ಯುವ ರಾಜ ದರ್ಬಾರ್
ಆರಂಭದಲ್ಲಿ ವರುಣನ ಅಡಚಣೆ... ನಂತರ ಟಾಸ್ ಸೋಲು... ಬಳಿಕ ಪ್ರಮುಖ ದಾಂಡಿಗರ ದಿಢೀರನೆ ಪೆವಿಲಿಯನ್ನತ್ತ ಪರೇಡ್...
ಸೋಮಶೇಖರ ಪಿ. ಭದ್ರಾವತಿ
ಬೆಂಗಳೂರು: ಆರಂಭದಲ್ಲಿ ವರುಣನ ಅಡಚಣೆ... ನಂತರ ಟಾಸ್ ಸೋಲು... ಬಳಿಕ ಪ್ರಮುಖ ದಾಂಡಿಗರ ದಿಢೀರನೆ ಪೆವಿಲಿಯನ್ನತ್ತ ಪರೇಡ್... ಹೀಗೆ ಶುರುವಿನಲ್ಲೇ ಒಂದರ ಮೇಲೊಂದರಂತೆ ಬಂದೊದಗಿದ ಪ್ರತಿಕೂಲ ಸನ್ನಿವೇಶಗಳು ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಶೋಚನೀಯ ಸ್ಥಿತಿಗೆ ತಂದು ನಿಲ್ಲಿಸಿದ್ದವು.
ಆದರೆ ಆಪತ್ತಿನಲ್ಲಿ ಮತ್ತೆ ತಂಡದ ರಕ್ಷಣೆಯ ಹೊಣೆ ಹೊತ್ತ ಯುವರಾಜ್ ಸಿಂಗ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುರಿಸಲಾರಂಭಿಸಿದ ಸಿಕ್ಸರ್ಗಳ ಮಳೆಯಿಂದಾಗಿ ಜೀವ ಕಳೆದುಕೊಂಡಂತ ಸ್ಥಿತಿಯಲ್ಲಿದ್ದ ಆರ್ಸಿಬಿ ಪಾಲಿಗೆ ಆಮ್ಲಜನಕ ದೊರೆತು ಮರುಹುಟ್ಟು ಬಂದಂತಾಯಿತು.
ಯುವರಾಜ್ ಸಿಂಗ್ರ ವೀರಾವೇಶದ ಬ್ಯಾಟಿಂಗ್ ಪರಿಣಾಮವಾಗಿ, ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್ಗಳ ಬೃಹತ್ ಮೊತ್ತ ಸಂಪಾದಿಸಿ ಎದುರಾಳಿ ಡೆಲ್ಲಿ ಡೇರ್ಡೆವಿಲ್ಸ್ ತಂಡದ ಮುಂದೆ ಗುರುತರ ಸವಾಲು ನಿಲ್ಲಿಸುವಲ್ಲಿ ಶಕ್ತವಾಯಿತು.
ಈ ಬೃಹತ್ ಮೊತ್ತದ ಗುರಿಯೆಡೆಗೆ ಸಾಗಲೆತ್ನಿಸಿದ ಡೆಲ್ಲಿ ಡೇರ್ಡೆವಿಲ್ಸ್ಗೆ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಲಷ್ಟೇ ಸಾಧ್ಯವಾಯಿತು. 16 ರನ್ಗಳ ಅದ್ಧೂರಿ ಜಯ ದಾಖಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಮುಂದಿನ ಹಂತಕ್ಕೆ ತೇರ್ಗಡೆ ಹೊಂದುವ ಅವಕಾಶವನ್ನು ಹೆಚ್ಚಿಸಿಕೊಂಡಿತು.
ಮತ್ತೊಂದೆಡೆ ಡೆಲ್ಲಿ ಡೇರ್ಡೆವಿಲ್ಸ್ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವಾಯಿತು. ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಡೆಲ್ಲಿ ಗೆದ್ದರೂ 12 ಅಂಕಗಳನ್ನಷ್ಟೇ ತಲುಪಲಿದೆ. ಹಾಗಾಗಿ ಮುಂದಿನ ಹಂತ ಪ್ರವೇಶಿಸುವ ಅವಕಾಶವನ್ನು ಡೇರ್ಡೆವಿಲ್ಸ್ ಬೇಗನೆ ಕೈಚೆಲ್ಲಿದಂತಾಗಿದೆ.
