ಕಲಿಯಂಡ ಮುಡಿಗೆ ತಾತಂಡ
ವಿರಾಜಪೇಟೆ: 17 ವರ್ಷಗಳ ನಂತರ ಕೊಡವ ಹಾಕಿ ನಮ್ಮೆಯ ಫೈನಲ್ ಪ್ರವೇಶಿಸಿದ ಕಲಿಯಂಡ ತಂಡ ನಾಲ್ಕು ಬಾರಿಯ ಚಾಂಪಿಯನ್ ಬಲಿಷ್ಠ ಪಳಂಗಂಡ ತಂಡವನ್ನು ಸೋಲಿಸುವ ಮೂಲಕ ತಾತಂಡ ಹಾಕಿ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮೊದಲ ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಪಾಂಡಂಡ ಕಪ್ ಗೆದ್ದಿದ್ದ ಕಲಿಯಂಡ ಇದೀಗ 17ನೇ ವರ್ಷದ ಬಳಿಕ ಹಾಕಿ ಕಪ್ ಗೆದ್ದು ಗೆಲವಿನ ನಗೆ ಬೀರಿದೆ. ಕೆಚ್ಚೆದೆಯ ಆಟ ಪ್ರದರ್ಶಿಸಿದರೂ ಕಲಿಯಂಡ ತಂಡಕ್ಕೆ ಶರಣಾಗುವ ಮೂಲಕ ಸತತ ಎರಡನೇ ಬಾರಿಗೆ ಫೈನಲ್ನಲ್ಲಿ ಮುಗ್ಗರಿಸಿದ ಪಳಂಗಂಡ ತಂಡ ಪ್ರಶಸ್ತಿ ಕೈಚೆಲ್ಲಿ ನಿರಾಸೆ ಅನುಭವಿಸಿತು.
ಪಳಂಗಂಡ ತಂಡಕ್ಕೆ ಇಂದು ಅದೃಷ್ಟ ಒಲಿದು ಬರಲಿಲ್ಲ ಅನ್ನುವುದಕ್ಕಿಂತಲೂ ಕಲಿಯಂಡ ನಾಯಕ ಬಿದ್ದಪ್ಪ, ಗೋಲಿ ಸಂದೇಶ್ ಅಚ್ಚಯ್ಯ ಹಾಗೂ ಫುಲ್ಬ್ಯಾಕ್ ಆಟಗಾರರಾದ ಸಂಪತ್ ಹಾಗೂ ವಿನು ಅವರ ಅದ್ಭುತ ಕ್ಷೇತ್ರ ರಕ್ಷಣೆ ಪಳಂಗಂಡ ಆಟಗಾರರಿಗೆ ಮುಳುವಾಯಿತು.
ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಮಧ್ಯಾಹ್ನ 12.40ಕ್ಕೆ ಆರಂಭವಾದ ಫೈನಲ್ ಹಣಾಹಣಿಯಲ್ಲಿ ಸೆಣೆಸಾಡಿದ ಪಳಂಗಂಡ ಮತ್ತು ಕಲಿಯಂಡ ತಂಡ ಪ್ರೇಕ್ಷಕರಿಗೆ ರಸದೌತಣವನ್ನೇ ನೀಡಿತು.
