ಮುಂದುವರಿದ ಹ್ಯಾಮಿಲ್ಟನ್ ಹವಾ
ಬಾರ್ಸಿಲೋನಾ: ಪ್ರಸಕ್ತ ಸಾಲಿನಲ್ಲಿ ತಮ್ಮ ಅತ್ಯುತ್ತಮ ಲಯ ಮುಂದುವರಿಸಿರುರವ ಮರ್ಸಿಡೀಸ್ ಚಾಲಕ ಲೂಯಿಸ್ ಹ್ಯಾಮಿಸಲ್ಟನ್, ಸ್ಪ್ಯಾನಿಷ್ ಗ್ರ್ಯಾನ್ ಪ್ರೀ ಫಾರ್ಮುಲಾ ಒನ್ ರೇಸ್ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಭಾನುವಾರ ನಡೆದ ರೇಸ್ನಲ್ಲಿ ಮೇಲುಗೈ ಸಾಧಿಸಿದ ಹ್ಯಾಮಿಲ್ಟನ್, ಈ ಋತುವಿನಲ್ಲಿ ಸತತ ನಾಲ್ಕನೇ ರೇಸ್ ಅನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಪ್ರಶಸ್ತಿ ಮುಡಿಗೇರಿಸುವ ಹಾದಿಯಲ್ಲಿ ತಮ್ಮ ಅಂತರವನ್ನು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ತಂಡದ ಸಹ ಚಾಲಕ ನಿಕೊ ರೋಸ್ಬರ್ಗ್ ಅವರಿಗಿಂತ ಕೇವಲ 0.6 ಸೆಕೆಂಡ್ಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ ಹ್ಯಾಮಿಲ್ಟನ್ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಈ ಗೆಲವು ಹ್ಯಾಮಿಲ್ಟನ್ ಅವರ ಮೊದಲ ಸ್ಪ್ಯಾನಿಷ್ ರೇಸ್ ಹಾಗೂ ಒಟ್ಟಾರೆ 26ನೇ ಗೆಲವು ಇದಾಗಿದೆ. ಇನ್ನು ರೋಸ್ಬರ್ಗ್ ಸಹ ಈ ರೇಸ್ ಮೂಲಕ 100 ಅಂಕಗಳ ಗಡಿಯನ್ನು ದಾಟುವಲ್ಲಿ ಯಶಸ್ವಿಯಾದರು. ರೆಡ್ ಬುಲ್ ಚಾಲಕ ಸೆಬಾಸ್ಟಿಯನ್ ವೆಟಲ್ ಐದನೇ ಸ್ಥಾನ ಪಡೆದರು. ಇನ್ನು ಸಹರಾ ಫೋರ್ಸ್ ಇಂಡಿಯಾದ ಸೆರ್ಗಿಯೊ ಪೆರೆಜ್ ಹಾಗೂ ನಿಕೊ ಹಲ್ಕನ್ಬರ್ಗ್ ಅಗ್ರ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪೆರೆಜ್ 9ನೇ ಸ್ಥಾನ ಪಡೆದರೆ, ನಿಕೊ 10ನೇ ಸ್ಥಾನ ಪಡೆದರು. ಈ ಮೂಲಕ ಸಹರಾ ಫೋರ್ಸ್ ಇಂಡಿಯಾ ತಂಡಗಳ ವಿಭಾಗದಲ್ಲಿ 3 ಅಂಕ ಪಡೆಯಿತಾದರೂ, ಪ್ರಶಸ್ತಿ ರೇಸ್ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ.