ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೆಮೀಸ್ಗೆ ಲಗ್ಗೆಯಿಟ್ಟ ಪಳಂಗಂಡ, ಕಲಿಯಂಡ, ಕೂತಂಡ, ಕರಿನೆರವಂಡ

Rashmi Kasaragodu
Updated On : 16 May 2014, 12:11 pm

ವಿರಾಜಪೇಟೆ: ಕೊಡವ ಕುಟುಂಬಗಳ ನಡುವೆ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ತಾತಂಡ ಹಾಕಿ ನಮ್ಮೆ- 2014ರ ಕಪ್ಗಾಗಿ ನಡೆಯುತ್ತಿರುವ ಹಾಕಿ ಪಂದ್ಯದಲ್ಲಿ ಗುರುವಾರ ನಡೆದ ಕ್ವಾಟರ್ ಫೈನಲ್ ಪಂದ್ಯದಲ್ಲಿ ಪಳಂಗಂಡ, ಕಲಿಯಂಡ, ಕೂತಂಡ ಹಾಗೂ ಕರಿನೆರವಂಡ ತಂಡಗಳು ಎದುರಾಳಿ ತಂಡಗಳನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿತು.
 ಗುರುವಾರ ನಡೆದ ಪಂದ್ಯಗಳು ಕುತೂಹಲಕಾರಿ ಪಂದ್ಯಗಳಾಗಿದ್ದರಿಂದ ಮೈದಾನದಲ್ಲಿ ಪ್ರೇಕ್ಷಕರು ತುಂಬಿತುಳುಕುತ್ತಿದ್ದರು. ಪ್ರೇಕ್ಷಕರು ತಮ್ಮ ತಮ್ಮ ತಂಡಗಳ ಪರವಾಗಿ ಜೈಕಾರ ಕೂಗುತ್ತಿದ್ದರು.
 ಮೊಟ್ಟ ಮೊದಲಿಗೆ ಸೆಮಿಫೈನಲ್ ಸುತ್ತಿಗೇರೇತ್ತಿರುವ ಕರಿನೆರವಂಡ ತಂಡ ಶುಕ್ರವಾರ ಭರ್ಜರಿ ಪ್ರದರ್ಶನ ನೀಡಿತು. ಕ್ವಾಟರ್ ಫೈನಲ್ನ ಮೊದಲನೇ ಪಂದ್ಯದಲ್ಲಿ ಪಳಂಗಂಡ ತಂಡವು ಚೆಂದಂಡ ತಂಡವನ್ನು 2- 0 ಅಂತರದಿಂದ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತ್ತು. ಪಳಂಗಂಡ ತಂಡದ ಪರವಾಗಿ ಮುತ್ತಣ್ಣ ಎರಡು ಗೋಲುಗಳನ್ನು (14 ಮತ್ತು 37ನೇ ನಿಮಿಷ) ದಾಖಲಿಸಿದರು.
ವಿಶ್ವಕಪ್ ಹಾಕಿಗೆ ಆಯ್ಕೆ: ಈ ಭಾರಿಯ ವಿಶ್ವಕಪ್ ಹಾಕಿ ಪಂದ್ಯಕ್ಕೆ ಭಾರತ ತಂಡದಲ್ಲಿ ಚೆಂದಂಡ ತಂಡದ ಪರವಾಗಿ ಶುಕ್ರವಾರ ಆಡಿದ ಬೆಂದಂಡ ನಿಕಿನ್ ತಿಮ್ಮಯ್ಯ ಆಯ್ಕೆಯಾಗಿದ್ದಾರೆ. ಇವರು ಚೆಂದಂಡ ನಾಣು ಅಯ್ಯಣ್ಣನವರ ಪುತ್ರ.
