ಕರಿನೆರವಂಡ ಭರ್ಜರಿ ಗೆಲವು
ವಿರಾಜಪೇಟೆ: ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ತಾತಂಡ ಹಾಕಿನಮ್ಮೆ 2014 ಹಾಕಿ ಪಂದ್ಯಾವಳಿಯಲ್ಲಿ ಮಾಜಿ ಚಾಂಪಿಯನ್ ತಂಡಗಳಾದ ಪಳಂಗಂಡ, ಕರಿನೆರವಂಡ, ಕಲಿಯಂಡ ಮತ್ತು ಕುಲ್ಲೆಟ್ಟೀರ ಎದುರಾಳಿ ತಂಡಗಳನ್ನು ಮಣಿಸಿ ಪ್ರಿಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿವೆ.
ಮಂಗಳವಾರ ನಡೆದ ಎಲ್ಲಾ ಪಂದ್ಯಗಳೂ ಏಕಮುಖವಾಗಿ ನಡೆದಿದ್ದು ಪಂದ್ಯಗಳಲ್ಲಿ ಸೋಲನುಭಸಿವಿದ ಯಾವ ತಂಡವೂ ಗೋಲು ಖಾತೆ ತೆರೆಯದೆ ಸೋಲೊಪ್ಪಿಕೊಂಡದ್ದೇ ಇದಕ್ಕೆ ಸಾಕ್ಷಿ.
ಕರಿನೆರವಂಡ ಭರ್ಜರಿ ಗೆಲವು: ಎದುರಾಳಿ ಇಟ್ಟೀರ ತಂಡವನ್ನು 7-0 ಗೋಲುಗಳಿಂದ ಹಿಮ್ಮೆಟ್ಟಿಸಿತು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಕರಿನೆರವಂಡ ತಂಡದ ಪರ ಕವನ್ 3ನೇ ನಿಮಿಷದಲ್ಲೇ ಮೊದಲ ಗೋಲನ್ನು ಹೊಡೆಯುವ ಮೂಲಕ ಇಟ್ಟೀರ ತಂಡಕ್ಕೆ ಆಘಾತ ನೀಡಿತು. ಈ ಆಘಾತದಿಂದ ಇಟ್ಟೀರ ಕೊನೆಯವರೆಗೂ ಚೇತರಿಸಿಕೊಳ್ಳಲೇ ಇಲ್ಲ. ಇದಾದ ಎರಡೇ ನಿಮಿಷದಲ್ಲಿ ಬಿದ್ದಪ್ಪರವರು 2ನೇ ಗೋಲು ದಾಖಲಿಸಿದರು.
ವಸಂತ್ ಹ್ಯಾಟ್ರಿಕ್ ಗೋಲು ಮೂಲಕ ಇಟ್ಟೀರ (13, 14, 15 ನಿ.)ಗೆ ಬಹಳ ದೊಡ್ಡ ಹೊಡೆತ ನೀಡಿದರು. ಕವನ್ 35ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದರು. ಕಡೆಯದಾಗಿ ಲಿಖಿತ್ 42ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿ ತಂಡಕ್ಕೆ 7-0 ಅಂತರದಿಂದ ಭರ್ಜರಿ ಜಯವನ್ನು ತಂದುಕೊಟ್ಟರು. 2ನೇ ಪಂದ್ಯದಲ್ಲಿ ಕಲಿಯಂಡ ತಂಡ ಪರಂದಂಡ ತಂಡವನ್ನು 4-0 ಗೋಲುಗಳಿಂದ ಮಣಿಸಿತು. ಕಲಿಯಂಡ ತಂಡದ ಪರವಾಗಿ 11ನೇ ನಿಮಿಷದಲ್ಲಿ ರಾಜೇಶ್, 35ನೇ ನಿಮಿಷದಲ್ಲಿ ಬಿದ್ದಪ್ಪ 33, 38ನೇ ನಿಮಿಷದಲ್ಲಿ ಭರತ್ 41 ನಿಮಿಷದಲ್ಲಿ ಮಾಚಯ್ಯ ಗೋಲು ದಾಖಲಿಸಿ ತಂಡಕ್ಕೆ ಜಯ ಒದಗಿಸಿದರು.
