ಫುಟ್ಬಾಲ್ ವಿಶ್ವಕಪ್: ರೋನಾಲ್ಡೋ, ಮೆಸ್ಸಿ ಸ್ಟಾರ್ ಆಕರ್ಷಣೆ
ರಿಯೋ ಡಿ ಜನೈರೋ: ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಆರಂಭವಾಗಲು ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಆತಿಥ್ಯ ವಹಿಸಿಕೊಂಡಿರುವ ಬ್ರೆಜಿಲ್ ರಾಷ್ಟ್ರ ಫುಟ್ಬಾಲ್ ದಿಗ್ಗಜರಾದ ಕ್ರಿಸ್ಟಿಯಾನೋ ರೋನಾಲ್ಡೋ ಮತ್ತು ಲಿಯೋನೆಲ್ ಮೆಸ್ಸಿ ಅವರನ್ನು ಸ್ವಾಗತಿಸಲು ಸಿದ್ಧವಾಗಿದೆ.
ಬರುವ ಜೂನ್ 12ರಿಂದ ಆರಂಭವಾಗಿ, ನಾಲ್ಕು ವಾರಗಳ ಕಾಲ ನಡೆಯುವ ವಿಶ್ವದ ಜನಪ್ರೀಯ ಕ್ರೀಡೆಯ ಅತಿ ದೊಡ್ಡ ಪಂದ್ಯಾವಳಿಯಲ್ಲಿ ರೋನಾಲ್ಡೋ ಮತ್ತು ಮೆಸ್ಸಿ ಸ್ಟಾರ್ ಆಕರ್ಷಣೆಯಾಗಿದ್ದಾರೆ.
ಬ್ರೆಜಿಲ್ ಮತ್ತು ಕ್ರೋವೇಷಿಯಾ ನಡುವೆ ನಡೆಯಲಿರುವ ಉದ್ಘಾಟನಾ ಪಂದ್ಯ ಯಶಸ್ವಿಯಾಗಿ ನಡೆಯವ ಮೂಲಕ ಪಂದ್ಯಾವಳಿಗೂ ಮುನ್ನ ಉಂಟಾಗಿದ್ದ ಗೊಂದಲಕ್ಕೆ ತೆರೆಬೀಳಲಿದೆ ಎಂಬ ವಿಶ್ವಾಸವನ್ನು ಸಂಘಟಕರು ಹೊಂದಿದ್ದಾರೆ. ಬಹುದೊಡ್ಡ ಮೊತ್ತದ ಕ್ರೀಡಾಂಗಣಗಳ ನಿರ್ಮಾಣ ಕಾರ್ಯದಲ್ಲಿ ಉಂಟಾದ ಅವಘಡದಿಂದ ನವೆಂಬರ್ನಲ್ಲಿ ಇಬ್ಬರು ಕಾರ್ಮಿರು ಮೃತಪಟ್ಟಿದ್ದರು. ನಂತರ ಗಂಭೀರವಾಗಿ ಗಾಯಗೊಂಡ ಇನ್ನೊಬ್ಬ ಕಾರ್ಮಿಕ ಮಾರ್ಚ್ನಲ್ಲಿ ತೀರಿಕೊಂಡಿದ್ದ. ಒಟ್ಟು 12 ಸ್ಟೇಡಿಯಂಗಳಲ್ಲಿ 6 ಕ್ರೀಡಾಂಗಣಗಳು ಮಾತ್ರ ನಿಗದಿತ ಸಮಯದಲ್ಲಿ ಸಿದ್ಧವಾಗಿವೆ. ಆದರೆ, ಉಳಿದವು ಮೇ 15ರೊಳಗೆ ಸಿದ್ಧವಾಗಲಿವೆ.