 ಎರಡನೇ ಪಂದ್ಯದಲ್ಲಿ ಬಲಿಷ್ಠ ಮಂಡೆಪಂಡ ತಂಡವು ಕಲಿಯಂಡ ತಂಡದ ಎದುರು 1- 3 ಗೋಲುಗಳ ಅಂತರದಿಂದ ಶರಣಾಯಿತು. ಮಂಡೆಪಂಡ ತಂಡದ ಪರವಾಗಿ ಬೋಪಣ್ಣನವರು (21ನೇ ನಿಮಿಷ) ಏಕೈಕ ಗೋಲು ದಾಖಲಿಸಿ ತಂಡಕ್ಕೆ ಸಮಾಧಾನ ತಂದುಕೊಟ್ಟರು. ಕಲಿಯಂಡ ತಂಡದ ಪರವಾಗಿ ಬಿದ್ದಪ್ಪನವರು(35 ಮತ್ತು 45ನೇ ನಿಮಿಷ)ದಲ್ಲಿ ಎರಡು ಗೋಲು ದಾಖಲಿಸಿ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಿರಣ್ (48ನೇ ನಿಮಿಷ) ಮೂರನೇ ಗೋಲು ದಾಖಲಿಸಿದರು.
 ಮೂರನೇ ಪಂದ್ಯದಲ್ಲಿ ಕೂತಂಡ ತಂಡವು ಕುಲ್ಲೆಟ್ಟಿರ ತಂಡವನ್ನು 3- 0 ಗೋಲುಗಳ ಅಂತರದಿಂದ ಮಣಿಸಿ ಭರ್ಜರಿ ಜಯ ಸಾಧಿಸಿತು. ಕೂತಂಡ ತಂಡದ ಪರವಾಗಿ ಪೂಣಚ್ಚನವರು (11ನೇ ನಿಮಿಷ) ಮೊದಲನೇ ಗೋಲು ದಾಖಲಿಸಿ ತಂಡದ ಖಾತೆಯನ್ನು ತೆರೆದರೆ, ಉಳಿದ ಎರಡು ಗೋಲುಗಳನ್ನು ಬೋಪಣ್ಣನವರು (26 ಮತ್ತು 28ನೇ ನಿಮಿಷ)ದಲ್ಲಿ ಎರಡು ಗೋಲು ದಾಖಲಿಸಿ ತಂಡದ ಗೆಲವಿನಲ್ಲಿನ ತಮ್ಮ ಕಾಣಿಕೆ ನೀಡಿದರು.
 ದಿನದ ಕೊನೆಯ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಅಂಜಪರವಂಡ ಹಾಗೂ ಇದೇ ಮೊದಲನೇ ಭಾರಿಗೆ ಸೆಮಿ ಫೈನಲ್ಗೆ ಪ್ರವೇಶಿಸುತ್ತಿರುವ ಕರಿನೆರವಂಡ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಅಂಜಪರವಂಡ ತಂಡವನ್ನು ಕರಿನರವಂಡ ತಂಡವು 4- 1 ಗೋಲುಗಳ ಅಂತರದಿಂದ ಮಣಿಸಿತು.
 ಕರಿನೆರವಂಡ ತಂಡದ ಪರವಾಗಿ ಲಿತಿಶ್ ಅವರು ಆಕ್ರಮಣಕಾರಿಯಾಗಿ ಮೊದಲ ಗೋಲನ್ನು ಮತ್ತು ನಂತರ 2 ಗೋಲುಗಳು ಸೇರಿ ಒಟ್ಟು 3 ಗೋಲುಗಳನ್ನು (7, 17 ಮತ್ತು 59ನೇ ನಿಮಿಷದಲ್ಲಿ) ದಾಖಲಿಸಿದರು.  ಪೊನ್ನಣ್ಣ (12ನೇ ನಿಮಿಷ) ಎರಡನೇ ಗೋಲು ಗಳಿಸಿದರು.  ಅಂಜಪರವಂಡ ತಂಡದ ಪರವಾಗಿ ದಾಖಲಾದ ಏಕೈಕ ಗೋಲು ಚಿಟ್ಟಿಯಪ್ಪ (19ನೇ ನಿಮಿಷ) ದಾಖಲಿಸಿದರು. ಎರಡು ತಂಡಗಳ ಮಧ್ಯೆ ಸ್ವಲ್ಪ ಬಿಗುವಿನ ವಾತಾವರಣ ಇತ್ತಾದರೂ ತೀರ್ಪುಗಾರರು ಮಧ್ಯೆ ಪ್ರವೇಶಿಸಿ ವಾತವರಣವನ್ನು ತಿಳಿಗೊಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement