ರಾಯಲ್ಸ್ ಮುಂದೆ ಶರಣಾದ ಡೇರ್ಡೆವಿಲ್ಸ್
ಬ್ಯಾಟಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು ...
ಅಹ್ಮದಾಬಾದ್: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು, ಐಪಿಎಲ್ 7ನೇ ಆವೃತ್ತಿಯ ಗುರುವಾರದ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ಅರ್ಹ ಗೆಲವು ದಾಖಲಿಸಿದ್ದಾರೆ.
ಮೊಟೇರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಡೇರ್ ಡೆವಿಲ್ಸ್ ವಿರುದ್ಧ 62 ರನ್ಗಳ ಗೆಲವು ದಾಖಲಿಸಿತು. ಈ ಮೂಲಕ ರಾಜಸ್ಥಾನ ಪ್ಲೇ ಆಫ್ನತ್ತ ಮತ್ತೊಂದು ಹೆಜ್ಜೆ ಹಾಕಿದೆ. ಟಾಸ್ ಗೆದ್ದ ಡೆಲ್ಲಿ ಡೇರ್ಡೆವಿಲ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ತಪ್ಪು ನಿರ್ಧಾರ ತೆಗೆದುಕೊಂಡಿತು.
ತಮಗೆ ಸಿಕ್ಕ ಅಮೂಲ್ಯ ಅವಕಾಶವನ್ನು ಬಳಸಿಕೊಂಡ ರಾಜಸ್ಥಾನ ರಾಯಲ್ಸ್ ತಂಡ, ಅಜಿಂಕ್ಯ ರಹಾನೆ (64 ರನ್, 50 ಎಸೆತ, 8 ಬೌಂಡರಿ, 1 ಸಿಕ್ಸರ್) ಅವರ ಜವಾಬ್ದಾರಿಯುತ ಹಾಗೂ ಕೆವೊನ್ ಕೂಪರ್ (32 ರನ್, 16 ಎಸೆತ, 2 ಬೌಂಡರಿ, 3 ಸಿಕ್ಸರ್) ಮತ್ತು ಸಂಜು ಸ್ಯಾಮ್ಸನ್ (40 ರನ್, 25 ಎಸೆತ, 2 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ಗೆ 201 ರನ್ ಕಲೆ ಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆವಿಲ್ಸ್ ಪಡೆ ಯಾವೊಬ್ಬ ಬ್ಯಾಟ್ಸ್ಮನ್ನಿಂದಲೂ ಹೋರಾಟದ ಪ್ರದರ್ಶನ ಪಡೆಯದ ಹಿನ್ನೆಲೆಯಲ್ಲಿ 20 ಓವರ್ಗಳಲ್ಲಿ 9 ವಿಕೆಟ್ಗೆ 139 ರನ್ ದಾಖಲಿಸಿತು.
ಈಗಾಗಲೇ ಪಂದ್ಯಾವಳಿಯಿಂದ ಹೊರಬಿದ್ದಿರುವ ಡೆಲ್ಲಿ ಡೇರ್ಡೆವಿಲ್ಸ್ ತಂಡ ಈ ಪಂದ್ಯದಲ್ಲೂ ತನ್ನ ಹೀನಾಯ ಪ್ರದರ್ಶನ ಮುಂದುವರಿಸಿತು. ಆರಂಭದಲ್ಲಿ ಬೌಲರ್ಗಳು ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್ಮನ್ಗಳಿಗೆ ಮೂಗುದಾರ ಹಾಕುವಲ್ಲಿ ವಿಫಲರಾದರೆ, ನಂತರ ಬ್ಯಾಟ್ಸ್ಮನ್ಗಳು ನೆಲಕಚ್ಚಿ ಆಡುವಲ್ಲಿ ವಿಫಲರಾದರು. ಹಾಗಾಗಿ ಡೆವಿಲ್ಸ್ ಮತ್ತೊಮ್ಮೆ ಹೀನಾಯ ಸೋಲನುಭವಿಸಿತು.
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಶೇನ್ ವ್ಯಾಟ್ಸನ್ ಗಾಯದ ಹಿನ್ನೆಲೆಯಲ್ಲಿ ಹೊರಗುಳಿದರು. ಹಾಗಾಗಿ ತಂಡದ ಸಾರಥ್ಯದ ಜವಾಬ್ದಾರಿ ಸ್ಟೀವನ್ ಸ್ಮಿತ್ ಹೆಗಲಿಗೆ ಬಿತ್ತು.
ವ್ಯಾಟ್ಸನ್ ಬದಲಿಗೆ ತಂಡದಲ್ಲಿ ಬೆನ್ ಕಟಿಂಗ್ ಸ್ಥಾನ ಪಡೆದರು. ಈ ಮೂಲಕ ರಾಜಸ್ಥಾನ ರಾಯಲ್ಸ್ ಪರ ಮೊದಲ ಬಾರಿಗೆ ಕಟಿಂಗ್ ಕಣಕ್ಕಿಳಿದರು.