3ನೇ ಪಂದ್ಯದಲ್ಲಿ ಕಳೆದ ಬಾರಿಯ ಮಾದಂಡ ಕಪ್ನ ರನ್ನರ್ಸ್ ಅಪ್ ಹಾಗೂ ಮಾಜಿ ಚಾಂಪಿಯನ್ ಆದ ಪಳಂಗಂಡ ತಂಡ ಐಚಂಡ ತಂಡವನ್ನು ಭರ್ಜರಿ 5-0 ಗೋಲುಗಳ ಅಂತರದಿಂದ ಪರಾಭವಗೊಳಿಸಿತು. ಪಳಂಗಂಡ ತಂಡದ ಪರ ಮಂದಣ್ಣ ಉತ್ತಮ ಪ್ರದರ್ಶನ ನೀಡಿ 2 ಗೋಲು ದಾಖಲಿಸಿದರು (2 ನಿ. ಮತ್ತು 14 ನಿ.). 7 ಮತ್ತು 18 ನಿಮಿಷದಲ್ಲಿ ಶ್ಯಾಮ್ 2 ಗೋಲು ದಾಖಲಿಸಿದರು. 21 ನಿಮಿಷದಲ್ಲಿ ದೇವಯ್ಯ 1 ಗೋಲು ದಾಖಲಿಸಿದರು.
ಕೊನೆಯ ಪಂದ್ಯದಲ್ಲಿ ಬಲಿಷ್ಠ ಮಂಡೇಟಿರ ತಂಡದ ವಿರುದ್ಧ ಕುಲ್ಲೇಟಿರ ತಂಡ 2-0 ಅಂತರದಿಂದ ಜಯಿಸಿತು. ಕುಲ್ಲೇಟಿರ ತಂಡದ ಪರವಾಗಿ ಶುಭಾನ್ 2 ಗೋಲು ದಾಖಲಿಸಿ (21ನಿ. ಮತ್ತು 42 ನಿ.) ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮೊದಲ ಬಾರಿಗೆ ಚುಟುಕು ಹಾಕಿ
ವಿರಾಜಪೇಟೆ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ತಾತಂಡ ಹಾಕಿ ನಮ್ಮೆ 2014 ಇದರ ಅಂಗವಾಗಿ ಇದೇ ಮೊತ್ತಮೊದಲ ಬಾರಿಗೆ ಕೊಡವ ಕುಟುಂಬಗಳ ನಡುವೆ ಚುಟುಕು ಹಾಕಿ (ರಿಂಕ್ ಹಾಕಿ) ಪಂದ್ಯ ಆರಂಭವಾಯಿತು. ಈ ಬಾರಿಯ ತಾತಂಡ ಹಾಕಿ ನಮ್ಮೆ 2014 ಈ ಉತ್ಸವದಲ್ಲಿ ಭಾಗವಹಿಸಿದ ತಂಡಗಳಿಗೆ ಅವಕಾಶ ಕಲ್ಪಿಸಲಾಯಿತು. ಒಟ್ಟು 32 ತಂಡಗಳು ಚುಟುಕು ಹಾಕಿಯಲ್ಲಿ ತಮ್ಮ ಹೆಸರು ನೋಂದಾಯಿಸಿವೆ. ಪಾಂಡಂಡ ಕುಟ್ಟಪ್ಪ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶಾಸಕರಾದ ಕೆ.ಜಿ. ಬೋಪಯ್ಯ ಆಗಮಿಸಿದ್ದರು. ಸೋಮವಾರಪೇಟೆ ಶಾಸಕ ಅಪ್ಪಚ್ಚು ರಂಜನ್, ಮಾಜಿ ಎಂ.ಎಲ್.ಸಿ. ಎಂ.ಸಿ. ನಾಣಯ್ಯ, ಕೊಡಗು ಪ್ರಾದೇಶಿಕ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಅಂತಾರಾಷ್ಟ್ರೀಯ ಹಾಕಿ ಆಟಗಾರ ಪೂಣಚ್ಚರವರು ಭಾಗವಹಿಸಿದ್ದರು. ಈ ಬಾರಿ ಯ ಚುಟುಕು ರಿಂಕ್ ಹಾಕಿ ಪ್ರಶಸ್ತಿ ವಿಜೇತರಿಗೆ ರು. 50000- ನಗದು ಮತ್ತು ಟ್ರೋಫಿ, ರನ್ನರ್ಸ್ ತಂಡಕ್ಕೆ ರು. 25,000 ನಗದು ಮತ್ತು ಟ್ರೋಫಿ ನೀಡಲಾಗುವುದು ಎಂದು ಪ್ರಾಯೋಜಕರಾದ ಅರೆಯಡ ಪೊನ್ನಣ್ಣನವರು ತಿಳಿಸಿದರು. ಸಮಾರಂಭ ಮುಗಿದ ತಕ್ಷಣ ಬೆಂಗಳೂರು ಸಾಯಿ ತಂಡ ಮತ್ತು ಅಂತಾರಾಷ್ಟ್ರೀಯ ಆಟಗಾರರ ಚಿಕ್ಕಪೇಟೆ ಇಲೆವೆನ್ ತಂಡಗಳ ಮಧ್ಯೆ ಹಾಕಿ ಪಂದ್ಯಾವಳಿ ಜರುಗಿತು. ಈ ಪಂದ್ಯದಲ್ಲಿ ಬೆಂಗಳೂರು ಸಾಯಿ ತಂಡ ಜಯ ಗಳಿಸಿತು.