ಗೆದ್ದರಷ್ಟೇ ಆರ್ಸಿಬಿ ಆಸೆ ಜೀವಂತ
ಸೋಲಿನ ಸರಪಳಿಯನ್ನು ಬಿಡಿಸಿಕೊಂಡು ಹೊರಬರುವಲ್ಲಿ ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು...
ಬೆಂಗಳೂರು: ಸೋಲಿನ ಸರಪಳಿಯನ್ನು ಬಿಡಿಸಿಕೊಂಡು ಹೊರಬರುವಲ್ಲಿ ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಪಂದ್ಯಾವಳಿಯಿಂದ ಹೊರ ಬೀಳುವ ಒತ್ತಡದಲ್ಲಿದೆ. ಪಂದ್ಯಾವಳಿಯಲ್ಲಿ ತನ್ನ ಹೋರಾಟವನ್ನು ಜೀವಂತವಾಗಿರಿಸಿಕೊಳ್ಳಲು ವಿರಾಟ್ ಕೊಹ್ಲಿ ಪಡೆ ಮುಂದಿನ ಎಲ್ಲಾ ಪಂದ್ಯಗಳಲ್ಲೂ ಗೆಲವು ದಾಖಲಿಸಬೇಕಾದ ಅಗತ್ಯದಲ್ಲಿದೆ.
ಈ ಪರಿಸ್ಥಿತಿಯಲ್ಲಿರುವ ಆರ್ಸಿಬಿ ತಂಡ ಮಂಗಳವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ತಂಡವನ್ನು ಎದುರಿಸಲಿದ್ದು, ತಂಡ ಗೆಲವಿನ ಹಾದಿಗೆ ಮರಳುವುದೇ ಎಂಬ ಪ್ರಶ್ನೆ ಮೂಡಿದೆ.
ಆರ್ಸಿಬಿ ಪ್ಲೇ ಆಫ್ ಹಾದಿ ಕಠಿಣ: ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ ಆರ್ಸಿಬಿ ತಂಡ ಕೇವಲ 3ರಲ್ಲಿ ಗೆಲವು ದಾಖಲಿಸಿದ್ದು, 6 ಪಂದ್ಯಗಳಲ್ಲಿ ಸೋಲನುಭವಿಸಿ 6 ಅಂಕಗಳನ್ನು ಪಡೆಯುವ ಮೂಲಕ 6ನೇ ಸ್ಥಾನದಲ್ಲಿದೆ.
ಐಪಿಎಲ್ನಲ್ಲಿ ಆರ್ಸಿಬಿ ತಂಡ ಪ್ಲೇ ಆಫ್ಗೆ ತಲುಪಬೇಕಾದರೆ ಕನಿಷ್ಠ 16 ಅಂಕಗಳನ್ನು ಹೊಂದಿರಬೇಕು. ಅಲ್ಲಿಗೆ ಕೊಹ್ಲಿ ಪಡೆ ಉಳಿದಿರುವ 5 ಪಂದ್ಯಗಳಲ್ಲೂ ಗೆಲವು ದಾಖಲಿಸಬೇಕಾಗಿದೆ. ಈ ಐದು ಪಂದ್ಯಗಳಲ್ಲಿ ಆರ್ಸಿಬಿ ತಂಡ ಡೆಲ್ಲಿ, ಸನ್ರೈಸರ್ಸ್, ಕೋಲ್ಕತಾ ವಿರುದ್ಧ ತಲಾ 1 ಪಂದ್ಯವನ್ನಾಡಬೇಕಿದ್ದು, ಸಿಎಸ್ಕೆ ವಿರುದ್ಧ ಎರಡು ಪಂದ್ಯಗಳನ್ನಾಡಬೇಕಿದೆ.
ಹಾಗಾಗಿ ಆರ್ಸಿಬಿ ತಂಡದ ಪ್ಲೇ ಆಫ್ ಹಾದಿ ಕಠಿಣವಾಗಿದ್ದು, ತಂಡ ಮುಂದಿನ ಎಲ್ಲಾ ಪಂದ್ಯದಲ್ಲೂ ಇಡುವ ಪ್ರತಿ ಹೆಜ್ಜೆ ತಂಡದ ಪಾಲಿಗೆ ಮಹತ್ವದ ಪಾತ್ರ ವಹಿಸಲಿದೆ.
