಾಗದಲ್ಲಿ ಒಟ್ಟು 13,200 ಅಥ್ಲೀಟ್‌ಗಳು ಪ್ರವೇಶ ಪಡೆದಿದ್ದಾರೆ. ಮಜ್ಜ ರನ್ ಸ್ಪರ್ಧೆಯಲ್ಲಿ 10,600 ಪ್ರವೇಶಗಳು ಬಂದಿವೆ. ಹಿರಿಯ ನಾಗರಿಕರ ಓಟದ ವಿಭಾಗದಲ್ಲಿ 750 ಅಥ್ಲೀಟ್‌ಗಳು ಪ್ರವೇಶ ಪಡೆದಿದ್ದಾರೆ. ದೈಹಿಕ ವಿಕಲಚೇತನರ ವಿಭಾಗದಲ್ಲಿ 250 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರ ಹೊರತಾಗಿ ಹಿರಿಯ ಪುರುಷ ಮತ್ತು ಮಹಿಳೆಯರ ವಿಭಾಗದ ಓಟದ ಸ್ಪರ್ಧೆಗಳಿರುತ್ತವೆ.
'ಉದ್ಯಾನ ನಗರಿಯಲ್ಲಿ ನಡೆಯುವ ಮ್ಯಾರಥಾನ್ ಕ್ರೀಡಾಪಟುಗಳಲ್ಲದೇ, ಎಲ್ಲ ನಾಗರಿಕರಲ್ಲೂ ಕ್ರೀಡಾ ಉತ್ಸಾಹವನ್ನು ತುಂಬಿ ಅವರು ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುತ್ತಿದೆ' ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಅಥ್ಲೀಟ್ ರೀತ್ ಅಬ್ರಾಹಮ್ ಅವರು ತಿಳಿಸಿದರು.
ಫುಟ್ಬಾಲ್ ಅಭಿಮಾನಿಗಳೇ ಹುಷಾರ್!
ರಿಯೊ ಡಿ ಜನೈರೊ: ಮುಂದಿನ ತಿಂಗಳು ನಡೆಯಲಿರುವ ಫೀಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೆ ಆಗಮಿಸಲಿರುವ ವಿದೇಶಿ ಅಭಿಮಾನಿಗಳಿಗೆ ಕೆಲವು ಮುಂಜಾಗೃತಾ ಎಚ್ಚರಿಕೆಗಳನ್ನು ನೀಡಲಾಗಿದೆ.
ಜೂನ್ 12ರಿಂದ ಬ್ರೆಜಿಲ್‌ನಲ್ಲಿ ಆರಂಭವಾಗಲಿರುವ ವಿಶ್ವಕಪ್ ಪಂದ್ಯಾವಳಿಗೆ ಅಮೆರಿಕಾ, ಇಂಗ್ಲೆಂಡ್, ಜರ್ಮನಿ ಮತ್ತು ಅರ್ಜೆಂಟೀನಾ ಸೇರಿದಂತೆ ವಿಶ್ವದ ವಿವಿಧ ದೇಶಗಳಿಂದ ಅಭಿಮಾನಿಗಳು ಆಗಮಿಸಲಿದ್ದು, ಅಲ್ಲಿನ ಭದ್ರತೆ ಕಾಪಾಡಿಕೊಳ್ಳಲು ಹಾಗೂ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಈ ಸಲಹೆಗಳನ್ನು ನೀಡಲಾಗಿದೆ.
ಗುಂಪಿನಲ್ಲಿ ಆಗಮಿಸುವ ಅಭಿಮಾನಿಗಳು ಒಟ್ಟಿಗೆ ಇರತಕ್ಕದ್ದು, ಅಪರಿಚಿತರಿಂದ ಯಾವುದೇ ರೀತಿಯ ಪಾನೀಯಗಳನ್ನು ಸ್ವೀಕರಿಸಬಾರದು. ಫೆವೆಲಾಸ್‌ಗಳಿಗೆ ಭೇಟಿ ನೀಡಬಾರದು. ಅಲ್ಲದೆ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಸಜ್ಜಾಗಿರಬೇಕು ಎಂಬ ಸಲಹೆಗಳನ್ನು ನೀಡಲಾಗಿದೆ.
