ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೋತರೆ ಡೇರ್ ಡೆವಿಲ್ಸ್, ರೈಡರ್ಸ್ ಹಾದಿ ದುರ್ಗಮ

Vishwanath S
Updated On : 7 May 2014, 12:53 pm

ನವದೆಹಲಿ: ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ಕೋಲ್ಕತಾ ನೈಟ್ ರೈಡರ್ಸ್ ತೀರ ಒತ್ತಡದಲ್ಲಿದ್ದು, ಮುಂದಿನ ಪಂದ್ಯದಲ್ಲಿ ಮೈಕೊಡವಿ ಮೇಲೇಳದಿದ್ದಲ್ಲಿ ಮತ್ತಷ್ಟು ಅಪಾಯ ಮೈಮೇಲೆ ಎಳೆದುಕೊಳ್ಳಲಿದೆ.
ಹಾಗೆಯೇ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಡೆಲ್ಲಿ ಡೇರ್‌ಡೆವಿಲ್ಸ್ ಕೂಡ ತನ್ನ ಮುಂದಿನ ಸಮರದಲ್ಲಿ ಸೋಲನುಭವಿಸಿದರೆ, ಹೆಚ್ಚು ಚಿಂತಾಜನಕ ಸ್ಥಿತಿಗೆ ಸಿಲುಕಲಿದೆ.
ಒಟ್ಟಾರೆ, ಸದ್ಯ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ತಂಡಗಳು ಬುಧವಾರ ನಡೆಯಲಿರುವ ಐಪಿಎಲ್ ಟಿ-20 ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ನೋಡಬೇಕು.
ದುಬೈನಲ್ಲಿ ನಡೆದ ಟೂರ್ನಿಯ ಪ್ರಥಮ ಹಂತದ ಮೊದಲ ಸುತ್ತಿನಲ್ಲಿ ಡೆಲ್ಲಿ ತಂಡ 4 ವಿಕೆಟ್‌ಗಳಿಂದ ಜಯಗಳಿಸಿತ್ತು. ಇದೇ ಸ್ಫೂರ್ತಿಯಲ್ಲಿ ನಾಳಿನ ಹೋರಾಟಕ್ಕೆ ಡೇರ್‌ಡೆವಿಲ್ಸ್ ಅಣಿಯಾಗಲಿದ್ದರೆ, ಸೇಡು ತೀರಿಸಿಕೊಳ್ಳುವ ಛಲದೊಂದಿಗೆ ಕೋಲ್ಕತಾ ಅಖಾಡಕ್ಕಿಳಿಯಲಿದೆ.
ಅಹಮದಾಬಾದ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಅಚ್ಚರಿಯ ರೀತಿಯಲ್ಲಿ ಸೋಲನುಭವಿಸಿದ ಕೋಲ್ಕತಾ ಆಟಗಾರರು ಒಂದು ರೀತಿಯಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವಂತಾಗಿದೆ. ಗೆಲ್ಲಲು 171 ರನ್‌ಗಳ ಗುರಿ ಪಡೆದಿದ್ದ ಕೋಲ್ಕತಾ ಅತ್ಯುತ್ತಮ ಆರಂಭ ಪಡೆದಿತ್ತು. ಇನಿಂಗ್ಸ್ ಆರಂಭಿಸಿದ್ದ ನಾಯಕ ಗೌತಮ್ ಗಂಭೀರ್ ಮತ್ತು ರಾಬಿನ್ ಉತ್ತಪ್ಪ ಮೊದಲ ವಿಕೆಟ್‌ಗೆ 14.1 ಓವರುಗಳಲ್ಲಿ 121 ರನ್ ಪೇರಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟು ಸುಲಭ ಗೆಲವಿನತ್ತ ತಂಡವನ್ನು ಮುಖಮಾಡಿ ನಿಲ್ಲಿಸಿದ್ದರು.
ಆದರೆ, ನಂತರದ ವಿಚಿತ್ರ ತಿರುವಿನಲ್ಲಿ ಕೋಲ್ಕತಾಗೆ ದಿಕ್ಕು ತೋಚದಂತಾಯಿತು. ಮೊತ್ತ 121ರಿಂದ 123ಕ್ಕೆ ತಲುಪುವಷ್ಟರಲ್ಲಿ ಅಂದರೆ, ಕೇವಲ 2 ರನ್‌ಗಳ ಅಂತರದಲ್ಲಿ ನೈಟ್ ರೈಡರ್ಸ್ 6 ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಸೋಲು ಮೈಮೇಲೆ ಎಳೆದುಕೊಂಡಿತು.
