ಕೊಡವ ಹಾಕಿ: ಟೈ ಬ್ರೇಕರ್ದ್ದೇ ಆಟ
ವಿರಾಜಪೇಟೆ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ನಡೆಯುತ್ತಿರುವ ತಾತಂಡ ಕಪ್ ಕೊಡವ ಕೌಟುಂಬಿಕ ಹಾಕಿ ಕಪ್-2014ರ ಭಾನುವಾರ ನಡೆದ 19ನೇ ದಿನದ ಪಂದ್ಯದಲ್ಲಿ ಬಿದ್ದಂಡ, ಕುಪ್ಪಂಡ, ನೆಲ್ಲಮಕ್ಕಡ ತಂಡಗಳು ಸೇರಿದಂತೆ ಒಟ್ಟು 8 ತಂಡಗಳು ಜಯಗಳಿಸಿ, ಮುಂದಿನ ಹಂತಕ್ಕೆ ಪ್ರವೇಶ ಪಡೆದವು.
ಭಾನುವಾರ ನಡೆದ ಪಂದ್ಯಗಳಲ್ಲಿ ಮೂರು ಪಂದ್ಯಗಳು ಟೈ ಬ್ರೇಕರ್ನಲ್ಲಿ ಅಂತ್ಯಗೊಂಡಿದ್ದು ದಿನದ ವಿಶೇಷವಾಗಿತ್ತು.
ಮೈದಾನ- 1: ದಿನದ ಆರಂಭದ ಪಂದ್ಯದಲ್ಲಿ ಬಿದ್ದಂಡ ತಂಡವು ಅಪ್ಪಾಚಿರ ತಂಡವನ್ನು 2-0 ಅಂತರದಿಂದ ಮಣಿಸಿತು. ಬಿದ್ದಂಡ ತಂಡದ ಪರವಾಗಿ ಭರತ್ ಮತ್ತು ನರಣ್ ತಲಾ 1 ಗೋಲು ದಾಖಲಿಸಿ ತಂಡಕ್ಕೆ ಜಯ ಒದಗಿಸಿದರು.
2ನೇ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡವು ತೀತಮಾಡ ತಂಡವನ್ನು ಭರ್ಜರಿ 3-0 ಗೋಲುಗಳಿಂದ ಮಣಿಸಿತು. ನೆಲ್ಲಮಕ್ಕಡ ತಂಡದ ಪರವಾಗಿ ತಿಮ್ಮು 2 ಗೋಲು ದಾಖಲಿಸಿದರೆ ಸಾಜಿ 1 ಗೋಲು ದಾಖಲಿಸಿ ತಂಡವನ್ನು ಮುನ್ನಡೆಸಿದರು.
3ನೇ ಪಂದ್ಯದಲ್ಲಿ ಚೇಂದಂಡ ತಂಡವು ಮಚ್ಚಾರಂಡ ತಂಡವನ್ನು 2- 0 ಗೋಲುಗಳಿಂದ ಸೋಲಿಸಿತು. ಚೇಂದಂಡ ತಂಡದ ಪರವಾಗಿ ಸೋನು ಮತ್ತು ಸುಬ್ಬಯ್ಯ ತಲಾ 1 ಗೋಲು ದಾಖಲಿಸಿ, ತಂಡಕ್ಕೆ ಜಯ ತಂದುಕೊಟ್ಟರು.
4ನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಅರೇಡ ಮತ್ತು ಚೇಂದಿರ ತಂಡಗಳು 1- 1 ಸಮಾನ ಗೋಲು ದಾಖಲಿಸಿದವು. ಕೊನೆಯಲ್ಲಿ ಅರೇಡ ತಂಡವು ಟೈ ಬ್ರೇಕರ್ನಲ್ಲಿ 6- 4 ಗೋಲುಗಳಿಂದ ಚೇಂದಿರ ತಂಡಕ್ಕೆ ಸೋಲುಣಿಸಿತು. ಅರೇಡ ತಂಡದ ಪರವಾಗಿ ತಿಮ್ಮಯ್ಯ 1 ಗೋಲು ದಾಖಲಿಸಿ ತಂಡ ಮುನ್ನಡೆಸಿದರೆ, ಚೇಂದಿರ ತಂಡದ ಪುನೀತ್ ಪೊನ್ನಣ್ಣ 1 ಗೋಲು ದಾಖಲಿಸಿ ತಂಡಕ್ಕೆ ಸಮಾಧಾನ ತಂದುಕೊಟ್ಟರು.