ಬ್ರೆಜಿಲ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಟ್ರಾಫಿಕ್ ಸೇರಿದಂತೆ ಇತರೆ ಅಪರಾಧ ನಡೆಯುವ ಕೊಳಗೇರಿ ಫೆವೆಲಾಸ್‌ಗಳಿಗೆ ಭೇಟಿ ನೀಡ ಬಾರದು ಎಂದು ಅಭಿಮಾನಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ರಿಯೊ ಹೊರತಾಗಿ ಉಳಿದ ಸ್ಥಳಗಳಲ್ಲಿ ಅಪರಾದ ಕೃತ್ಯಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ರಿಯೊನ ಸಾರ್ವಜನಿಕ ಭದ್ರತಾ ಇಲಾಖೆ ಈ ನಿರ್ದೇಶನಗಳನ್ನು ನೀಡಿವೆ.
ವಿಶ್ವ ಸ್ನೂಕರ್ ಪ್ರಶಸ್ತಿ ಗೆದ್ದ ಇಂಗ್ಲೆಂಡ್‌ನ ಮಾರ್ಕ್ ಮಾರ್ಕ್ ಸೆಲ್ಬಿ
ಶೆಫೀಲ್ಡ್ (ಇಂಗ್ಲೆಂಡ್): ಇಂಗ್ಲೆಂಡ್‌ನ ಮಾರ್ಕ್ ಸೆಲ್ಬಿ ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದು ಸೆಲ್ಬಿ ಅವರಿಗೆ ಚೊಚ್ಚಲ ವಿಶ್ವ ಸ್ನೂಕರ್ ಪ್ರಶಸ್ತಿಯಾಗಿರುವುದು ವಿಶೇಷ.
ಇಂಗ್ಲೆಂಡ್‌ನಲ್ಲಿ ಮಂಗಳವಾರ ನಡೆದ ಫೈನಲ್ ಸೆಣಸಾಟದಲ್ಲಿ ಸೆಲ್ಬಿ ಅವರು 18-14 ಅಂಕಗಳ ಅಂತರದಲ್ಲಿ ಹಾಲಿ ಚಾಂಪಿಯನ್ ರೋನೀ ಓಸುಲಿವಾನ್ ಅವರಿಗೆ ಅಚ್ಚರಿಯ ಸೋಲುಣಿಸಿ ಈ ಸಾಧನೆ ಮಾಡಿದರು.
ಸೆಮಿಫೈನಲ್ ಸುತ್ತಿನಲ್ಲಿ ನೀಲ್ ರಾಬರ್ಟ್‌ಸನ್ ಸವಾಲನ್ನು ಹತ್ತಿಕ್ಕಿದ್ದ 30ರ ಇಂಗ್ಲೆಂಡ್ ಆಟಗಾರ ಫೈನಲ್‌ನಲ್ಲಿ ಸಹ ಉತ್ತಮ ಆಟ ಪ್ರದರ್ಶಿಸಿ ಅದ್ಭುತ ಗೆಲವು ತಮ್ಮದಾಗಿಸಿಕೊಂಡರು.