ಕೋಲ್ಕತಾ ತಂಡದಲ್ಲಿ ಜಾಕ್ ಕಾಲಿಸ್ ಮಾತ್ರ ರನ್ ಗಳಿಕೆಯಲ್ಲಿ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಹಾಗೆಯೇ, ಬೌಲಿಂಗ್ ವಿಭಾಗದಲ್ಲೂ ಸಹ ದಾಳಿಕಾರರು ನಿರೀಕ್ಷಿತ ಮಟ್ಟದಲ್ಲಿ ಪ್ರಭಾವ ಬೀರುತ್ತಿಲ್ಲ. ಒಂದು ತಂಡವಾಗಿ ಕೋಲ್ಕತಾ ಯಶಸ್ಸು ಕಂಡಿಲ್ಲ. ಹಾಗಾಗಿ, ಈವರೆಗೆ ಆಡಿರುವ 7 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಮಾತ್ರ ಸಂಪಾದಿಸಲಿದೆ. ಒಂದು ವೇಳೆ ಗಂಭೀರ್ ಪಡೆ ನಾಳಿನ ಪಂದ್ಯದಲ್ಲಿ ಸೋತಲ್ಲಿ ಅದಕ್ಕೆ ಸೆಮಿಫೈನಲ್ ಹಾದಿ ಕಗ್ಗಂಟಾಗಲಿದೆ.
ಇನ್ನೊಂದೆಡೆ ಡೆಲ್ಲಿ ತಂಡಕ್ಕೂ ಸಹ ಕೋಲ್ಕತಾ ವಿರುದ್ಧ ಗೆಲವು ಅನಿವಾರ್ಯವಾಗಿದೆ. ಇಲ್ಲಿ ಡೆಲ್ಲಿ ಸೋಲನುಭವಿಸಿದರೆ, ಅದರ ನಾಲ್ಕರಘಟ್ಟದ ಹಾದಿ ಕೂಡ ಹೆಚ್ಚು ದುರ್ಗಮವಾಗಲಿದೆ.
ಡೆಲ್ಲಿ ಸಹ ಆಡಿದ 7 ಪಂದ್ಯಗಳಲ್ಲಿ ಕೇವಲ 2 ಜಯ ಮತ್ತು 5ರಲ್ಲಿ ಸೋಲಿನ ಕಹಿ ಅನುಭವಿಸಲಿದೆ. ನಾಯಕ ಕೆವಿನ್ ಪೀಟರ್‌ಸನ್ ಸ್ವತಃ ವೈಫಲ್ಯ ಅನುಭವಿಸುತ್ತಿರುವುದು ದೊಡ್ಡ ತಂಡದ ಪಾಲಿಗೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇನ್ನು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೂಡ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಝಳಪಿಸುತ್ತಿಲ್ಲ.
ಸೋಮವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ 8 ವಿಕೆಟ್‌ಗಳಿಂದ ಆಘಾತಕಾರಿ ಸೋಲು ಕಂಡಿತ್ತು. ಮೊದಲು ಬ್ಯಾಟ್ ಮಾಡಿ 178 ರನ್‌ಗಳಿಸಿದ್ದರೂ ಅದನ್ನು ಕಾಯ್ದುಕೊಂಡು ಬರುವಲ್ಲಿ ಡೆಲ್ಲಿ ಸಫಲವಾಗಲಿಲ್ಲ. ಇದುವರೆಗಿನ ಹಾದಿಯಲ್ಲಿ ಡೆಲ್ಲಿ ಕೂಡ ಸಾಂಘಿಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
ಇಂದಿನ ಪಂದ್ಯಗಳು
ಡೆಲ್ಲಿ ಡೇರ್‌ಡೆವಿಲ್ಸ್-ಕೋಲ್ಕತಾ ನೈಟ್ ರೈಡರ್ಸ್ (ಸ್ಥಳ-ಫಿರೋಜ್ ಷಾ ಕೋಟ್ಲಾ-ದೆಹಲಿ, ಸಮಯ-ಸಂಜೆ 4 ಗಂಟೆ)
ಕಿಂಗ್ಸ್ ಇಲೆವೆನ್ ಪಂಜಾಬ್-ಚೆನ್ನೈ ಸೂಪರ್ ಕಿಂಗ್ಸ್
(ಬಾರಾಬತಿ ಕ್ರೀಡಾಂಗಣ-ಕಟಕ್ ಸಮಯ-ರಾತ್ರಿ 8 ಗಂಟೆ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement