ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬೀದಿಗೆ ಬಿದ್ದ ರಾಜಸ್ಥಾನಮಾನ!

Mainashree
Updated On : 9 May 2014, 1:18 am

ಆತ ಮಹಾನ್ ಕನಸುಗಾರ. ಮಿಗಿಲಾಗಿ ಬುದ್ಧಿವಂತ. ಭಾರತೀಯ ಕ್ರಿಕೆಟ್‌ಗೆ ರಂಗು ತಂದವ. ಅಷ್ಟೇ ಅಲ್ಲ... ಅಕ್ಷರಶಃ ಹಣದ ಹೊಳೆ ಹರಿಸಿದವ. ಅಷ್ಟೆಲ್ಲ ಮಾಡಿದ ನಂತರ ತನ್ನ ಸ್ವಾರ್ಥದ ಕಾರ್ಯಗಳಿಂದ ತಾನೇ ದುಡಿದ ಸಂಸ್ಥೆಯಿಂದ ಬಲಿಯಾಗುವ ಮೂಲಕ ಅಪಮಾನ ಎದುರಿಸದವ. ವರ್ಷಗಟ್ಟಲೇ ಆ ಸಂಸ್ಥೆಯ ದೆಸೆಯಿಂದಾಗಿ ಕೋರ್ಟು, ಕಟಕಟೆ ಸುತ್ತಿದವ. ಹೌದು. ನಿಮ್ಮ ಊಹೆ ಸತ್ಯ. ಆತ ಲಲಿತ್ ಮೋದಿ. ದಿ ಗ್ರೇಟ್ ಶೋ ಮ್ಯಾನ್ ಆಫ್ ಇಂಡಿಯನ್ ಕ್ರಿಕೆಟ್ ಎಂಬ ಅನ್ವರ್ಥನಾಮದೊಂದಿಗೇ ಗುರುತಿಸಲ್ಪಡುವ ಲಲಿತ್, ಸದ್ಯದ ಪರಿಸ್ಥಿತಿಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್.
ನಮಗೆಲ್ಲ ಗೊತ್ತಿದೆ... ಕ್ರೀಡೆ ಹಾಗೂ ರಾಜಕೀಯ ಇವೆರಡೂ ಬೆರೆತರೆ ಅದೆಷ್ಟು ಅಲ್ಲೋಲಕಲ್ಲೋಲ ಆಗುತ್ತೆ ಅಂತ.
ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ (ಬಿಸಿಸಿಐ) ಇದಕ್ಕೊಂದು ನಿದರ್ಶನ. ಹಣ, ಅಧಿಕಾರ, ಅಂತಸ್ತು, ಪ್ರತಿಷ್ಠೆ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಸ್ವಾರ್ಥದಿಂದ ಒಂದು ಸಂಸ್ಥೆಯ ಎಷ್ಟೆಲ್ಲ ದರ್ಪದಿಂದ ಮೆರೆದಾಡಬೇಕೋ ಅಷ್ಟೇ ಅಹಂಕಾರದಿಂದ ಆರ್ಭಟಿಸುತ್ತಿದೆ ಬಿಸಿಸಿಐ.
90ರ ದಶಕದ ಆರಂಭ ಭಾರತೀಯ ಕ್ರಿಕೆಟ್‌ನ ಪಾಲಿಗೆ ರಮ್ಯ ಚೈತ್ರ ಕಾಲ. ನಿಧಾನವಾಗಿ ಇಡೀ ದೇಶವನ್ನು ಜ್ವರದಂತೆ ಆವರಿಸಿಕೊಳ್ಳುತ್ತಿದ್ದ ಕ್ರಿಕೆಟ್ ಬಗ್ಗೆ ಜನ ಅದ್ಯಾವ ಪರಿ ತಲೆಕೆಡಿಸಿಕೊಂಡಿದ್ದರೆಂದರೆ, ಅದನ್ನು ನೋಡಿ ಭಾರತೀಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳಷ್ಟೇ ಅಲ್ಲ, ಇಡೀ ವಿಶ್ವದ ಕ್ರಿಕೆಟ್ ಲೋಕವೇ ಬೆಕ್ಕಸ ಬೆರಗಾಗಿತ್ತು. ಭಾರತ ಕ್ರಿಕೆಟ್ ತಂಡವೂ ಆಗ ಯಶಸ್ಸಿನ ಹಾದಿಯಲ್ಲಿ ಮುಂದೆ ಸಾಗಿತ್ತು. ಸಚಿನ್, ರಾಹುಲ್, ಕುಂಬ್ಳೆ, ದ್ರಾವಿಡ್, ಗಂಗೂಲಿ ಅವರಂಥ ದೈತ್ಯ ಪ್ರತಿಭೆಗಳು ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಛಾಪು ಮೂಡಿಸಲು ಹೊರಟಿದ್ದರು. ಇದಕ್ಕೆ ತಕ್ಕ ಹಾಗೆ ಭಾರತದಲ್ಲಿ ಕ್ರಿಕೆಟ್ ಜನಪ್ರಿಯತೆ ಉಚ್ಛ್ರಾಯ ಮಟ್ಟಕ್ಕೇರಿತ್ತು. ಬಿಸಿಸಿಐಗೆ ಆರ್ಥಿಕ ಸಮೃದ್ಧಿ ಬರುವಂತಾಗಲು ಇದು ಪ್ರಮುಖ ಕಾರಣ.
