ಎರಡನೇ ಸ್ಥಾನಕ್ಕೆ ಸಾನಿಯಾ-ಕಾರಾ
ನವದೆಹಲಿ: ಪ್ರಸಕ್ತ ಸಾಲಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಸಾನಿಯಾ ಮಿರ್ಜಾ ಹಾಗೂ ಜಿಂಬಾಬ್ವೆಯ ಜತೆಗಾರ್ತಿ ಕಾರಾ ಬ್ಲ್ಯಾಕ್ ಜೋಡಿಯು ಡಬ್ಲ್ಯೂಟಿಎ ರ್ಯಾಂಕಿಂಗ್ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದೆ.
ಸಾನಿಯಾ ಹಾಗೂ ಕಾರಾ ಜೋಡಿಯು ಪೋರ್ಚುಗಲ್ ಓಪನ್ ಟೆನಿಸ್ ಟೂರ್ನಿಯನ್ನು ಗೆದ್ದುಕೊಂಡಿದ್ದು, ನಂತರ ಕಳೆದವಾರ ನಡೆದ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ಫೈನಲ್ ಹಂತದವರೆಗೂ ಪ್ರವೇಶಿಸಿದ್ದರು. ಈಗ ಒಟ್ಟು 2,462 ಅಂಕಗಳನ್ನು ಪಡೆದಿರುವ ಸಾನಿಯಾ ಜೋಡಿ ಎರಡನೇ ಸ್ಥಾನದಲ್ಲಿದೆ. ಇನ್ನು ಇಟಲಿಯ ರೊಬರ್ಟಾ ವಿನ್ಸಿ ಹಾಗೂ ಸರಾ ಎರ್ರಾನಿ ಜೋಡಿ 4,430 ಅಂಕಗಳನ್ನು ಪಡೆಯುವ ಮೂಲಕ ಬೃಹತ್ ಅಂತರದಲ್ಲಿ ಅಗ್ರಸ್ಥಾನ ಖಚಿತಪಡಿಸಿಕೊಂಡಿದೆ.