ದೆಹಲಿಗೆ ಸತತ ಮೂರನೇ ಜಯ
ವಡೋದರಾ: ದೆಹಲಿ ತಂಡದ ಆಟಗಾರರು ರಾಷ್ಟ್ರೀಯ ಸಬ್ ಜೂನಿಯರ್ ಪುರುಷರ ಹಾಕಿ ಚಾಂಪಿಯನ್ಶಿಪ್ನಲ್ಲಿ ಸತತ ಮೂರನೇ ಗೆಲವು ದಾಖಲಿಸಿದ್ದಾರೆ.
ವಡೋದರಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ದೆಹಲಿ ತಂಡ 2-1 ಗೋಲುಗಳಿಂದ ಹಿಮಾಚಲಪ್ರದೇಶ ತಂಡವನ್ನು ಪರಾಭವಗೊಳಿಸಿತು. 'ಬಿ' ಗುಂಪಿನಲ್ಲಿ ನಡೆದ ಈ ಪಂದ್ಯದಲ್ಲಿ ದೆಹಲಿ ಆಟಗಾರರು ಉತ್ತಮ ಹೊಂದಾಣಿಕೆ ಆಟ ಪ್ರದರ್ಶಿಸಿದರು. ವಿಜೇತ ದೆಹಲಿ ತಂಡದ ಪರ ನಿತಿನ್ ರಾಮ್ 14ನೇ ನಿಮಿಷ ಮತ್ತು ಮೋಹಿತ್ ಆನಂದ್ 41ನೇ ನಿಮಿಷದಲ್ಲಿ ಗೋಲು ಬಾರಿಸಿ ಆಟದಲ್ಲಿ ಮಿಂಚಿದರು. ಹಿಮಾಚಲಪ್ರದೇಶ ಪರ ಪ್ರಕಾಶ್ ಚಾಂದ್ ಮಾತ್ರ 44ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.
'ಎ' ಗುಂಪಿನ ಪಂದ್ಯದಲ್ಲಿ ಬಿಹಾರ ತಂಡದ ಆಟಗಾರರು ಸತತ ಎರಡನೇ ಗೆಲವು ಸಂಪಾದಿಸಿದರು. ಇಂದು ನಡೆದ ಪಂದ್ಯದಲ್ಲಿ ಬಿಹಾರ ತಂಡ 4-3 ಗೋಲುಗಳಿಂದ ಅಸ್ಸಾಂ ತಂಡಕ್ಕೆ ಸೋಲುಣಿಸಿದರು.