ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಬಾಂಗ್ಲಾ ವಿರುದ್ಧ ಏಕದಿನ ಸರಣಿ
ಮುಂಬೈ: ಎರಡು ತಿಂಗಳಿಗೂ ಅಧಿಕ ಕಾಲ ನಡೆಯುವ ಇಂಗ್ಲೆಂಡ್ ಪ್ರವಾಸ ಬೆಳೆಸುವ ಮುನ್ನ, ಟೀಂ ಇಂಡಿಯಾ ಬರುವ ತಿಂಗಳು ಬಾಂಗ್ಲಾದೇಶದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸುವುದನ್ನು ಬಿಸಿಸಿಐ ಖಚಿತಪಡಿಸಿದೆ.
'ಐಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ನಮ್ಮ ಆಟಗಾರರಿಗೆ, ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಕೊಂಚ ಅಭ್ಯಾಸ ನೀಡುವ ಅಗತ್ಯವಿದೆ. ಅಲ್ಲದೆ, ಎರಡೂವರೆ ತಿಂಗಳ ದೀರ್ಘ ಕಾಲದ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಸಮಯವಿರುವ ಹಿನ್ನೆಲೆಯಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ' ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತಿಳಿಸಿದ್ದಾರೆ. 'ಬಾಂಗ್ಲಾದೇಶದ ಸರಣಿಯಲ್ಲಿ ನಾವು ಕೆಲ ಹೊಸ ಆಟಗಾರರಿಗೆ ಅವಕಾಶ ನೀಡಲಿದ್ದೇವೆ. ಇದಕ್ಕಿಂತ ಹೆಚ್ಚಿಗೆ ನಾನು ಏನನ್ನೂ ಹೇಳಲಾರೆ' ಎಂದು ಬಾಂಗ್ಲಾ ವಿರುದ್ಧದ ಸರಣಿ, ಇಂಗ್ಲೆಂಡ್ಗೆ ತೆರಳುವ ಭಾರತ ತಂಡಕ್ಕೆ ಯಾವ ರೀತಿ ನೆರವಾಗಲಿದೆ ಎಂಬ ಪ್ರಶ್ನೆಗೆ ಅವರು ಜಾರಿಕೊಳ್ಳುವ ನಿಟ್ಟಿನಲ್ಲಿ ಪುಟ್ಟ ಉತ್ತರ ನೀಡಿದರು. ಧೋನಿ, ಕೊಹ್ಲಿಗೆ ವಿಶ್ರಾಂತಿ: ಬಾಂಗ್ಲಾದೇಶದ ಪಂದ್ಯಾವಳಿಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಉಪನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ, ಧೋನಿ ಮತ್ತು ಕೊಹ್ಲಿ ಅವರು ತಾವೇ ವಿಶ್ರಾಂತಿ ಬಯಸಿದ್ದಾರೆ ಎಂದು ಸಹ ಮೂಲಗಳು ತಿಳಿಸಿವೆ.
ಧೋನಿ ಈ ಹಿಂದೆ ಭಾರತ ತಂಡ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಪ್ರವಾಸ ಮಾಡಿದ ನಂತರ, ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾ ಕಪ್ನಿಂದಲೂ ಹೊರಗುಳಿದಿದ್ದರು. ಆದರೆ, ಏಷ್ಯಾ ಕಪ್ ನಂತರ ನಡೆದ ವಿಶ್ವ ಟಿ20 ಚಾಂಪಿಯನ್ಶಿಪ್ನಲ್ಲಿ ಧೋನಿ ಮತ್ತು ಕೊಹ್ಲಿ ಇಬ್ಬರೂ ಭಾಗವಹಿಸಿದ್ದರು. ಭಾರತ ತಂಡ ಜೂನ್ ತಿಂಗಳಾಂತ್ಯದಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಅಲ್ಲದೆ, 5 ಟೆಸ್ಟ್ ಪಂದ್ಯಗಳು ಸೇರಿದಂತೆ ಏಕದಿನ ಹಾಗೂ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದೆ. 1959ರ ನಂತರ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಇದೇ ಮೊದಲ ಬಾರಿಗೆ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಗವಹಿಸುತ್ತಿದೆ.