ಮಂಡೆಪಂಡ, ಕೂತಂಡ ಮುನ್ನಡೆ
ವಿರಾಜಪೇಟೆ: ಕೊಡವ ಕುಟುಂಬಗಳ ನಡುವೆ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ತಾತಂಡ ಹಾಕಿ ನಮ್ಮೆ- 2014ರ ಬುಧವಾರದ ಪಂದ್ಯಾವಳಿಯಲ್ಲಿ ಮಂಡೆಪಂಡ, ಕೂತಂಡ, ಅಂಜಪರವಂಡ ಮತ್ತು ನೆಲ್ಲಮಕ್ಕಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಬುಧವಾರ ನಡೆದ ನಾಲ್ಕು ಪಂದ್ಯಗಳು ಅತ್ಯಂತ ರೋಚಕತೆಯಿಂದ ಕೂಡಿದ್ದು ನೆರೆದಿದ್ದ ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಿದವು.
ಮೊದಲನೇ ಪಂದ್ಯದಲ್ಲಿ ಸೆಣೆಸಾಡಿದ ಚೆಂದಂಡ ತಂಡವು ನೆಲ್ಲಮಕ್ಕಡ ತಂಡವನ್ನು 2-0 ಗೋಲುಗಳಿಂದ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಚೆಂದಂಡ ಪರವಾಗಿ ಸುಬ್ಬಯ್ಯ (19 ನಿಮಿಷ) ಒಂದು ಗೋಲು ದಾಖಲಿಸಿ ತಂಡಕ್ಕೆ ಶುಭಾರಂಭ ಮಾಡಿದರು. ನಂತರ ಶಮಿ ಮಂದಯ್ಯ (59 ನಿಮಿಷ) ಒಂದು ಗೋಲು ದಾಖಲಿಸುವ ಮೂಲಕ ಚೆಂದಂಡ ತಂಡಕ್ಕೆ ಜಯ ತಂದುಕೊಟ್ಟರು.
ಎರಡನೇ ಪಂದ್ಯದಲ್ಲಿ ಮಂಡೆಪಂಡ ತಂಡದ ಆಟಗಾರರು ಉತ್ತಮ ಆಟವಾಡಿ 4-0 ಗೋಲುಗಳಿಂದ ಕುಪ್ಪಂಡ ತಂಡವನ್ನು ಸೋಲಿಸಿದರು. ಮಂಡೇಪಂಡ ಪರವಾಗಿ ಮುಖೇಶ್ (28 ನಿಮಿಷ) ಮೊದಲ ಗೋಲು ಬಾರಿಸಿದರು. ಬೋಪಣ್ಣ(31ನೇ ನಿಮಿಷ), ರಂಜು(39ನೇ ನಿಮಿಷ), ನಿತಿನ್ (50ನೇ ನಿಮಿಷ) ಒಂದು ಗೋಲು ದಾಖಲಿಸಿದರು.
ಮೂರನೇ ಪಂದ್ಯದಲ್ಲಿ ಅಂಜಪರವಂಡ ತಂಡವು ಅರೆಯಡ ತಂಡವನ್ನು 4.1 ಗೋಲುಗಳ ಅಂತರದಿಂದ ಮಣಿಸಿತು. ಅಂಜಪರವಂಡ ತಂಡದ ಆಟಗಾರರೂ ಪ್ರಾರಂಭದಿಂದಲು ಆಕ್ರಮಣಕಾರಿ ಆಟವಾಡಿದರು. 3ನೇ ನಿಮಿಷದಲ್ಲಿ ಕುಶಾಲಪ್ಪ ಒಂದು ಗೋಲು ದಾಖಲಿಸಿ ತಂಡದ ಖಾತೆಯನ್ನು ತೆರೆದರು. ನಂತರ ಅರೆಯಡ ತಂಡದ ಆಟಗಾರ 20ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿ ತಂಡವನ್ನು 1-1 ಗೋಲುಗಳ ಅಂತರಕ್ಕೆ ತಂದು ನಿಲಿಸಿದರು. ಕೊನೆಯಲ್ಲಿ ಕುಶಾಲಪ್ಪನವರು (48ನೇ ಮತ್ತು 28ನೇ ನಿಮಿಷ)ದಲ್ಲಿ 2 ಗೋಲು ದಾಖಲಿಸಿದರೆ ಕಾರ್ಯಪ್ಪ (42ನೇ ನಿಮಿಷ)ದಲ್ಲಿ ಒಂದು ಗೋಲು ದಾಖಲಿಸಿ ಅಂಜಪರವಂಡ ತಂಡ 4- 1 ಗೋಲುಗಳ ಅಂತರದಿಂದ ಜಯಗಳಿಸಲು ಕಾರಣಕರ್ತರಾದರು.
ಬಲಿಷ್ಠ ಬಿದ್ದಂಡ ತಂಡದ ನಿರಸ ಪ್ರದರ್ಶನ: ನಾಲ್ಕನೇ ಪಂದ್ಯದಲ್ಲಿ ಕೂತಂಡ ತಂಡವು ಬಿದ್ದಂಡ ತಂಡವನ್ನು 4-0 ಗೋಲುಗಳ ಅಂತರದಿಂದ ಮಣಿಸಿತು. ಕೂತಂಡ ತಂಡದ ಸಹೋದರ ಆಟಗಾರರಾದ ಪೂಣಚ್ಚ ಮತ್ತು ಸಂತೋಷ್ ಆಕ್ರಮಣಕಾರಿ ಆಟ ಪ್ರದರ್ಶಿಸಿ ತಂಡಕ್ಕೆ ಜಯ ತಂದುಕೊಟ್ಟರು. ಮೊದಲನೆಯ ಗೋಲನ್ನು 6ನೇ ನಿಮಿಷದಲ್ಲಿ ಪೂಣಚ್ಚ ದಾಖಲಿಸಿದರು. ಎರಡು ಮತ್ತು ಮೂರನೇ ಗೋಲು ಸಹೋದರ ಸಂತೋಷ್ (23ನೇ ಮತ್ತು 34ನೇ ನಿಮಿಷ) ಹಾಗೂ ನಾಲ್ಕನೇ ಗೋಲು ಬೊಪಣ್ಣ ಅವರಿಂದ (41ನೇ ನಿಮಿಷ) ದಾಖಲಾಯಿತು. ಕೂತಂಡ ತಂಡದ ಆಟಗಾರರ ಮುಂದೆ ಬಿದ್ದಂಡ ತಂಡದ ಆಟಗಾರರು ಉತ್ತಮ ಪ್ರದರ್ಶನ ನಿಡುವಲ್ಲಿ ವಿಫಲರಾದರು.