ಸಂಘಟಿತ ಬ್ಯಾಟಿಂಗ್: ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದ ಅಜಿಂಕ್ಯ ರಹಾನೆ ಹಾಗೂ ಕರುಣ್ ನಾಯರ್ 44 ರನ್ಗಳ ಉತ್ತಮ ಜತೆಯಾಟವನ್ನು ನೀಡಿದರು. ಈ ವೇಳೆ ಉತ್ತಮ ಆರಂಭ ಪಡೆದಿದ್ದ ಕರುಣ್ (19) ವಿಕೆಟ್ ಕೈಚೆಲ್ಲಿದರು.
ಎರಡನೇ ವಿಕೆಟ್ಗೆ ರಹಾನೆ ಜತೆಗೂಡಿದ ಕೆವೊನ್ ಕೂಪರ್ ಅಬ್ಬರದ ಬ್ಯಾಟಿಂಗ್ನಿಂದ 49 ರನ್ಗಳ ಜತೆಯಾಟ ನೀಡಿದರು. ದುಬಾರಿ ಹೊಡೆತಕ್ಕೆ ಮುಂದಾದ ಕೂಪರ್, ಡುಮಿನಿಗೆ ವಿಕೆಟ್ ಒಪ್ಪಿಸಿದರು.
3ನೇ ವಿಕೆಟ್ಗೆ ರಹಾನೆ ಹಾಗೂ ಸಂಜು ಸ್ಯಾಮ್ಸನ್ 74 ರನ್ ಪೇರಿಸಿ ತಂಡ ಪಂದ್ಯದ ಮೇಲೆ ನಿಯಂತ್ರಣ ಸಾಧಿಸುವಂತೆ ನೋಡಿಕೊಂಡರು. ಈ ವೇಳೆ ಉತ್ತಮ ರೀತಿಯಲ್ಲಿ ರಾಜಸ್ಥಾನ ರಾಯಲ್ಸ್ ಇನಿಂಗ್ಸ್ ಕಟ್ಟಿದ್ದ ಅಜಿಂಕ್ಯ ರಹಾನೆ, ನದೀಮ್ ಅವರ ಎಲ್ಬಿ ಬಲೆಗೆ ಬೀಳುವ ಮೂಲಕ ತಮ್ಮ ಉತ್ತಮ ಇನಿಂಗ್ಸ್ಗೆ ತೆರೆ ಎಳೆದುಕೊಂಡರು.
ನಂತರ ಬಂದ ಸ್ಟುವರ್ಟ್ ಬಿನ್ನಿ ಆರಂಭದಲ್ಲೇ ಸಿಕ್ಸರ್ ಬಾರಿಸಲು ಮುಂದಾಗಿ ಇಮ್ರಾನ್ ತಾಹಿರ್ ಎಸೆತದಲ್ಲಿ ಸ್ಟಂಪ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಆಕಷಂಕವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಉದಯೋನ್ಮುಕ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್, ತಾಹಿರ್ ಎಸೆತದಲ್ಲಿ ಬಲಿಯಾದರು.
ಅಂತಿಮ ಓವರ್ಗಳಲ್ಲಿ ಕ್ರೀಸ್ಗೆ ಆಗಮಿಸಿದ ಬೆನ್ ಕಟಿಂಗ್, ಹಾಗೂ ಜೇಮ್ಸ್ ಫಾಕ್ನರ್ (ಅಜೇಯ 23 ರನ್, 8 ಎಸೆತ, 3 ಸಿಕ್ಸರ್) ಮತ್ತೊಮ್ಮೆ ತಮ್ಮ ಬ್ಯಾಟ್ನಿಂದ ಉತ್ತಮ ರೀತಿಯಲ್ಲಿ ರನ್ ಹರಿಸಿದರು. ಕೆಲವು ಮನಮೋಹಕ ಬೌಂಡರಿ ಹಾಗೂ ಸಿಕ್ಸರ್ಬಾರಿಸುವ ಮೂಲಕ ಈ ಇಬ್ಬರು ಬ್ಯಾಟ್ಸ್ಮನ್ಗಳು ಪ್ರೇಕ್ಷಕರನ್ನು ರಂಜಿಸಿದರು.
ಮುಂದುವರಿದ ವೈಫಲ್ಯ: ಈ ಆವೃತ್ತಿಯಲ್ಲಿ ಡೆವಿಲ್ಸ್ ತಂಡದ ಬ್ಯಾಟ್ಸ್ಮನ್ಗಳು ನೀರಸ ಪ್ರದರ್ಶನ ತೋರಿದ್ದು, ಈ ಪಂದ್ಯದಲ್ಲೂ ವೈಫಲ್ಯ ಮುಂದುವರಿಸಿದರು. ಡೆಲ್ಲಿ ತಂಡದ ಪರ ಮನೋಜ್ ತಿವಾರಿ (ಅಜೇಯ 61 ರನ್, 44 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್ಮನ್ ಕ್ರೀಸ್ನಲ್ಲಿ ನಿಲ್ಲಲು ಸಾಧ್ಯವಾಗಲೇ ಇಲ್ಲ. ಹಾಗಾಗಿ ಡೆಲ್ಲಿ ಡೇರ್ಡೆವಿಲ್ಸ್, ರಾಯಲ್ಸ್ ಮುಂದೆ ತಲೆಬಾಗಿತು.