ಗೆಲವಿನ ಲಯ ಕಾಣಲು ಉತ್ತಮ ಅವಕಾಶ: ತಂಡದಲ್ಲಿ ದೈತ್ಯ ಬ್ಯಾಟ್ಸ್ಮನ್ಗಳನ್ನು ಹೊಂದಿದ್ದರೂ ಸತತ ಸೋಲಿನಿಂದ ಕಂಗೆಟ್ಟಿರುವ ಆರ್ಸಿಬಿ ತಂಡಕ್ಕೆ ಗೆಲವಿನ ಅಗತ್ಯವಿದೆ. ಒಂದು ಪಂದ್ಯದಲ್ಲಿ ಗೆಲವು ದಾಖಲಿಸಿ ಹೊಸ ಸ್ಫೂರ್ತಿಯ ಹುಡುಕಾಟದಲ್ಲಿದೆ.
ಇತ್ತ ಡೆಲ್ಲಿ ತಂಡ ಈ ಬಾರಿಯೂ ಕಳಪೆ ಪ್ರದರ್ಶನ ಮುಂದುವರಿಸಿದ್ದು, ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನದ ಕೊರತೆಯನ್ನು ಅನುಭವಿಸುತ್ತಿದೆ. ಹಾಗಾಗಿ ಆರ್ಸಿಬಿ ತಂಡ ಈ ಪಂದ್ಯದಲ್ಲಿ ಗೆಲವು ದಾಖಲಿಸಲು ಉತ್ತಮ ಅವಕಾಶ ದೊರೆತಿದೆ.
ಸ್ಫೂರ್ತಿ ತುಂಬಿದ ಯುವಿ ಆಟ: ತವರಿನ ಅಂಗಣದಲ್ಲಿ ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲು ಆರ್ಸಿಬಿ ತಂಡಕ್ಕೆ ಸಿಡಿಲು ಬಡಿದಂತಾಗಿದೆಯಾದರೂ, ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ಯುವರಾಜ್ ಸಿಂಗ್ ಆಟ, ತಂಡದಲ್ಲಿ ಹೊಸ ಉಮ್ಮಸ್ಸು ತುಂಬುವುದರಲ್ಲಿ ಅನುಮಾನವಿಲ್ಲ.
ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಪ್ರಶ್ನೆ ಮೂಡಿದಾಗ ತಮ್ಮ ಆಲ್ರೌಂಡ್ ಪ್ರದರ್ಶನ ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದ ಯುವರಾಜ್ ಸಿಂಗ್, ಮುಂದಿನ ಪಂದ್ಯಗಳಲ್ಲೂ ಅದೇ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಇನ್ನು ಎಬಿ ಡಿವಿಲಿಯರ್ಸ್ ಉತ್ತಮ ಲಯದಲ್ಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಯ್ಲ್ರಿಂದ ನಿರೀಕ್ಷಿತ ಮಟ್ಟದಲ್ಲಿ ರನ್ ಹರಿಯಲಾರಂಭಿಸಿದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಪ್ರವಾಹ ಖಚಿತ.
ಇನ್ನು ಕಳೆದ ಪಂದ್ಯದಲ್ಲಿ ಅಂತಿಮ ಓವರ್ನಲ್ಲಿ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಆರ್ಸಿಬಿ ಬೌಲರ್ಗಳು ಈ ಪಂದ್ಯದಲ್ಲಿ ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಿದೆ.
ಒತ್ತಡದಲ್ಲಿ ಡೆವಿಲ್ಸ್: ಕಳೆದ ಆವೃತ್ತಿಯಲ್ಲಿ ಕಡೇಯ ಸ್ಥಾನ ಪಡೆದಿದ್ದ ಡೆಲ್ಲಿ ಡೇರ್ಡೆವಿಲ್ಸ್ ಈ ಬಾರಿ ಹೊಸ ರೂಪ ಪಡೆದು ಕಣಕ್ಕಿಳಿಯಿತಾದರೂ, ಫಲಿತಾಂಶ ಮಾತ್ರ ಬದಲಾಗಲಿಲ್ಲ. ಏಕೆಂದರೆ ಪ್ರಸಕ್ತ ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆಲವು ಹಾಗೂ 7ರಲ್ಲಿ ಸೋಲನುಭವಿಸಿ ಹೀನಾಯ ಸ್ಥಿತಿಯಲ್ಲಿರುವ ಡೆವಿಲ್ಸ್ ಸದ್ಯಕ್ಕೆ ಕಡೇಯ ಸ್ಥಾನದಲ್ಲಿದೆ.