ಮೊದಲಿಗೆ ಪಳಂಗಂಡ ತಂಡ ಕಲಿಯಂಡ ತಂಡದ ಡಿ ಆವರಣವನ್ನು ಭೇದಿಸಿ ಗೋಲು ಹೊಡೆಯಲು ಪ್ರಯತ್ನಿಸಿತು. ಎರಡು ಪೆನಾಲ್ಟಿ ಕಾರ್ನರ್ ಈ ಹಂತದಲ್ಲಿ ದೊರೆತರೂ ಕಲಿಯಂಡ ಗೋಲಿ ಹಾರಿ ಬಿದ್ದು ತಡೆದರು. ಪಂದ್ಯದ 10ನೇ ನಿಮಿಷ ಕಲಿಯಂಡಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ದೊರೆಯಿತು. ಗೋಲಾಗದಿದ್ದರೂ ಚಿಮ್ಮಿ ಬಂದ ಚೆಂಡನ್ನು ಕಲಿಯಂಡ ಸುಬ್ಬಯ್ಯ ನಾಯಕ ಬಿದ್ದಪ್ಪ ಅವರಿಗೆ ಪಾಸ್ ನೀಡಿದರು. ಪಳಂಗಂಡ ಡಿ ಆವರಣದಲ್ಲಿದ್ದ ನಾಯಕ ಬಿದ್ದಪ್ಪ ಮಿಂಚಿನ ಗೋಲು ಹೊಡೆದು ಕಲಿಯಂಡ ತಂಡಕ್ಕೆ 1-0 ಮುನ್ನಡೆ ಒದಗಿಸಿದರು.
ಗೋಲು ತಪ್ಪಿಸಿದ ಕಲಿಯಂಡ ಗೋಲಿ: ಪಳಂಗಂಡ ತಂಡ ಈ ಹಂತದಲ್ಲಿ ಗೋಲು ಸಮನಾಗಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರೂ ಕಲಿಯಂಡ ಗೋಲಿ ಪೂರ್ಣ ಅವಧಿಯ ಆಟದಲ್ಲಿ ವೀರೋಚಿತ ಆಟದ ಮೂಲಕ ಕನಿಷ್ಠ 8 ಗೋಲಾಗುವ ಅವಕಾಶಕ್ಕೆ ಅಡ್ಡಗೋಡೆಯಾಗಿ ತಡೆದರು. ಮುನ್ನಡೆ ಆಟಗಾರ ಪಳಂಗಂಡ ಅಮರ್ ಅಯ್ಯಮ್ಮ ಅವರ ಮಿಂಚಿನ ರಿವರ್ಸ್ ಫ್ಲಿಕ್ಗಳನ್ನೂ ಫುಲ್ಬ್ಯಾಕ್ ಹಾಗೂ ಗೋಲಿ ಉತ್ತಮವಾಗಿ ತಡೆದು, ಎದುರಾಳಿಯಲ್ಲಿ ನಿರಾಶೆ ಮೂಡಿಸುತ್ತಿದ್ದರು. 23ನೇ ನಿಮಿಷದಲ್ಲಿ ನಾಯಕ ಕಲಿಯಂಡ ಬಿದ್ದಪ್ಪ ಮತ್ತೊಂದು ಆಕರ್ಷಕ ಫೀಲ್ಡ್ ಗೋಲು ಹೊಡೆದು ತಂಡಕ್ಕೆ 2-0ದಿಂದ ಗೆಲವು ಒದಗಿಸಿದರು.
ವಿಜೇತ ತಂಡ 1 ಲಕ್ಷ ನಗದು ಹಾಗೂ ಟ್ರೋಫಿಯನ್ನು ಗೆದ್ದುಕೊಂಡರೆ, ರನ್ನರ್ಸ್ ತಂಡ 50 ಸಾವಿರ ನಗದು ಹಾಗೂ ಟ್ರೋಫಿಗೆ ತೃಪ್ತಿಪಟ್ಟುಕೊಂಡಿತು. ರಾಜ್ಯ ಸರ್ಕಾರ 10 ಲಕ್ಷ ಅನುದಾನ ಈವರೆಗೆ ನೀಡಿದ್ದು, ಇನ್ನು ಉಳಿಕೆ 20 ಲಕ್ಷ ಅನುದಾನ ಶೀಘ್ರ ಬಿಡುಗಡೆಗೊಳಿಸಲು ಸಹಕರಿಸುವಂತೆ ತಾತಂಡ ಪ್ರತಾಪ್ ಅವರು ಶಾಸಕ ಬೋಪಯ್ಯ ಅವರಲ್ಲಿ ಈ ಸಂದರ್ಭ ಮನವಿ ಮಾಡಿದರು.