ಡೆಲ್ಲಿ ಪರ ಜೀನ್ ಪಾಲ್ ಡುಮಿನಿ (48 ರನ್, 30 ಎಸೆತ, 3 ಬೌಂಡರಿ, 3 ಸಿಕ್ಸರ್) ಮತ್ತು ಕೆವಿನ್ ಪೀಟರ್ಸನ್ (33 ರನ್, 29 ಎಸೆತ, 2 ಬೌಂಡರಿ. 1 ಸಿಕ್ಸರ್) ಹಾಗೂ ಕೆಳ ಕ್ರಮಾಂಕದಲ್ಲಿ ಕೇದಾರ್ ಜಾಧವ್ (37) ಉತ್ತಮ ಹೋರಾಟ ನಡೆಸಿದರೂ ತಮ್ಮ ತಂಡಕ್ಕೆ ಗೆಲವು ತಂದುಕೊಡಲಾಗಲಿಲ್ಲ. ಮಾಡು ಇಲ್ಲವೆ ಮಡಿ ಎಂಬ ಪರಿಸ್ಥಿತಿಯಲ್ಲಿ ಕಣಕ್ಕಿಳಿದ ಆರ್ಸಿಬಿ ತಂಡಕ್ಕೆ, ಆರಂಭದಲ್ಲಿ ಪ್ರವೇಶಿಸಿದ ವರುಣ ಆತಂಕ ಮೂಡಿಸಿದ್ದ. ಮಂದಗತಿಯಲ್ಲಿ ಸುಮಾರು ಒಂದುವರೆ ಗಂಟೆಗಳ ಕಾಲ ಕಾಡಿದ ಮಳೆಯಿಂದಾಗಿ ಪಂದ್ಯವನ್ನು ಒಂದು ಗಂಟೆ ಹತ್ತು ನಿಮಿಷ ತಡವಾಗಿ ಆರಂಭಿಸಲಾಯಿತು. ಆದರೆ ನಿಗದಿತ ಓವರ್ಗಳಲ್ಲಿ ಯಾವುದೇ ಕಡಿತವಾಗಲಿಲ್ಲ. ಟಾಸ್ ಗೆದ್ದ ಡೆಲ್ಲಿ ಡೇರ್ಡೆವಿಲ್ಸ್ ತಂಡದ ನಾಯಕ ಕೆವಿನ್ ಪೀಟರ್ಸನ್ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ಕೈಗೊಂಡರು. ಹಾಗಾಗಿ ತೇವಗೊಂಡ ಅಂಕಣದಲ್ಲಿ ನಿಧಾನವಾಗಿ ಚೆಂಡು ಚಲಿಸಬಹುದಾಗಿದ್ದರಿಂದ ಮೊದಲು ಬ್ಯಾಟ್ ಮಾಡುವುದು ಸುಲಭವಾಗಿರಲಿಲ್ಲ. ಈ ಪ್ರತಿಕೂಲ ಸನ್ನಿವೇಶದಲ್ಲಿ ಆರ್ಸಿಬಿ ಇನಿಂಗ್ಸ್ ಆರಂಭಿಸಿದ್ದ ಕ್ರಿಸ್ ಗೇಯ್ಲ್ ಮತ್ತು ಪಾರ್ಥಿವ್ ಪಟೇಲ್ ಜೋಡಿಗೆ ಉತ್ತಮ ಅಡಿಪಾಯ ಹಾಕಿಕೊಡಲು ಸಾಧ್ಯವಾಗಲಿಲ್ಲ. ಶುರುವಿನಲ್ಲಿ ತೀಕ್ಷ್ಣ ಹೋರಾಟ ನಡೆಸಿದ್ದ ಕ್ರಿಸ್ ಗೇಯ್ಲ್(22 ರನ್, 23 ಎಸೆತ, 1 ಬೌಂಡರಿ, 2 ಸಿಕ್ಸರ್) ಆರ್ಭಟ ಬೇಗನೆ ತಣ್ಣಗಾಯಿತು.