ನಾನು 16 ವರ್ಷದವನಾಗಿದ್ದಾಗ ತಂದೆ ನಿಧನರಾಗಿದ್ದರು. ಅದಕ್ಕಿಂತ ಎರಡು ತಿಂಗಳ ಮೊದಲಷ್ಟೇ ನಾನು ವೃತ್ತಿಪರತೆಗೆ ಮರಳಿದ್ದೆ. ಯಾವಾಗ ನೀನು ವಿಶ್ವ ಪ್ರಶಸ್ತಿ ಗೆದ್ದುಕೊಳ್ಳುತ್ತಿ ಎಂಬುದು ತಂದೆಯ ಕೊನೆಯ ಮಾತಾಗಿತ್ತು. ಆಗ ಅವರಿಗೆ ಈ ಬಗ್ಗೆ ಭರವಸೆ ನೀಡಿದ್ದೆ. ಈಗ ಅದು ಈಡೇರಿದ್ದು, ನಾ ಕಂಡ ಕನಸು ನನಸಾಗಿದೆ ಎಂದು ಮಾರ್ಕ್ ಸೆಲ್ಬಿ ಚಾಂಪಿಯನ್ ಆದ ಬಳಿಕ ಬಾವೋದ್ವೇಗದಿಂದ ನುಡಿದರು.  ಈ ಮಧ್ಯೆ ಐದು ಬಾರಿಯ ಚಾಂಪಿಯನ್ ರೋನೀ ಓಸುಲಿವಾನ್, ಪ್ರಶಸ್ತಿ ಗೆದ್ದ ಸೆಲ್ಬಿಗೆ ಅಭಿನಂದನೆ ಹೇಳಿದ್ದಾರೆ. ಫೈನಲ್‌ನಲ್ಲಿ ನಾನು ಮೊದಲ ಬಾರಿಗೆ ಸೋಲನುಭವಿಸಿದೆ ಎಂದು ಅವರು ಹೇಳಿದ್ದಾರೆ.
ಪ್ರಶಸ್ತಿ ಸುತ್ತಿನ ಸಮರದಲ್ಲಿ ಉತ್ತಮ ಆಟ ಪ್ರದರ್ಶಿಸಿದೆ. ಹಲವಾರು ಅಭೂತಪೂರ್ವ ಗೆಲವುಗಳನ್ನು ಸಂಪಾದಿಸಿದ್ದೇನೆ. ಆದರೆ, ಸೋಲು ಕೂಡ ಕ್ರೀಡೆಯ ಭಾಗ. ಮುಂದಿನ ಪಂದ್ಯಾವಳಿಗಳಲ್ಲಿ ಗೆಲ್ಲುವುದಾಗಿ ಓಸುಲಿವಾನ್ ಪ್ರತಿಕ್ರಿಯಿಸಿದ್ದಾರೆ.

ಕನೇರಿಯಾ ಆಜೀವ ನಿಷೇಧ ಎತ್ತಿಹಿಡಿದ ಇಂಗ್ಲೆಂಡ್ ಕೋರ್ಟ್
ಲಂಡನ್: ವೃತ್ತಿಪರ ಕ್ರಿಕೆಟ್‌ಗೆ ಮರಳುವ ದನೀಶ್ ಕನೆರಿಯಾ ಅವರ ಅವಕಾಶಕ್ಕೆ ಮತ್ತೊಂದು ಹಿನ್ನೆಡೆ ಉಂಟಾಗಿದೆ. ತಮ್ಮ ವಿರುದ್ಧ ಆಜೀವ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಕನೇರಿಯಾ ಲಂಡನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿದ್ದು, ನಿಷೇಧವನ್ನು ಎತ್ತಿಹಿಡಿದಿದೆ.
