ವರದಕ್ಷಿಣೆ ಕಿರುಕುಳ: ಪತಿ ಮೇಲೆ ದೂರು ಕೊಟ್ಟ ಜುಡೊಪಟು
ಕೊಯಮತ್ತೂರ್: ಕರ್ನಾಟಕದ ಮಹಿಳಾ ಜೂಡೊ ಪಟು ತಮ್ಮ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಡ್ಯ ಮೂಲದ ಜುಡೊಪಟುವಾದ ಅರ್ಪಿತಾ ಬಿ.ಎಂ ಮೂರು ಅಂತಾರಾಷ್ಟ್ರೀಯ ಜೂಡೊ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ನವೆಂಬರ್ನಲ್ಲಿ ಸ್ಥಳೀಯ ಫ್ಯಾಶನ್ ಡಿಸೈನರ್ ಚೈತ್ರೇಶ್ ಬಾಬು ಅವರನ್ನು ವಿವಾಹವಾಗಿದ್ದರು.
ಈ ವೇಳೆ ನಗದು ಸೇರಿದಂತೆ 10 ಲಕ್ಷ ಮೌಲ್ಯದ ವಸ್ತುಗಳನ್ನು ನೀಡಲಾಗಿತ್ತು. ನಂತರ ಆತ ಮತ್ತಷ್ಟು ಹೆಚ್ಚಿನ ಹಣವನ್ನು ನೀಡುವಂತೆ ಒತ್ತಾಯಿಸುತ್ತಿದ್ದು, ಹಿಂಸೆ ನೀಡುತ್ತಿದ್ದರು. ಅಲ್ಲದೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಿರುವ ಅರ್ಪಿತಾ ನಗರದ, ಎಸ್ಪಿ ಸುಧಾಕರ್ ಅವರ ಬಳಿ ತಮ್ಮ ಪತಿ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾರೆ.
ಪತಿ ಹಾಗೂ ಆತನ ಪೋಷಕರು ಹೊರಗೆ ಹೋಗುವಾಗ ತನ್ನನ್ನು ಕೋಣೆಯೊಳಗೆ ಕೂಡಿಹಾಕುತ್ತಿದ್ದರು. ಹಾಗಾಗಿ ತನಗೆ ಯಾವುದೇ ರೀತಿಯ ಸ್ವಾತಂತ್ರ್ಯ ನೀಡುತ್ತಿರಲಿಲ್ಲ. ಹಾಗಾಗಿ ತನಗೆ ರಕ್ಷಣೆ ಅಗತ್ಯವಿದೆ ಅಲ್ಲದೆ ಪತಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.