ಗೇಯ್ಲ್ ನಂತರ ವಿರಾಟ್ ಕೊಹ್ಲಿ (10) ಬಂದ ವೇಗದಲ್ಲೇ ಪೆವಿಲಿಯನ್ ಸೇರಿಕೊಂಡಿದ್ದು, ತಂಡ ಆತಂಕಕ್ಕೆ ಸಿಲುಕುವಂತಾಯಿತು. ಇದರ ಬೆನ್ನಲ್ಲೇ ಆರ್ಸಿಬಿ ತಂಡದ ರನ್ ವೇಗ ಕೂಡ ಕುಂಟುತ್ತಾ ಸಾಗಿತು. ಪರಿಣಾಮ ಆತಿಥೇಯ ತಂಡ ಮೊದಲ 10 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗಳಿಸಿದ್ದು, 60 ರನ್ಗಳನ್ನಷ್ಟೆ.
ಮಧ್ಯಮ ಕ್ರಮಾಂಕದಲ್ಲಿ ಪಾರ್ಥಿವ್ ಪಟೇಲ್ (29 ರನ್, 28 ಎಸೆತ, 4 ಬೌಂಡರಿ) ಮತ್ತು ಎಬಿ ಡಿವಿಲಿಯರ್ಸ್ (33 ರನ್, 17 ಎಸೆತ, 4 ಬೌಂಡರಿ, 1ಸಿಕ್ಸರ್) ಕೆಲ ಭರ್ಜರಿ ಹೊಡೆತಗಳನ್ನು ಬಾರಿಸಿ ತಂಡವನ್ನು ಮೇಲೆತ್ತುವ ಸೂಚನೆ ನೀಡಿದರು. ಆದರೆ ಈ ಇಬ್ಬರೂ ಆಟಗಾರರು ಕೇವಲ 13 ರನ್ಗಳ ಅಂತರದಲ್ಲಿ ವಿಕೆಟ್ ಕೈಚ್ಚೆಲ್ಲುವುದರೊಂದಿಗೆ ಆರ್ಸಿಬಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು.
ನೆರವಿಗೆ ನಿಂತ ಯುವಿ: ಈ ಹಂತದಲ್ಲಿ ಆರ್ಸಿಬಿ ಪಾಲಿಗೆ ಇದ್ದ ಏಕೈಕ ಭರವಸೆ ಯುವರಾಜ್ ಸಿಂಗ್. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಯುವರಾಜ್ ಉತ್ತಮ ಫಾರ್ಮ್ನಲ್ಲಿದ್ದರಿಂದ ಅವರ ಮೇಲೆ ಅಪಾರ ನಂಬಿಕೆ ನಿರೀಕ್ಷೆ ಹೊಂದಲಾಗಿತ್ತು. ಯುವರಾಜ್ ಕೂಡ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಈ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ಬದಲಾಗಿ ಡೆವಿಲ್ಸ್ ದಾಳಿಯನ್ನು ದಂಡಿಸಿದ ಅವರು, ಮೈದಾನದ ತುಂಬೆಲ್ಲಾ ಗುಡುಗು ಸಿಡಿಲಿನಿಂದ ಕೂಡಿದ್ದ ರನ್ ಮಳೆ ಸುರಿಸಿಯೇ ಬಿಟ್ಟರು.
ಮುಖ್ಯವಾಗಿ ಅವರು 17ನೇ ಓವರ್ ಎಸೆದ ಇಮ್ರಾನ್ ತಾಹಿರ್ಗೆ ಸತತ ಮೂರು ಸಿಕ್ಸರ್ ಹಾಗೂ 20ನೇ ಓವರ್ ಬೌಲ್ ಮಾಡಿದ ರಾಹುಲ್ ಶುಕ್ಲಾಗೆ ಸತತ ಮೂರು ಸಿಕ್ಸರ್ ಸೇರಿದಂತೆ ನಾಲ್ಕು ಸಿಕ್ಸರ್ ಸಿಡಿಸಿದ್ದು, ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
15ನೇ ಓವರ್ ವೇಳೆಗೆ 4ವಿಕೆಟ್ ಕಳೆದುಕೊಂಡು ಕೇವಲ 108 ರನ್ ದಾಖಲಿಸಿದ್ದ ಆರ್ಸಿಬಿ, ಯುವರಾಜರ ಆರ್ಭಟದಿಂದಾಗಿ ಅಂತಿಮ 5 ಓವರ್ಗಳಲ್ಲಿ 78 ರನ್ ದಾಖಲಿಸುವ ಮೂಲಕ ಮತ್ತೆ ತಂಡದಲ್ಲಿ ಉತ್ಸಾಹ ಮೂಡಿಸಿದರು. ಕೊನೆಯಲ್ಲಿ ಯುವರಾಜ್ ಸಿಂಗ್ ಮತ್ತು ಸಚಿನ್ ರಾಣಾ 5ನೇ ವಿಕೆಟ್ಗೆ 79 ರನ್ ಕಲೆ ಹಾಕಿ ತಂಡ 180 ರನ್ ಗಡಿ ತಲುಪುವಲ್ಲಿ ಕಾರಣರಾದರು.
ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 4 ವಿಕೆಟ್ಗೆ 186
ಕ್ರಿಸ್ ಗೇಯ್ಲ್ ಬಿ ಶುಕ್ಲಾ 22, ಪಾರ್ಥಿವ್ ಸಿ ಕಾರ್ತಿಕ್ ಬಿ ಶಮಿ 29, ಕೊಹ್ಲಿ ರನೌಟ್ (ಶುಕ್ಲಾ/ಕಾಕ್) 10, ಡಿವಿಲಿಯರ್ಸ್ ಬಿ ಕೌಲ್ 33, ಯುವರಾಜ್ ಸಿಂಗ್ ಅಜೇಯ 68, ರಾಣಾ ಅಜೇಯ 15
ಇತರೆ: (ಲೆಗ್ ಬೈ 4, ವೈಡ್ 3, ನೊಬಾಲ್ 2) ಒಟ್ಟು 9
ವಿಕೆಟ್ ಪತನ: 1-33, 2-45, 3-94, 4-107
ಬೌಲಿಂಗ್ ವಿವರ: ಜೆ.ಪಿ ಡುಮಿನಿ 4-0-25-0, ಮೊಹಮದ್ ಶಮಿ 4-0-31-1, ಸಿದ್ಧಾರ್ತ್ ಕೌಲ್ 4-0-37-1, ರಾಹುಲ್ ಶುಕ್ಲಾ 4-0-41-1, ಇಮ್ರಾನ್ ತಾಹಿರ್ 4-0-48-0
ಡೆಲ್ಲಿ ಡೇರ್ಡೆವಿಲ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 170
ಖಿಂಟಾನ್ ಬಿ ಸ್ಟಾರ್ಕ್ 6, ವಿಜಯ್ ಎಲ್ಬಿ ಬಿ ಮುರಳಿಧರನ್ 1, ಮಾಯಾಂಕ್ ಸಿ ರಾಣಾ ಬಿ ಅಹ್ಮದ್ 31, ಪೀಟರ್ಸನ್ ಸ್ಟಂಪ್ ಪಾರ್ಥಿವ್ ಬಿ ಚಾಹಲ್ 33, ಡುಮಿನಿ ಬಿ ಸ್ಟಾರ್ಕ್ 48, ಕಾರ್ತಿಕ್ ಸಿ ಚಾಹಲ್ ಬಿ ಮುರಳಿಧರನ್ 1, ಜಾಧವ್ ರನೌಟ್ (ಪಟೇಲ್) 37, ರಾಹುಲ್ ಅಜೇಯ 2, ಶಮಿ ಅಜೇಯ 1.
ಇತರೆ: (ಬೈ 4, ಲೆಗ್ ಬೈ 2, ವೈಡ್ 2, ನೊಬಾಲ್ 2) ಒಟ್ಟು 10
ವಿಕೆಟ್ ಪತನ: 1-2, 2-10, 3-73, 4-97, 5-102, 6-147, 7-168
ಬೌಲಿಂಗ್ ವಿವರ: ಮುರಳಿಧರನ್ 4-0-25-2, ಮಿಚೆಲ್ ಸ್ಟಾರ್ಕ್ 4-0-26-2, ಅಹ್ಮದ್ 4-0-40-1, ಚಾಹಲ್ 4-0-45-1, ಯುವರಾಜ್ ಸಿಂಗ್ 4-0-28-0
ಇಂದಿನ ಪಂದ್ಯಗಳು
ಸನ್ರೈಸರ್ಸ್- ಕಿಂಗ್ಸ್ ಇಲೆವೆನ್ ಪಂಜಾಬ್
(ಸ್ಥಳ-ಹೈದರಾಬಾದ್, ಸಮಯ-ಸಂಜೆ 4 ಗಂಟೆ)
ಕೋಲ್ಕತಾ ನೈಟ್ ರೈಡರ್ಸ್-ಮುಂಬೈ ಇಂಡಿಯನ್ಸ್
(ಸ್ಥಳ-ಕಟಕ್, ಸಮಯ-ರಾತ್ರಿ 8 ಗಂಟೆ)