ಬ್ಯಾಡ್ಮಿಂಟನ್: ಸೈನಾ, ಕಶ್ಯಪ್ ಮೇಲೆ ಹೆಚ್ಚಿದ ನಿರೀಕ್ಷೆ
ನವದೆಹಲಿ: ಬ್ಯಾಡ್ಮಿಂಟನ್‌ನ ವಿಶ್ವಕಪ್ ಎಂದೇ ಬಿಂಬಿತವಾಗಿರುವ ಥಾಮಸ್ ಹಾಗೂ ಉಬರ್ ಕಪ್ ಪಂದ್ಯಾವಳಿಯಲ್ಲಿ ಸೈನಾ ನೆಹ್ವಾಲ್ ಹಾಗೂ ಕಶ್ಯಪ್ ಸಾರಥ್ಯದ ಭಾರತ ತಂಡ, ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿ ಭಾನುವಾರದಿಂದ ಆರಂಭವಾಗಲಿದೆ. ಈ ಪಂದ್ಯಾವಳಿಯಲ್ಲಿ ಭಾರತದ ಪ್ರಮುಖ ತಾರಾ ಆಟಗಾರಾರು ಹೆಚ್ಚಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದು, ತವರಿನಲ್ಲೇ ಆಡುತ್ತಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ಪಂದ್ಯಾವಳಿಯಲ್ಲಿ ಎಂದಿನಂತೆ ಏಷ್ಯಾದ ಪ್ರಬಲ ರಾಷ್ಟ್ರಗಳಾದ ಚೀನಾ, ಇಂಡೋನೇಷ್ಯಾ ಹಾಗೂ ಮಲೇಷ್ಯಾ ಆಟಗಾರರು ಗಮನ ಸೆಳೆದಿದ್ದು, ಪಂದ್ಯಾವಳಿಯಲ್ಲಿ ರೋಚಕ ಕದನಗಳ ನಿರೀಕ್ಷೆಗಳಿವೆ. ಭಾರತ ತಂಡದ ಆಟಗಾರರ ಕಳೆದ ಒಂದು ವರ್ಷದ ಪ್ರದರ್ಶನ ಹೆಚ್ಚು ಗಮನ ಸೆಳೆಯುವಂತಿಲ್ಲ. ಹಾಗಾಗಿ ಪ್ರಮುಖ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೆ ತಮ್ಮ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಇದು ಮಹತ್ವವಾದ ಪಂದ್ಯಾವಳಿಯಾಗಿರುವುದರಿಂದ ಭಾರತ ಬ್ಯಾಡ್ಮಿಂಟನ್ ತಂಡ ಕನಿಷ್ಠ ಕ್ವಾಟರ್‌ಫೈನಲ್‌ಗೆ ಪ್ರವೇಶಿಸಲು ಎದುರು ನೋಡುತ್ತಿದೆ.
ಈ ಮಧ್ಯೆ ಮಹಿಳೆಯರ ತಂಡದಲ್ಲಿ ಅರುಂಧತಿ ಪಂಟವಾನೆ ಗಾಯಗೊಂಡಿದ್ದರಿಂದ ಅವರ ಬದಲು ಮಾಜಿ ರಾಷ್ಟ್ರೀಯ ಚಾಂಪಿಯನ್ ಸಯಾಲಿ ಗೋಖಲೆಗೆ ಅವಕಾಶ ನೀಡಲಾಗಿದೆ.