ಕೌಂಟಿ ಕ್ರಿಕೆಟ್‌ನಲ್ಲಿ ತಾವು ಪ್ರತಿನಿಧಿಸಿದ್ದ ಎಸೆಕ್ಸ್ ತಂಡದ ಸಹ ಆಟಗಾರನಿಗೆ ಉತ್ತಮ ಪ್ರದರ್ಶನ ನೀಡದಂತೆ ಒತ್ತಾಯಿಸಿದ್ದಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ, ಅವರ ವಿರುದ್ಧ ನಿಷೇಧ ಹೇರಿತ್ತು. ಈ ಕುರಿತು ನಾನು ಮುಗ್ಧ ಎಂದು ಸಾಬೀತುಪಡಿಸುವುದಕ್ಕೆ ಕನೇರಿಯಾ ತೀವ್ರ ಕಾನೂನು ಹೋರಾಟ ನಡೆಸಿದ್ದಾರೆ.2009ರಲ್ಲಿ ದುರ್ಹಾಮ್ ವಿರುದ್ಧ ನಡೆದ ಪಂದ್ಯದಲ್ಲಿ ಎಸೆಕ್ಸ್ ಬೌಲರ್‌ಗೆ ರನ್ ಸೋರಿಕೆ ಮಾಡುವಂತೆ ಕನೇರಿಯಾ ಹುರಿದುಂಬಿಸಿದ್ದರಂತೆ. ಇದರೊಂದಿಗೆ ಕ್ರೀಡಾ ಸ್ಫೂರ್ತಿಯನ್ನು ಗಾಳಿಗೆ ತೂರಿದ ಕುರಿತು ಕನೇರಿಯಾ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆರೋಪ ಮಾಡಿದೆ.
ಕೋಚ್ ಸ್ಥಾನ ಬಿಟ್ಟ ಲಿಲ್ಲಿ
ಸಿಡ್ನಿ: ವೇತನ ಪ್ರಮಾಣದಲ್ಲಿ ಹೆಚ್ಚಳವಾಗದಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಜತೆಗೆ ಮುನಿಸಿಕೊಂಡಿರುವ ಆಸ್ಟ್ರೇಲಿಯಾದ ವೇಗದ ಬೌಲಿಂಗ್ ಕೋಚ್ ಡೆನ್ನಿಸ್ ಲಿಲ್ಲಿ, ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ.
ಅರೆಕಾಲಿಕ ತರಬೇತುದಾರನಾಗಿ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್‌ಗಳಿಗೆ ತರಬೇತಿ ನೀಡುತ್ತಿದ್ದ ಡೆನ್ನಿಸ್ ಲಿಲ್ಲಿ, ಮಿಚ್ಚೆಲ್ ಜಾನ್ಸನ್ ಅವರು ಮತ್ತೆ ತಮ್ಮ ಅದ್ಭುತ ಲಯ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜಾನ್ಸನ್ ಜತೆಗೆ ಲಿಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಜೇಮ್ಸ್ ಫಾಕ್ನರ್‌ಗೂ ಮಾರ್ಗದರ್ಶನ ನೀಡುತ್ತಿದ್ದರು.
ಕ್ರಿಕೆಟ್ ಆಸ್ಟ್ರೇಲಿಯಾ ಜತೆಗಿನ ಒಪ್ಪಂದವನ್ನು ಮುಂದುವರಿಸಲು ಡೆನ್ನಿಸ್ ಲಿಲ್ಲಿ ಅವರು ನಿರಾಕರಿಸಿದ್ದಾರೆ. ಇದುದುರಾದೃಷ್ಟಕರವಾಗಿದೆ. ಆತ ಅತ್ಯುತ್ತಮ ವ್ಯಕ್ತಿಯಾಗಿದ್ದು,ಅವರು ಬೇರೆ ಯಾವುದೇ ರೀತಿಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಜತೆಗೆ ಕೆಲಸ ಮಾಡಲು ಇಚ್ಛಿಸಿದರೆ, ಸದಾ ಅವರಿಗೆ ಮುಕ್ತ ಅವಕಾಶವಿದೆ ಎಂದು ಸಿಎ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ದುಬೈ ಎಲ್ಸ್ ಗಾಲ್ಫ್ ಕ್ಲಬ್‌ನಲ್ಲಿ ಸಚಿನ್‌ಗೆ ಆಜೀವ ಸದಸ್ಯತ್ವ