ಆದರೆ, ಇದಕ್ಕಿಂತಲೂ ಹೆಚ್ಚಾಗಿ, ಆಟಗಾರರಿಂದ ಹಿಡಿದು, ಆಡಳಿತ ಮಂಡಳಿಗಳ ಪದಾಧಿಕಾರಿಗಳು, ಪ್ರಾಯೋಜಕರು... ಹೀಗೆ ಕ್ರಿಕೆಟ್ ಸಹವಾಸ ಮಾಡಿದ ಎಲ್ಲರೂ ನೋಟುಗಳನ್ನೇ ಹಾಸಿಹೊದ್ದು ಮಲಗುವಂತೆ ಮಾಡಿದ್ದು ಲಿಲಿತ್ ಮೋದಿ.  
ಇಷ್ಟೆಲ್ಲ ಮಾಡಿದ ಮೋದಿ, ಐಪಿಎಲ್ ಮುಖ್ಯಸ್ಥರಾಗಿ ನೂರಾರು ಕೋಟಿ ಹಣಕಾಸು ಅವ್ಯವಹಾರ ಮಾಡಿ, 2010ರಲ್ಲಿ ತಾವು ಮಾಡಿದ ಮಹಾನ್ ಪ್ರಮಾದಗಳಿಂದ ತಮ್ಮ ತಲೆಯನ್ನು ತಾವೇ ಬಲೆ ಕೊಟ್ಟಿದ್ದರು. ಆಗಿನಿಂದ ಬಿಸಿಸಿಐನಿಂದ ನಿಷೇಧ ಎದುರಿಸುತ್ತ ಬ್ರಿಟನ್ ಬಿಲದಲ್ಲಿ ಅಡಗಿ ಕುಳಿತಿರುವ ಇಲಿ, ಈಗ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಬೋನ್ ಮೂಲಕ ಎದ್ದು ಕುಳಿತುಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ, ಬಿಸಿಸಿಐ ಮಾತ್ರ ತನ್ನ ಎಂದಿನ ದುರಹಂಕಾರದಲ್ಲೇ ನಡೆಯುತ್ತಿದೆ. ಬಿಸಿಸಿಐ ಮೆಟ್ಟಿಲಲ್ಲ.... ಅಂಗಳಕ್ಕೂ ಬಂದು ನಿಲ್ಲಲು ಮೋದಿಗೆ ಅವಕಾಶ ನೀಡಬಾರದು ಎಂದು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ ಕ್ರಿಕೆಟ್ ಮಂಡಳಿಯನ್ನೇ ವಜಾಗೊಳಿಸಿ ಆದೇಶ ನೀಡಿದೆ. ಬಿಸಿಸಿಐನ ನಡೆ ಈಗ ಮತ್ತೊಂದು ಕಾನೂನು ಸಮರಕ್ಕೆ ನಾಂದಿ ಹಾಡಿದೆ. ಆದರೆ, ತಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿ ಮೋದಿ ಇದ್ದರೆ, ಇತ್ತ, ಮೋದಿಯನ್ನು ಬಗ್ಗಿಸುತ್ತೇವೆ ಎಂಬ ಉತ್ಸಾಹದಲ್ಲಿ ಬಿಸಿಸಿಐ ಇದೆ.
ಆಚೆಯೂ ಕಳ್ಳರು, ಈಚೆಯೂ ಕಳ್ಳರು ನಡುವೆ ಶ್ರೀಮಂತ ಕ್ರೀಡಾ ಸಂಸ್ಥೆ ಸಿಕ್ಕಿ ನಲುಗಿ ನರಮ್ ಆಗಿದೆ. ಹಾಗಾದರೆ ಕಪಟ ಮೂರ್ತಿಗಳಿಂದ ಮಹತ್ವದ ಕ್ರೀಡಾ ಸಂಸ್ಥೆಗೆ ಮುಕ್ತಿ ಇಲ್ಲವೇ ಎಂಬ ಅನುಮಾನ ಕಾಡುತ್ತಿದೆ.



= ಚೇತನ್ ಓ.ಆರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement