ಕೀನ್ಯಾ ಅಥ್ಲೀಟ್‌ಗಳೇ ಕೇಂದ್ರ ಬಿಂದು
ಉದ್ಯಾನ ನಗರಿಯ ಬಹು ನಿರೀಕ್ಷಿತ 10ಕೆ ಮ್ಯಾರಥಾನ್‌ಗೆ ವೇದಿಕ ಸಜ್ಜಾಗಿದ್ದು, 25 ಸಾವಿರಕ್ಕೂ...
ಬೆಂಗಳೂರು: ಉದ್ಯಾನ ನಗರಿಯ ಬಹು ನಿರೀಕ್ಷಿತ 10ಕೆ ಮ್ಯಾರಥಾನ್‌ಗೆ ವೇದಿಕ ಸಜ್ಜಾಗಿದ್ದು, 25 ಸಾವಿರಕ್ಕೂ ಹೆಚ್ಚಿನ ಓಟಗಾರರು ಭಾಗವಹಿಸುತ್ತಿದ್ದಾರೆ. ಈ ಬಾರಿಯ ಓಟದಲ್ಲೂ ಕೀನ್ಯಾ ಅಥ್ಲೀಟ್‌ಗಳೇ ಪ್ರಾಬಲ್ಯ ಮೆರೆಯುವ ಸಾಧ್ಯತೆ ಇದೆ.
ಭಾನುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಅಭೂತಪೂರ್ವ ಓಟಕ್ಕೆ ವಿದೇಶಿ ಓಟಗಾರರು ಸೇರಿದಂತೆ ಸ್ಥಳೀಯ ಉತ್ಸುಕ ಓಟಗಾರರು ಕಾತುರದಿಂದ ಕಾದಿದ್ದಾರೆ. ಈ ಓಟಕ್ಕೆ ಬೆಳಗ್ಗೆ 6.05ಕ್ಕೆ ಚಾಲನೆ ದೊರೆಯಲಿದೆ.
ಈ ರೇಸ್‌ನಲ್ಲಿ ವಿದೇಶಿ ಆಟಗಾರರಲ್ಲಿ ಪೂರ್ವ ಆಫ್ರಿಕಾದ ದೇಶಗಳಿಂದ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಓಟ ತೀವ್ರ ಕುತೂಹಲದಿಂದ ಕೂಡುವ ನಿರೀಕ್ಷೆ ಇದೆ.
ಬೆಂಗಳೂರು 10ಕೆ ಓಟದ ಪುರುಷರ ವಿಭಾಗದಲ್ಲಿ ಕೀನ್ಯಾದ ಓಟಗಾರರು ಕಳೆದ ನಾಲ್ಕು ಬಾರಿ ಗೆಲವು ದಾಖಲಿಸಿದ್ದರೆ, ಕೀನ್ಯಾದ ಮಹಿಳಾ ಓಟಗಾರ್ತಿಯರು ಕಳೆದ ಎರಡು ವರ್ಷಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಇನ್ನು ಭಾರತೀಯ ಓಟಗಾರರ ಪೈಕಿ ಬಿ.ಸಿ ತಿಲಕ್, ವಿ.ಎಲ್ ದಂಗಿ, ಸೋಜಿ ಮ್ಯಾಥ್ಯೂ, ಸಂತೋಷ್ ಕೆ, ಪುರುಷರ ಓಟಗಾರರಾಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ ವಿಜಯಮಾಲಾ ಪಾಟೀಲ್, ಪ್ರಿಯಾಂಕ ಸಿಂಗ್ ಪಟೇಲ್, ನೀಲಮ್ ರಜಪೂತ್ ಮತ್ತು ಮನಿಶಾ ದತ್ತಾತ್ರೇಯ ಭಾಗವಹಿಸುತ್ತಿದ್ದಾರೆ.
ವಿಶ್ವ 10ಕೆ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಗೆಲವು ಸಾಧಿಸುವವರು, ರು. 12.30 ಲಕ್ಷ (21 ಸಾವಿರ ಅಮೆರಿಕನ್ ಡಾಲರ್) ಪಡೆಯಲಿದ್ದು, ಹೊಸ ಕೂಟ ದಾಖಲೆ ಬರೆದರೆ, ಹೆಚ್ಚುವರಿಯಾಗಿ ರು. 43 ಸಾವಿರ (7.5 ಸಾವಿರ ಅಮೆರಿಕನ್ ಡಾಲರ್) ಬಹುಮಾನ ಪಡೆಯಲಿದ್ದಾರೆ. ಪ್ರಸ್ತುತ ಪುರುಷರ ವಿಭಾಗದಲ್ಲಿ ಎರಿಟ್ರೆಯಾದ ಜೆರ್ಸೆನಾ 2008ರಲ್ಲಿ ನಿರ್ಮಿಸಿದ ದಾಖಲೆ 27:51 ನಿಮಿಷ, ಈವರೆಗಿನ ದಾಖಲೆಯಾಗಿದೆ. ಮಹಿಳೆಯರ ವಿಭಾಗದಲ್ಲಿ 2010ರಲ್ಲಿ ಇಥೋಪಿಯಾದ ಯಿಮರ್ ವುಡೆ ನಿರ್ಮಿಸಿದ 31:58 ನಿಮಿಷ ದಾಖಲೆಯಾಗಿ ಉಳಿದಿದೆ. ಭಾರತೀಯರ ವಿಭಾಗದಲ್ಲಿ ಅಗ್ರಸ್ಥಾನ ಪಡೆಯಲಿರುವ ಮಹಿಳಾ ಹಾಗೂ ಪುರುಷರು ತಲಾ ರು. 2ಲಕ್ಷ ಬಹುಮಾನ ಮೊತ್ತ ಪಡೆಯಲಿದ್ದಾರೆ. ರನ್ನರ್ ಅಪ್ ಆಗುವವರು 1.5 ಲಕ್ಷ ಪಡೆಯಲಿದ್ದಾರೆ.
ಭಾರತೀಯ ಓಟಗಾರರ ಸ್ಪರ್ಧೆ ಬೆಳಗ್ಗೆ 6.20ಕ್ಕೆ ಆರಂಭವಾಗಲಿದೆ. ಪುರುಷರ 10ಕೆ 7.40ಕ್ಕೆ ಆರಂಭವಾಗಲಿದ್ದು, ನಂತರ 4.2 ಕಿ.ಮೀ.ನ ಹಿರಿಯ ನಾಗರೀಕರ ಓಟವಿದ್ದು, ಇದರಲ್ಲಿ ಒಟ್ಟು 720 ಓಟಗಾರರು ಭಾಗವಹಿಸುತ್ತಿದ್ದಾರೆ. ಇನ್ನು ಭಾರತೀಯ ಹಾಗೂ ವಿದೇಶಿ ಮಹಿಳೆಯರಿಗೆ ವಿಶ್ವ 10ಕೆ ಎಲೈಟ್ ರೇಸ್ ನಡೆಯಲಿದ್ದು, 8.25ಕ್ಕೆ ನಡೆಯಲಿದೆ. ವಿಕಲಚೇತನರಿಗಾಗಿ 4.5 ಕಿ.ಮೀ ಓಟವಿದ್ದು, ಇದರಲ್ಲಿ 250 ಮಂದಿ ಭಾಗವಹಿಸುತ್ತಿದ್ದು, 8.35ಕ್ಕೆ ಆರಂಭವಾಗಲಿದೆ.