ಮೈದಾನ- 2: ಇಲ್ಲಿ ದಿನದ ಆರಂಭಗೊಳಿಸಿದ ಕುಪ್ಪಂಡ (ಕುಂದ) ಹಾಗೂ ಮೂಡೇರ ತಂಡಗಳು ಭರ್ಜರಿ ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದವು. ಎರಡೂ ತಂಡಗಳು ಮೈದಾನದಲ್ಲಿ ಪರಸ್ಪರ ಪೈಪೋಟಿಯಂತೆ 3- 3 ಸಮನಾಂತರ ಗೋಲು ದಾಖಲಿಸಿದವು. ಕುಪ್ಪಂಡ ತಂಡದ ಪರವಾಗಿ ಸೋಮಯ್ಯ 1 ಗೋಲು, ನಾಚಪ್ಪ 2 ಗೋಲು ದಾಖಲಿಸಿದರೆ, ಮೂಡೇರ ತಂಡದ ಪರವಾಗಿ ಮಂಜು 1 ಗೋಲು, ಹರೀಶ್ 2 ಗೋಲು ದಾಖಲಿಸಿದರು.
ಕೊನೆಗೆ ಟೈ ಬ್ರೇಕರ್ನಲ್ಲಿ ಕುಪ್ಪಂಡ ತಂಡವು ಮೂಡೇರ ತಂಡವನ್ನು 5- 4 ಗೋಲುಗಳಿಂದ ಮಣಿಸಿತು.
2ನೇ ಪಂದ್ಯದಲ್ಲಿ ಐಚ್ಚಂಡ ತಂಡವು ಬಲಿಷ್ಠ ಚೌರೀರ ತಂಡವನ್ನು 4- 2 ಗೋಲುಗಳಿಂದ ಸೋಲಿಸಿತು. ಐಚ್ಚಂಡ ತಂಡದ ಪರವಾಗಿ ಲಿಖಿನ್, ರಚನ್, ಮಿಥುನ್ ಹಾಗೂ ಸಚ್ಚಿನ್ ತಲಾ 1 ಗೋಲು ದಾಖಲಿಸಿ ತಂಡಕ್ಕೆ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಚೌರೀರ ತಂಡದ ಪರವಾಗಿ ನಿತಿನ್ 2 ಗೋಲು ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
3ನೇ ಪಂದ್ಯದಲ್ಲಿ ಕರಿನೆರುವಂಡ ತಂಡವು ಕುಟ್ಟಂಡ ತಂಡವನ್ನು ಭರ್ಜರಿ 4- 2 ಅಂತರದಿಂದ ಮಣಿಸಿತು. ಕರಿನೆರುವಂಡ ತಂಡದ ಪರವಾಗಿ ಪ್ರಪಲ್ 2 ಗೋಲು ದಾಖಲಿಸಿ, ತಂಡದ ಉತ್ತಮ ಆಟಗಾರ ಎಂದೆನಿಸಿಕೊಂಡರು. ರತನ್ ಮತ್ತು ವಸಂತ್ ತಲಾ 1 ಗೋಲು ದಾಖಲಿಸಿದರು. ಕುಟ್ಟಂಡ ತಂಡದ ಪರವಾಗಿ ಮಂದಪ್ಪ 2 ಗೋಲು ದಾಖಲಿಸಿದರು.
4ನೇ ಪಂದ್ಯದಲ್ಲಿ ಬಲಿಷ್ಠ ಪರಂದಂಡ ಮತ್ತು ಪಟ್ಟಡ ತಂಡಗಳು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿ 1- 1 ಗೋಲು ದಾಖಲಿಸಿದರು. ಪಟ್ಟಡ ತಂಡದ ಪರವಾಗಿ ಉತ್ತಮ ಆಟಗಾರ ಶರತ್ ಸೋಮಯ್ಯ 1 ಗೋಲು ದಾಖಲಿಸಿದರೆ, ಪರಂದಂಡ ತಂಡದ ಪರವಾಗಿ ಅಯ್ಯಪ್ಪ 1 ಗೋಲು ದಾಖಲಿಸಿದರು. ಕೊನೆಗೆ ಪರಂದಂಡ ತಂಡವು ಟೈಬ್ರೇಕರ್ನಲ್ಲಿ 5- 4 ಗೋಲುಗಳಿಂದ ಪಟ್ಟಡ ತಂಡವನ್ನು ಸೋಲಿಸಿ ಮುನ್ನಡೆ ಸಾಧಿಸಿತು.