ಆಕ್ರಮಣಕಾರಿ ಮನೋಭಾವ ಹತೋಟಿಯಲ್ಲಿರಲಿ: ವಾಲ್ಶ್
ಮುಂಬೈ: ಐಪಿಎಲ್ ಪಂದ್ಯದ ವೇಳೆ ಪೊಲಾರ್ಡ್ ಹಾಗೂ ಸ್ಟಾರ್ಕ್ ನಡುವಣ ಕಿತ್ತಾಟದ ಘಟನೆಯ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವೇಗದ ಬೌಲಿಂಗ್ ದಂತಕತೆ ಕರ್ಟ್ನಿ ವಾಲ್ಶ್, ಆಕ್ರಮಣಕಾರಿ ಮನೋಭಾವ ನಿಯಂತ್ರಣದಲ್ಲಿರಬೇಕು ಎಂದು ತಿಳಿಸಿದ್ದಾರೆ.
ಮುಂಬೈನಲ್ಲಿ ಗುರುವಾರ ಸೂಪರ್ ಪೇಸರ್ ಭಾರತೀಯ ವೇಗದ ಬೌಲರ್ಗಳ ಶೋಧನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೆಸ್ಟ್ ಇಂಡೀಸ್ನ ಮಾಜಿ ಬೌಲರ್ ಕರ್ಟ್ನಿ ವಾಲ್ಶ್, ನಾನು ಪ್ರಯಾಣ ಮಾಡುವಾಗ ಯೂಟ್ಯೂಬ್ನಲ್ಲಿ ಸ್ಟಾರ್ಕ್ ಹಾಗೂ ಪೊಲಾರ್ಡ್ ನಡುವಣ ಸಂಘರ್ಷವನ್ನು ನೋಡಿದೆ. ಹಾಗಾಗಿ ಈ ಪರಿಸ್ಥಿತಿ ಯಾವ ರೀತಿ ಉದ್ಭವಿಸಿತು ಎಂದು ತಿಳಿದಿಲ್ಲ.
ಈ ರೀತಿಯಾದ ಘಟನೆಗಳು ಕೆಲವೊಮ್ಮೆ ಸಂಭವಿಸುತ್ತದೆ. ಆದರೆ ಅಂತಿಮವಾಗಿ ಈ ಇಬ್ಬರು ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು, ಯಾವ ರೀತಿ ಇದಕ್ಕೆ ಅಂತ್ಯ ಹೇಳುತ್ತಾರೆ ಎಂಬುದು ಮುಖ್ಯ ಎಂದು ವಾಲ್ಶ್ ತಿಳಿಸಿದ್ದಾರೆ.
ಈ ರೀತಿಯಾದ ಘಟನೆಗಳನ್ನು ನೋಡಲು ಯಾರೂ ಇಚ್ಛಿಸುವುದಿಲ್ಲ. ಈ ರೀತಿಯಾದ ಘಟನೆಗಳನ್ನು ನೋಡಿದರೆ ಯುವ ಆಟಗಾರರು ಸಹ ಅದನ್ನೆ ಕಲಿಯುತ್ತಾರೆ. ಈ ಪ್ರಕರಣದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿದ್ದು, ಈ ಸಮಸ್ಯೆ ಬಗೆಹರಿದಿದೆ. ಹಾಗಾಗಿ ಮತ್ತೆ ಸಹಜ ಕ್ರಿಕೆಟ್ಗೆ ಮರಳುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಮೈದಾನದಲ್ಲಿ ಮಾತಿನ ಚಕಮಕಿ ನಡೆಯಬಹುತು ಆದರೆ ಆಕ್ರಮಣಕಾರಿ ಮನೋಭಾವ ಹಾಗೂ ಸಿಟ್ಟು ನಿಯಂತ್ರಣದಲ್ಲಿರಬೇಕು. ಆಗಾಗ ಆಟಗಾರರ ನಡುವೆ ಮಾತುಗಳು ವಿನಿಯೋಗವಾಗುತ್ತಿರುತ್ತವೆ.
ಆದರೆ ಅಂತಹ ಸಂದರ್ಭದಲ್ಲಿ ನಿಯಂತ್ರಿತ ಮನೋಭಾವವನ್ನು ನೋಡಲು ಎಲ್ಲರು ಇಚ್ಛಿಸುತ್ತಾರೆ ಎಂದು ತಿಳಿಸಿದರು.