ಸದ್ಯ ಐಪಿಎಲ್ ಮೇಲಷ್ಟೇ ನನ್ನ ಗಮನವಿದೆ: ಗಂಭೀರ್
ನವದೆಹಲಿ: ಪ್ರಸ್ತುತ ಏಳನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿ ಮೇಲೆ ಗಮನ ಕೇಂದ್ರಿಕರಿಸಿದ್ದು ಮುಂಬರುವ ಇಂಗ್ಲೆಂಡ್ ಪ್ರವಾಸ ಅಥವಾ 2015ರ ವಿಶ್ವಕಪ್ ಟೂರ್ನಿ ಬಗ್ಗೆ ಯೋಚಿಸುತ್ತಿಲ್ಲ ಎಂದು ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಹೇಳಿದ್ದಾರೆ.
ಆದರೆ, ರಾಷ್ಟ್ರೀಯ ತಂಡಕ್ಕೆ ಮರಳಲು ಐಪಿಎಲ್ ವೇದಿಕೆ ಎಂದು ಭಾವಿಸುವುದಿಲ್ಲ. ಆದರೆ, ಇದೊಂದು ಅದ್ಭುತ ಪಂದ್ಯಾವಳಿಯಾಗಿದ್ದು, ಎಂಜಾಯ್ ಮಾಡುತ್ತಿದ್ದೇನೆ. ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ತೃಪ್ತಿ ತಮಗಿದೆ ಎಂದಿದ್ದಾರೆ. ಈ ಬಾರಿಯ ಐಪಿಎಲ್ ಋುತುವನ್ನು ಗಂಭೀರ್ ಅತ್ಯಂತ ನಿರಾಶಾದಾಯಕವಾಗಿ ಆರಂಭಿಸಿದ್ದರು. ಆರಂಭದ ಮೂರೂ ಪಂದ್ಯಗಳಲ್ಲಿ ಅವರು ಶೂನ್ಯಕ್ಕೆ ನಿರ್ಗಮಿಸಿ ತೀರ ಚಿಂತೆಗೆ ಒಳಗಾಗಿದ್ದರು. ಆದರೆ, ನಂತರದಲ್ಲಿ ಉತ್ತಮ ಫಾರ್ಮ್ ಕಂಡುಕೊಂಡ ಗಂಭೀರ ಸತತ ಮೂರು ಅರ್ಧಶತಕಗಳನ್ನು ಬಾರಿಸಿ ಗಮನ ಸೆಳೆದರು.
ಧರ್ಮಶಾಲಾದಲ್ಲಿ ಜನವರಿ 2013ರಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಾದ ಪಂದ್ಯವೇ ಗಂಭೀರ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಸಮರವಾಗಿತ್ತು. ತದನಂತರ ಫಾರ್ಮ್ ಕೊರತೆಯಿಂದಾಗಿ ಟೀಂ ಇಂಡಿಯಾದಿಂದ ತಿರಸ್ಕೃತರಾಗಿದ್ದಾರೆ.
ಇದೀಗ ಐಪಿಎಲ್ನಲ್ಲಿ ಉತ್ತಮ ಲಯ ಕಂಡುಕೊಂಡಿರುವ ಅವರು ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ಮಾತುಗಳು ಕೇಳಿಬರುತ್ತಿವೆ. ಇದನ್ನು ಒಪ್ಪದ ಗಂಭೀರ, ತಮ್ಮ ವಾಪಸಾತಿಗೆ ಐಪಿಎಲ್ ವೇದಿಕೆಯಾಗಿದೆ ಎಂದು ಭಾವಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಭಾರತ ತಂಡ ಜೂನ್ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಬಳಿಕ ಮುಂದಿನ ವರ್ಷ ನಡೆಯಲಿರುವ 50 ಓವರುಗಳ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಆದರೆ, ಈ ಎರಡೂ ಟೂರ್ನಿಗಳ ಮೇಲೆ ತಾವು ಗಮನ ಹರಿಸಿಲ್ಲ. ಪ್ರಸ್ತುತ ಐಪಿಎಲ್ ಪಂದ್ಯಾವಳಿ ಬಗ್ಗೆಯಷ್ಟೇ ಯೋಚಿಸುತ್ತಿದ್ದು, ಉತ್ತಮ ಪ್ರದರ್ಶನ ತೋರುವ ಗುರಿ ಹೊಂದಿದ್ದೇನೆ ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
ಫಲಿತಾಂಶ ನಮ್ಮ ವಿರುದ್ಧ ಸಾಗುತ್ತಿದ್ದರೆ, ಟೀಕೆಗಳು ನಿರಂತರವಾಗಿ ನಮ್ಮ ಬೆನ್ನು ಹತ್ತಿರುತ್ತವೆ. ನಾವು ಉತ್ತಮ ಪ್ರದರ್ಶನದ ಮೂಲಕ ಇವುಗಳಿಗೆ ಉತ್ತರ ನೀಡಬೇಕಾಗುತ್ತದೆ ಎಂದಿದ್ದಾರೆ. ಈಗಾಗಲೇ 54 ಟೆಸ್ಟ್ಗಳಿಂದ 4021 ರನ್ ಹಾಗೂ 147 ಏಕದಿನ ಪಂದ್ಯಗಳಿಂದ 5238 ರನ್ಗಳನ್ನು ಸಂಪಾದಿಸಿರುವ ಆರಂಭಿಕ ಆಟಗಾರ ಗಂಭೀರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಅನುಭವವುಳ್ಳ ಆಟಗಾರರಾಗಿದ್ದಾರೆ.