ದುಬೈ: ವಿಶ್ವದ ಹಲವು ಕ್ರಿಕೆಟ್ ಪಿಚ್‌ಗಳಲ್ಲಿ ತಮ್ಮ ಭಿನ್ನ ಚಾಪನ್ನು ಮೂಡಿಸಿರುವ ಕ್ರಿಕೆಟ್‌ನ ದಂತಕತೆ ಸಚಿನ್ ತೆಂಡೂಲ್ಕರ್ ಅವರಿಗೆ ದುಬೈನ ಎಲ್ಸ್ ಗಾಲ್ಫ್ ಕ್ಲಬ್‌ನಲ್ಲಿ ಆಜೀವ ಸದಸ್ಯತ್ವವನ್ನ ನೀಡಲಾಗಿದೆ. 'ಸಚಿನ್ ಅವರು ವಿಶ್ವದ ಕ್ರೀಡೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಎರಡು ದಶಕಗಳ ಕಾಲ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ವಿಶ್ವ ವಿಖ್ಯಾತರಾಗಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಗೌರವಿಸಲು ಹೆಮ್ಮೆ ಎನಿಸುತ್ತದೆ' ಎಂದು ದುಬೈ ಸ್ಪೋರ್ಟ್ಸ್ ಸಿಟಿಯೊಂದಿಗೆ ಪಾಲುದಾರಿಕೆ ಹೊಂದಿರುವ ಅಬ್ದುಲ್ ರಹಮಾನ್ ಫಲಾಕ್ನಾಜ್ ಅವರು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಖ್ಯಾತ ಗಾಲ್ಫ್ ಆಟಗಾರ ಎರ್ನೀ ಎಲ್ಸ್ ಅವರು ವಿನ್ಯಾಸಗೊಳಿಸಿರುವ ಮನಮೋಹಕ ಗಾಲ್ಫ್ ಕೋರ್ಸ್ ಮತ್ತು ಕ್ಲಬ್, ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ತಂಡದ ಐಕಾನ್ ಆಗಿ ದುಬೈಯಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸಚಿನ್ ಅವರಿಗೆ ಆಜೀವ ಸದಸ್ಯತ್ವ ನೀಡಲು ಹೆಮ್ಮೆಪಟ್ಟಿದಿಯಂತೆ.
ಐಪಿಎಲ್‌ನಿಂದ ಸೌರಭ್ ಹೊರಕ್ಕೆ
ನವದೆಹಲಿ: ಭುಜದ ನೋವಿನಿಂದ ಬಳಲುತ್ತಿರುವ ಜಾರ್ಖಂಡ್‌ನ ಆಟಗಾರ ಸೌರಭ್ ತಿವಾರಿ ಐಪಿಎಲ್ 7ನೇ ಆವೃತ್ತಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಆಗಿರುವ ಸೌರಭ್ ತಿವಾರಿ ಈ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿದ್ದರೂ, ಯಾವುದೇ ಪಂದ್ಯದಲ್ಲಿ ಆಡಿರಲಿಲ್ಲ. ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿದ್ದ ಭುಜದ ನೋವು, ಈಗ ಹೆಚ್ಚಾಗಿರುವ ಪರಿಣಾಮ ಸೌರಭ್ ಸಂಪೂರ್ಣವಾಗಿ ಐಪಿಎಲ್‌ನಿಂದ ಹೊರಗುಳಿಯುವಂತಾಗಿದೆ.
ತಿವಾರಿ ತಮ್ಮ ಎಡಗೈ ಭುಜದ ನೋವಿಗೆ ಒಳಗಾಗಿದ್ದು, ಚೆಂಡನ್ನು ಎಸೆಯುವಾಗ ನೋವು ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಆತ ಮುಂದಿನ ಪಂದ್ಯಗಳಲ್ಲಿ ಭಾಗವಹಿಸುವುದು ಅನುಮಾನವಾಗಿದೆ ಎಂದು ಐಪಿಎಲ್‌ನ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement