ಭಾರತಕ್ಕೆ ಸೈನಾ, ಶ್ರೀಕಾಂತ್ ಸಾರಥ್ಯ
ನವದೆಹಲಿ: ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಹಾಗೂ ಥೈಲ್ಯಾಂಡ್ ಗ್ರ್ಯಾಂಡ್ ಪ್ರಿಕ್ಸ್ ಚಾಂಪಿಯನ್ ಕೆ.ಶ್ರೀಕಾಂತ್, ಮುಂಬರುವ ಲಿ ನಿಂಗ್ ಬಿಡಬ್ಲ್ಯೂಎಫ್ ಥಾಮಸ್ ಮತ್ತು ಉಬೆರ್ ಕಪ್ ಫೈನಲ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಮೇ 18ರಿಂದ 25ರವರೆಗೆ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಭಾರತದ ವನಿತೆಯರ ವಿಭಾಗಕ್ಕೆ ಸೈನಾ ನೆಹ್ವಾಲ್ ಹಾಗೂ ಪುರುಷರ ವಿಭಾಗಕ್ಕೆ ಕಶ್ಯಪ್ ಸಾರಥ್ಯ ವಹಿಸಲಿದ್ದಾರೆ. ಈ ಪಂದ್ಯಾವಳಿಗೆ ವಿಶ್ವ ರ್ಯಾಂಕಿಂಗ್ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಿದ್ದು, ಎರಡೂ ತಂಡಗಳಲ್ಲಿ ಐದು ಸಿಂಗಲ್ಸ್ ಆಟಗಾರರು ಹಾಗೂ ಐದು ಡಬಲ್ಸ್ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ತಂಡದಲ್ಲಿ ಗರಿಷ್ಠ 10 ಆಟಗಾರರನ್ನು ಆಯ್ಕೆ ಮಾಡಬೇಕಾಗಿದ್ದು, ಬಹುತೇಕ ತಂಡಗಳು ನಾಲ್ಕು ಸಿಂಗಲ್ಸ್ ಆಟಗಾರರು ಹಾಗೂ ಆರು ಡಬಲ್ಸ್ ಆಟಗಾರರನ್ನು ಹೊಂದಿವೆ.
ಮಹಿಳೆಯರ ವಿಭಾಗದಲ್ಲಿ ಸೈನಾ ಜತೆಗೆ ಸಿಂಗಲ್ಸ್ ಆಟಗಾರ್ತಿಯರಾಗಿ ವಿಶ್ವ ಚಾಂಪಿಯನ್ಶಿಪ್ನ ಕಂಚಿನ ಪದಕ ವಿಜೇತೆ ಪಿ.ವಿ ಸಿಂಧು, ರಾಷ್ಟ್ರೀಯ ಕ್ರೀಡಾಕೂಟದ ಚಾಂಪಿಯನ್ ಅರುಂಧತಿ ಪಂತವಾನೆ, 57ನೇ ರ್ಯಾಂಕಿಂಗ್ನ ತನ್ವಿ ಲಾಡ್, 65ನೇ ರ್ಯಾಂಕಿಂಗ್ನ ಪಿ.ಸಿ ತುಳಸಿ ಸ್ಥಾನ ಪಡೆದಿದ್ದಾರೆ. ಇನ್ನು ಡಬಲ್ಸ್ ವಿಭಾಗದಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಮುನ್ನಡೆಸಲಿದ್ದು, ಅಪರ್ಣ ಬಾಲನ್, ಎನ್ ಸಿಕ್ಕಿ ರೆಡ್ಡಿ ಮತ್ತು ಪ್ರಜ್ಞಾ ಗಾಡ್ರೆ ತಂಡದಲ್ಲಿದ್ದಾರೆ.
ಉಬೆರ್ ಕಪ್ ಭಾರತದಲ್ಲಿ ಅತ್ಯಂತ ಪ್ರಮುಖ ಪಂದ್ಯಾವಳಿಯಾಗಿದ್ದು, ಅಲ್ಲಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದೇನೆ. ಪಂದ್ಯಾವಳಿಯಲ್ಲಿ ಹಾದಿ ಉತ್ತಮವಾಗಿದೆ. ಪ್ರತಿ ಪಂದ್ಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ ಎಂದು ಅಶ್ವಿನಿ ಪೊನ್ನಪ್ಪ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಥಾಮಸ್ ಕಪ್ನಲ್ಲಿ ಶ್ರೀಕಾಂತ್ ಜತೆಗೆ ಸಿಂಗಲ್ಸ್ ವಿಭಾಗದಲ್ಲಿ 21ನೇ ರ್ಯಾಂಕಿಂಗ್ನ ಪರುಪಳ್ಳಿ ಕಶ್ಯಪ್, 30ನೇ ರ್ಯಾಂಕಿಂಗ್ನ ಆರ್ಎಮ್ವಿ ಗುರು ಸಾಯಿ ದತ್, 35ನೇ ರ್ಯಾಂಕಿಂಗ್ನ ಸೌರಭ್ ವರ್ಮಾ ಹಾಗೂ 52ನೇ ರ್ಯಾಂಕಿಂಗ್ನ ಸಾಯಿ ಪ್ರಣೀತ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಸಾಯಿ ಪ್ರಣೀತ್ 42ನೇ ರ್ಯಾಂಕಿಂಗ್ನ ಎಚ್.ಎಸ್ ಪ್ರಣಯ್ ಮತ್ತು 49ನೇ ರ್ಯಾಂಕಿಂಗ್ನ ಆನಂದ್ ಪವಾರ್ ಹಿಂದಿಕ್ಕಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದು ಪ್ರತಿಷ್ಠಿತ ಪಂದ್ಯಾವಳಿಯಾಗಿದ್ದು, ಪ್ರತಿ ತಂಡಗಳಿಗೂ ಹಾದಿ ಕಠಿಣವಾಗಿದೆ. ನಾವು ಪಂದ್ಯಾವಳಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತೇವೆ ಎಂಬುದನ್ನು ಹೇಳುವುದು ಕಷ್ಟವಾಗಿದೆ. ಪ್ರತಿ ತಂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲಿದೆ. ಉಬೆರ್ ಕಪ್ನಲ್ಲಿ ನಾವು ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸುವ ವಿಶ್ವಾಸವಿದೆ ಎಂದು ಭಾರತ ತಂಡದ ಕೋಚ್ ಪಿ.ಗೋಪಿಚಂದ್ ತಿಳಿಸಿದ್ದಾರೆ.
ಪುರುಷರ ತಂಡ: ಸಿಂಗಲ್ಸ್- ಕೆ.ಶ್ರೀಕಾಂತ್, ಪಿ.ಕಶ್ಯಪ್, ಆರ್ಎಮ್ವಿ ಗುರು ಸಾಯಿ ದತ್, ಸೌರಭ್ ವರ್ಮಾ, ಸಾಯಿ ಪ್ರಣೀತ್.
ಡಬಲ್ಸ್- ಪ್ರಣವ್ ಜೆರ್ರಿ ಚೋಪ್ರಾ, ಅಕ್ಷಯ್ ದೇವಾಲ್ಕರ್, ಮನು ಅಟ್ರಿ, ಅರುಣ್ ವಿಷ್ಣು, ಬಿ ಸುಮಿತ್ ರೆಡ್ಡಿ.
ಮಹಿಳೆಯರ ತಂಡ: ಸಿಂಗಲ್ಸ್- ಸೈನಾ ನೆಹ್ವಾಲ್, ಪಿ.ವಿ ಸಿಂಧು, ಅರುಂಧತಿ ಪಂತವಾನೆ, ತನ್ವಿ ಲಾಡ್, ಪಿ.ಸಿ ತುಳಸಿ.
ಡಬಲ್ಸ್- ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ, ಅಪರ್ಣ ಬಾಲನ್, ಎನ್.ಸಿಕ್ಕಿ ರೆಡ್ಡಿ, ಪ್ರಜ್ಞಾ ಗಾಡ್ರೆ.