ಟೂರ್ನಿಯ ಆರಂಭದಲ್ಲಿ ತಂಡದ ಪ್ರಮುಖ ಆಟಗಾರ ಕೆವಿನ್ ಪೀಟರ್ಸನ್ ಅವರ ಅನುಪಸ್ಥಿತಿಯನ್ನು ಎದುರಿಸಿ, ಸೋಲಿನ ಹಾದಿಯಲ್ಲಿ ಸಾಗಿದ್ದ ಡೆವಿಲ್ಸ್ ಪಡೆ, ನಂತರದ ಪಂದ್ಯಗಳಲ್ಲೂ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.
ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿದ್ದರೂ, ತಂಡದ ಆಟಗಾರರು ನಿಯಂತ್ರಣ ಸಾಧಿಸುತ್ತಿಲ್ಲ. ಹಾಗಾಗಿ ತಂಡ ಪಂದ್ಯಾವಳಿಯಲ್ಲಿ ಎಡವಿದೆ.
ದಿನೇಶ್ ಕಾರ್ತಿಕ್, ಖಿಂಟಾನ್ ಡಿ ಕಾಕ್, ರಾಸ್ ಟೇಲರ್, ಮುರಳಿ ವಿಜಯ್, ಕೆವಿನ್ ಪೀಟರ್ಸನ್, ಜೆ.ಪಿ ಡುಮಿನಿ, ಮನೋಜ್ ತಿವಾರಿಯಂತಹ ಆಟಗಾರರು ತಂಡದಲ್ಲಿದ್ದರೂ ಬ್ಯಾಟಿಂಗ್ ವಿಭಾಗ ವೈಫಲ್ಯ ಅನುಭವಿಸಿದೆ. ಇನ್ನು ಬೌಲಿಂಗ್ನಲ್ಲಿ ಜೈದೇವ್ ಉನದ್ಕತ್, ನಾಥನ್ ಕೌಲ್ಟರ್ ನೀಲ್, ವೇಯ್ನ್ ಪಾರ್ನೆಲ್, ಮೊಹಮದ್ ಶಮಿ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತಿಲ್ಲ. ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.
ಒಟ್ಟಿನಲ್ಲಿ ಸೋಲಿನ ಸುಳಿಯಲ್ಲಿ ನಲುಗಿರುವ ಎರಡು ತಂಡಗಳು ಗೆಲವಿನ ಲಯ ಕಂಡುಕೊಳ್ಳಲು ಹೋರಾಟ ನಡೆಸುತ್ತಿರುವುದು, ನಿಜವಾಗಲೂ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಗೇಯ್ಲ್ ಅಲಭ್ಯ?
ಸತತ ಹಿನ್ನಡೆ ಅನುಭವಿಸುತ್ತಿರುವ ಆರ್ಸಿಬಿ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಪ್ರಮುಖ ಬ್ಯಾಟ್ಸ್ಮನ್ ಕ್ರಿಸ್ ಗೇಯ್ಲ್ ಅವರ ಗಾಯದ ಸಮಸ್ಯೆ ಹೆಚ್ಚಾಗಿದ್ದು, ಐಪಿಎಲ್ನ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಪಂದ್ಯಾವಳಿಯ ಆರಂಭದಲ್ಲಿ ಗಾಯದ ಸಮಸ್ಯೆಯಿಂದ ಬಳಲಿದ್ದ ಗೇಯ್ಲ್, ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದರು. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೆ ಭುಜದ ನೋವಿನ ಸಮಸ್ಯೆಗೆ ಸಿಲುಕಿದ್ದು, ಪಂದ್ಯಾವಳಿಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಗೇಯ್ಲ್ ಅವರನ್ನು ಅಸ್ಪತ್ರೆಗೆ ಕರೆದೊಯ್ದು, ಎಕ್ಸ್ರೇ ಅನ್ನು ಮಾಡಿಸಲಾಗಿದೆ ಎಂಬ ಮಾತುಗಳು ಹರಿದಾಡಿದೆ.
ಸೋಮಶೇಖರ ಪಿ. ಭದ್ರಾವತಿ