ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫೈನಲ್ ಸ್ಥಳಾಂತರ: ಎಂಸಿಎ ಮುನಿಸು

Rashmi Kasaragodu
Updated On : 12 May 2014, 12:51 pm

ಮುಂಬೈ: ಐಪಿಎಲ್ ಆಡಳಿತ ಮಂಡಳಿ ಶನಿವಾರದ ಸಭೆ ಸೇರಿ ಐಪಿಎಲ್ ಫೈನಲ್ ಪಂದ್ಯವನ್ನು ಮುಂಬೈನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಿರುವ ನಿರ್ಧಾರದಿಂದ ಮುಂಬೈ ಕ್ರಿಕೆಟ್ ಸಂಸ್ಥೆ ಬೇಸತ್ತಿದ್ದು, ಐಪಿಎಲ್ಗೆ ಸಂಬಂಧಿಸಿದ ಅಧಿಕಾರವನ್ನು ಐಪಿಎಲ್ ಆಡಳಿತ ಮಂಡಳಿಗೆ ವಾಪಸ್ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಹಾಲಿ ಚಾಂಪಿಯನ್ ಆಗಿರುವ ಹಿನ್ನೆಲೆಯಲ್ಲಿ ಆರಂಭಿಕ ಹಂತದಲ್ಲಿ ವೇಳಾಪಟ್ಟಿ ಸಿದ್ಧಪಡಿಸಿದಾಗ ಫೈನಲ್ ಪಂದ್ಯವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ನಂತರ ಶನಿವಾರದ ಸಭೆಯಲ್ಲಿ ಚರ್ಚೆ ನಡೆಸಿದ ಆಡಳಿತ ಮಂಡಳಿ ಪಂದ್ಯಾವಳಿಯ ಮೊದಲ ಹಂತ ಯುಇಯಲ್ಲಿ ನಡೆದ ಹಿನ್ನೆಲೆಯಲ್ಲಿ ಪ್ಲೇ ಆಫ್ ಪಂದ್ಯಗಳನ್ನು ಬೇರೆ ಸ್ಥಳಗಳಲ್ಲಿ ನಡೆಸಲು ನಿರ್ಧರಿಸಿತು. ಹಾಗಾಗಿ ಫೈನಲ್ ಪಂದ್ಯವನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಿತು.
ನಮಗೆ ನೀಡಿದ್ದ ಎಲ್ಲಾ ಅಧಿಕಾರವನ್ನು ಹಿಂತಿರುಗಿಸಿದ್ದೇವೆ. ಎಂಸಿಎನ ಆಡಳಿತ ಮಂಡಳಿ, ವ್ಯವಸ್ಥಾಪಕ ಸಮಿತಿ ಸದಸ್ಯರು ಮತ್ತು ಪಂದ್ಯಾವಳಿಯಲ್ಲಿ ಕೈಜೋಡಿಸಿದ್ದ ಸ್ವಯಂ ಸೇವಕರು. ಪಂದ್ಯಾವಳಿಯ ಆಯೋಜನೆಗೆ ಸಾಕಷ್ಟು ದುಡಿದಿದ್ದು, ಐಪಿಎಲ್ ಆಡಳಿತ ಮಂಡಳಿ ನಿರ್ಧಾರದಿಂದ ಸಾಕಷ್ಟು ನೋವಾಗಿದೆ. ಫೈನಲ್ ಪಂದ್ಯವನ್ನು ಸರಿಯಾದ ಕಾರಣ ನೀಡದೇ ಸ್ಥಳಾಂತರ ಮಾಡಿರುವುದು ಬೇಸರ ತಂದಿದೆ ಎಂದು ಎಂಸಿಎನ ಮಾಧ್ಯಮ ವ್ಯವಸ್ಥಾಪಕ ಹಾಗೂ ಎಂಸಿಎನ ಖಜಾಂಚಿ ವಿನೋದ್ ದೇಶಪಾಂಡೆ ತಿಳಿಸಿದ್ದಾರೆ.
ಟೆಲಿ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ ಐಪಿಎಲ್ ಆಡಳಿತ ಮಂಡಳಿ, ಜೂನ್ 1ರಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲು ನಿರ್ಧರಿಸಿತು.
ಇನ್ನು ಉಳಿದಂತೆ ಮೇ 28ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯವನ್ನು ಮುಂಬೈನ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಹಾಗೂ ಮೇ30ರಂದು ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಇನ್ನು ಲೀಗ್ ಹಂತದಲ್ಲಿ ಮೇ 23 ಹಾಗೂ 25ರಂದು ಮುಂಬೈ ಇಂಡಿಯನ್ಸ್ ತಂಡದ ಪಂದ್ಯಗಳು ವಾಂಖೆಡೆಯಲ್ಲಿ ನಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement