ಪಳಂಗಂಡ-ಕಲಿಯಂಡ ಕಾದಾಟ
ಮಡಿಕೇರಿ: ವಿರಾಜಪೇಟೆಯಲ್ಲಿ 28 ದಿನಗಳಿಂದ ಜರುಗಿದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಭಾನುವಾರ ತೆರೆ ಬೀಳಲಿದೆ. ತಾತಂಡ ಕಪ್ ಹಾಕಿ ಚಾಂಪಿಯನ್ ಪಟ್ಟ ಪಡೆಯಲು ಈ ಬಾರಿ ಪಳಂಗಂಡ ಮತ್ತು ಕಲಿಯಂಡ ತಂಡಗಳು ಪ್ರಬಲ ಪೈಪೋಟಿ ನೀಡಲಿವೆ.
ಕಳೆದ ವರ್ಷದ ರನ್ನರ್ಅಪ್ ತಂಡವಾಗಿದ್ದ ಪಳಂಗಂಡ ಕುಟುಂಬ ತಂಡ ಈ ಬಾರಿಯೂ ಕೊಡವ ಕೌಟುಂಬಿಕ ಹಾಕಿ ಚಾಂಪಿಯನ್ ಆಗಲು ಮುನ್ನುಗಿದೆ. ಪಳಂಗಂಡ ತಂಡದ ಆಟಗಾರ ಅಂತಾರಾಷ್ಟ್ರೀಯ ಹಾಕಿಪಟು ಅಮರ್ ಮತ್ತು ಅಜಯ್ ಸಹೋದರರು ಕುಟುಂಬ ತಂಡವನ್ನು ಈ ಹಿಂದಿನಂತೆಯೇ ಮುನ್ನಡೆಸುವ ವಿಶ್ವಾಸ ಹಾಕಿ ಪ್ರೇಮಿಗಳದ್ದು. ಕಲಿಯಂಡ ತಂಡದಲ್ಲಿ ಕಾರ್ಯಪ್ಪ, ಭರತ್ ತಂಡಕ್ಕೆ ಗೆಲವು ನೀಡುವ ಭರವಸೆ ಮೂಡಿಸಿದ್ದಾರೆ. ಕಲಿಯಂಡ ತಂಡ 1 ಬಾರಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತ್ತು. 2 ಬಾರಿ ರನ್ನರ್ಸ್ಗೆ ತೃಪ್ತಿ ಪಟ್ಟುಕೊಂಡಿತ್ತು. ಪಳಂಗಂಡ ತಂಡ 4 ಬಾರಿ ಕೊಡವ ಕೌಟುಂಬಿಕ ಹಾಕಿ ಚಾಂಪಿಯನ್ ಆದ ಹಿರಿಮೆ ಗಳಿಸಿದ್ದು, ಕಳೆದ ವರ್ಷ ರನ್ನರ್ ಆಗಿದೆ.
ಉಳಿದಂತೆ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಸೆಣಸಲಿರುವ ಕೂತಂಡ ತಂಡವು 4 ಬಾರಿ ಚಾಂಪಿಯನ್ ಮತ್ತು 4 ಬಾರಿ ರನ್ನರ್ ಆಗಿದೆ. ಮತ್ತೊಂದು ತಂಡವಾದ ಕರಿನೆರವಂಡ ತಂಡವು ಕಳೆದ ಬಾರಿ ಸೆಮಿಫೈನಲ್ ಪ್ರವೇಶಿಸಿತ್ತು. ಈ ಬಾರಿಯೂ ಕರಿನೆರವಂಡ ಕುಟುಂಬ ತಂಡವು ಸೆಮಿಫೈನಲ್ನಲ್ಲಿ ಕಲಿಯಂಡ ತಂಡದ ವಿರುದ್ಧ 3-0 ಗೋಲುಗಳಿಗೆ ಮಣಿದು ಫೈನಲ್ ಪ್ರವೇಶಿಸದೆ ನಿರ್ಗಮಿಸಿತು. ಪಳಂಗಂಡ ಮತ್ತು ಕಲಿಯಂಡ ತಂಡಗಳ ನಡುವೇ ಯಾವ ತಂಡ ತಾತಂಡ ಕಪ್ ಪಡೆಯಲಿದೆ ಎಂಬ ಬಗ್ಗೆ ಹಾಕಿ ಪ್ರೇಮಿಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೊಡಗಿನಲ್ಲಿ ಚುನಾವಣೆ ಚರ್ಚೆಗಳು ಬಹುತೇಕ ಮುಕ್ತಾಯಗೊಂಡಿದ್ದು ಇನ್ನೇನಿದ್ದರೂ ಭಾನುವಾರ ಮಧ್ಯಾಹ್ನದವರೆಗೆ ಯಾವ ತಂಡ ತಾತಂಡ ಕಪ್ ಚಾಂಪಿನಯ್ ಆಗಬಹುದು ಎಂಬ ಚರ್ಚೆ ನಡೆಯಲಿದೆ.
ಅಂಜಪರವಂಡ, ಮಂಡೇಪಂಡ, ನೆಲ್ಲಮಕ್ಕಡ, ಕುಲ್ಲೇಟಿರದಂಥ ಹಿಂದಿನ ವರ್ಷಗಳ ಕೊಡವ ಹಾಕಿ ಚಾಂಪಿಯನ್ ತಂಡಗಳು ಈ ಬಾರಿ ಸೆಮಿಫೈನಲ್ ಪ್ರವೇಶ ಪಡೆಯುವಲ್ಲಿ ವಿಫಲವಾದವು.
ಇದೇ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ರಿಂಕ್ ಹಾಕಿ ಪಂದ್ಯವನ್ನು ಪರಿಚಯಿಸಲಾಗಿತ್ತು. ಶನಿವಾರ ಜರುಗಿದ ರಿಂಕ್ ಹಾಕಿ ಪಂದ್ಯದ ಫೈನಲ್ನಲ್ಲಿ ಚೇಂದಂಡ ಕುಟುಂಬ ತಂಡವನ್ನು 5- 4 ಗೋಲುಗಳಿಂದ ಸೋಲಿಸಿದ ಅಂಜಪರವಂಡ ತಂಡ ತಾತಂಡ ರಿಂಕ್ ಹಾಕಿ ಚಾಂಪಿಯನ್ ಆಗಿದೆ.