ಸ್ಕೋರ್ ವಿವರ
ರಾಜಸ್ಥಾನ ರಾಯಲ್ಸ್ 20 ಓವರ್ಗಳಲ್ಲಿ
6 ವಿಕೆಟ್ಗೆ 201
ಅಜಿಂಕ್ಯ ರಹಾನೆ ಬಿ ನದೀಮ್ 64, ಕರುಣ್ ನಾಯರ್ ಎಲ್ಬಿ ನದೀಮ್ 19, ಕೆವೊನ್ ಕೂಪರ್ ಸಿ ಶುಕ್ಲಾ ಬಿ ಡುಮಿನಿ 32, ಸಂಜು ಸ್ಯಾಮ್ಸನ್ ಸಿ ಜಾಧವ್ ಬಿ ತಾಹಿರ್ 40, ಸ್ಟುವರ್ಟ್ ಬಿನ್ನಿ ಸ್ಟಂಪ್ ಕಾರ್ತಿಕ್ ಬಿ ತಾಹಿರ್ 0, ಬೆನ್ ಕಟಿಂಗ್ ರನೌಟ್ (ಶುಕ್ಲಾ) 8, ಜೇಮ್ಸ್ ಫಾಕ್ನರ್ ಅಜೇಯ 23
ಇತರೆ: (ಲೆಗ್ ಬೈ 10, ವೈಡ್ 4, ನೊಬಾಲ್ 1) ಒಟ್ಟು 15
ವಿಕೆಟ್ ಪತನ: 1-44, 2-93, 3-167, 4-168, 5-169, 6-201
ಬೌಲಿಂಗ್ ವಿವರ: ಜೆಪಿ ಡುಮಿನಿ 3-0-25-1, ಶುಕ್ಲಾ 4-0-44-0, ಸಿದ್ಧಾರ್ಥ್ ಕೌಲ್ 3-0-34-0, ನದೀಮ್ 4-0-35-2, ಇಮ್ರಾನ್ ತಾಹಿರ್ 4-0-25-2, ಮನೋಜ್ ತಿವಾರಿ 2-0-28-0
ಡೆಲ್ಲಿ ಡೇರ್ಡೆವಿಲ್ಸ್ 20 ಓವರ್ಗಳಲ್ಲಿ
9 ವಿಕೆಟ್ಗೆ 139
ಕೆವಿನ್ ಪೀಟರ್ಸನ್ ಬಿ ಭಾಟಿಯಾ 13, ಅಗರ್ವಾಲ್ ಸಿ ಸ್ಮಿತ್ ಬಿ ಫಾಕ್ನರ್ 17, ಕಾರ್ತಿಕ್ ಸಿ ಕಟಿಂಗ್ ಬಿ ಕುಲಕರ್ಣಿ 3, ಡುಮಿನಿ ಸಿ ಕರುಣ್ ಬಿ ತಾಂಬೆ 8, ತಿವಾರಿ ಅಜೇಯ 61, ರಾಸ್ ಟೇಲರ್ ಸಿ ಮತ್ತು ಬಿ ಭಾಟಿಯಾ 4, ಜಾಧವ್ ರನೌಟ್ (ಕಟಿಂಗ್) 3, ನದೀಮ್ ಬಿ ಕಟಿಂಗ್ 1, ತಾಹಿರ್ ಬಿ ಬಿನ್ನಿ 1, ಶುಕ್ಲಾ ಸಿ ಸ್ಮಿತ್ ಬಿ ಕೂಪರ್ 14, ಸಿದ್ಧಾರ್ಥ್ ಅಜೇಯ 2
ಇತರೆ: (ಲೆಗ್ ಬೈ 3, ವೈಡ್ 6) ಒಟ್ಟು 9
ವಿಕೆಟ್ ಪತನ: 1-19, 2-30, 3-43, 4-48, 5-58, 6-75, 7-86, 8-91
ಬೌಲಿಂಗ್ ವಿವರ: ಕುಲಕರ್ಣಿ 4-1-24-1, ಕಟಿಂಗ್ 4-0-3-1, ಫಾಕ್ನರ್ 1-0-6-1, ಕೂಪರ್ 3-0-19-1, ತಾಂಬೆ 3-0-24-1, ಭಾಟಿಯಾ 3-0-18-2, ಬಿನ್ನಿ 2-0-14-1