ಪೇಸ್ ಬೆಂಬಲಕ್ಕೆ ನಿಂತ ಭೂಪತಿ
ನವದೆಹಲಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ರ್ಹೆಯಾ ಅವರೊಂದಿಗೆ ಕೋರ್ಟ್ ಮೆಟ್ಟಿಲೇರಿರುವ ಖ್ಯಾತ ಟೆನಿಸ್ ತಾರೆ ಲಿಯಾಂಡರ್ ಪೇಸ್ ಅವರಿಗೆ, ಮಾಜಿ ಜತೆಯಾಟಗಾರ ಮಹೇಶ್ ಭೂಪತಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಟೆನಿಸ್ನಲ್ಲಿ ಮಾಜಿ ಡಬಲ್ಸ್ ಜೋಡಿಯಾಗಿರುವ ಪೇಸ್ ಮತ್ತು ಭೂಪತಿ ನಡುವೆ ಮುನಿಸಿದೆ. ಆದಾಗ್ಯೂ, ಪೇಸ್ ಮತ್ತು ಅವರ ಮಾಜಿ ಪತ್ನಿ ನಡುವೆ ಉಂಟಾಗಿರುವ ವಿವಾದದಲ್ಲಿ, ಭೂಪತಿ ಅವರು ಪೇಸ್ ಪರವಾಗಿ ಮಾತನಾಡಿದ್ದಾರೆ. ಅಲ್ಲದೆ, ರ್ಹೆಯಾ ಪಿಳ್ಳೈ ಮಾಡಿರುವ ಆರೋಪಗಳನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.
8 ವರ್ಷದ ಪುತ್ರಿ ಐಯನಾನನ್ನು ತಮ್ಮ ಪತ್ನಿ ಅಪಹರಿಸುವ ಕುರಿತು ಬೆದರಿಕೆ ಒಡ್ಡಿರುವುದಾಗಿ, ಪೇಸ್ ಇತ್ತೀಚೆಗಷ್ಟೇ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಘಟನೆಯ ಬೆನ್ನಲ್ಲೇ ನನಗೆ ಹಿಂಸೆ ನೀಡಲಾಯಿತು ಮತ್ತು ಬೆದರಿಕೆ ಹಾಕಲಾಯಿತು ರ್ಹೆಯಾ ದೂರು ದಾಖಲಿಸಿದ್ದಾರೆ.
'ಲಿಯಾಂಡರ್ ಪೇಸ್ ಅವರೊಂದಿಗೆ ನಾನು ಹೆಚ್ಚಿನ ಸಮಯ ಕಳೆದಿದ್ದೇನೆ. ಪತ್ನಿಗೇ ಹಿಂಸೆ ನೀಡುವಂತಹ ಸಣ್ಣತನ ತೋರುವವರು ಅವರಲ್ಲ. ಅಲ್ಲದೆ, ಕುಟುಂಬದಲ್ಲಿ ಕಲಹ ಉಂಟಾಗುವಂತೆ ನೋಡಿಕೊಳ್ಳುವಂತವರೂ ಅಲ್ಲ. ಒಂದು ವೇಳೆ ಆತನಿಗೆ ಸಿಟ್ಟು ಬಂದರೆ, ಮುನಿಸಿಕೊಂಡರೆ, ಕೊಠಡಿಯೊಳಗೆ ಹೋಗಿ ಕುಳಿತುಬಿಡುತ್ತಿದ್ದರು. ಹೀಗಾಗಿ ಅವರ ಪತ್ನಿ ಮಾಡಿದ ಆರೋಪಗಳು ಲಿಯಾಂಡರ್ ಪೇಸ್ ಅವರ ವ್ಯಕ್ತಿತ್ವಕ್ಕೆ ಯಾವತ್ತೂ ಹೊಂದಲಾರುವು' ಎಂದಿದ್ದಾರೆ ಭೂಪತಿ.
'ಮೊದಲ ದಿನದಿಂದ ಹಿಂಸೆ'
ಲಿಯಾಂಡರ್ ಪೇಸ್ ಅವರೊಂದಿಗೆ ಜೊತೆಗೂಡಿದ ಮೊದಲ ದಿನದಿಂದಲೇ ನನಗೆ ಹಿಂಸೆ ನೀಡಿದ್ದಾರೆ ಎಂದು ಅವರ ಪತ್ನಿ ರ್ಹೆಯಾ ದೂರಿದ್ದಾರೆ.
ಅಲ್ಲದೆ, ನನ್ನ ಪುತ್ರಿಯೊಂದಿಗೆ ಹುಟ್ಟುಹಬ್ಬದ ಸಂಭ್ರಮಕ್ಕೆ ಹೊರ ಹೋಗಿದ್ದೆ. ಆಗ ಮನೆಯಲ್ಲಿದ್ದ ನನ್ನ ಎಲ್ಲ ಬಟ್ಟೆ ಬರೆಗಳನ್ನು ಪೇಸ್ ಮತ್ತು ಅವರ ತಾಯಿ ಬಾಕ್ಸೊಂದರಲ್ಲಿ ಹಾಕಿ ಹೊರಗೆ ಎಸೆದು, ಮನೆಗೆ ಬೀಗ ಜಡಿದಿದ್ದರು. ಅಲ್ಲದೆ, ನಾನು ಹೃಷಿಕೇಷಕ್ಕೆ ಹೋದಾಗ, ನನ್ನ ಕಂಪ್ಯೂಟರ್ಗಳನ್ನು ಹ್ಯಾಕ್ ಮಾಡಿ, ಕೆಲ ಸೂಕ್ಷ್ಮ ಈ ಮೇಲ್ಗಳನ್ನು ಪರಿಶೀಲಿಸಿದ್ದಾರೆ. ಇದು ಹಿಂಸೆಯಲ್ಲದೆ ಇನ್ನೇನು?
'ಪೇಸ್ ಸುಳ್ಳು ಹೇಳಿರುವುದು ನನ್ನನ್ನು ನೋಯಿಸಿದೆ. ಆದರೆ, ನನ್ನ ಸತ್ಯ ಅವರನ್ನು ಕೊಲ್ಲಲಿದೆ' ಎಂದು ರ್ಹೆಯಾ ಹೇಳಿದ್ದಾರೆ. ನಾನು ಪೇಸ್ ಅವರಿಗೆ ವಿಚ್ಛೇದನ ನೀಡಲು ಸಿದ್ಧವಿದ್ದೇನೆ. ಆದರೆ, ನನ್ನ ಮಗಳ ಭವಿಷ್ಯಕ್ಕೆ ಅವರು ನಿಧಿಯನ್ನು ಖಚಿತಪಡಿಸಬೇಕು' ಎಂದಿದ್ದಾರೆ.