ಕೆಕೆಆರ್ಗೆ ಕ್ವಾಲಿಫೈಯರ್ ಕಾತರ
ಐಪಿಎಲ್ ಏಳನೇ ಆವೃತ್ತಿಯ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಲು ಕೇವಲ ಒಂದೇ ಹೆಜ್ಜೆ ಬಾಕಿ ಇರುವ ಕೋಲ್ಕತಾ...
ಕೋಲ್ಕತಾ: ಐಪಿಎಲ್ ಏಳನೇ ಆವೃತ್ತಿಯ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಲು ಕೇವಲ ಒಂದೇ ಹೆಜ್ಜೆ ಬಾಕಿ ಇರುವ ಕೋಲ್ಕತಾ ನೈಟ್ರೈಡರ್ಸ್, ಅದೃಷ್ಟದ ಆಸರೆಯನ್ನು ಅಪೇಕ್ಷಿಸುತ್ತಿರುವ ರಾಯಲ್ ಚಾಲೆಂಜರ್ಸ್ ತಂಡವನ್ನು ಮಣಿಸುವ ಮೂಲಕ ಅಗ್ರ ನಾಲ್ಕರ ಸ್ಥಾನ ಗಟ್ಟಿ ಮಾಡಿಕೊಳ್ಳಲು ಸಜ್ಜಾಗಿದೆ.
ಗುರುವಾರ ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ, ಆರ್ಸಿಬಿ ಹಾಗೂ ಕೆಕೆಆರ್ ಪಾಲಿಗೆ ಮಹತ್ವದ್ದಾಗಿದೆ. ಸತತ ಐದು ಪಂದ್ಯಗಳಲ್ಲಿ ಗೆಲವಿನ ನಗೆ ಬೀರಿರುವ ಕೆಕೆಆರ್ ಗೆಲವಿನ ಫೇವರಿಟ್ ತಂಡವಾಗಿದೆ.
ಆರ್ಸಿಬಿ ಹಾಗೂ ಕೆಕೆಆರ್ ಪಂದ್ಯಾವಳಿಯಲ್ಲಿ ಸಾಗಿ ಬಂದ ಹಾದಿ ತದ್ವಿರುದ್ಧವಾಗಿದೆ. ಆರ್ಸಿಬಿ ಸತತ ಎರಡು ಗೆಲವಿನೊಂದಿಗೆ ಪಂದ್ಯಾವಳಿಯನ್ನು ಆರಂಭಿಸಿತಾದರೂ, ನಂತರದ ಪಂದ್ಯಗಳಲ್ಲಿ ತನ್ನ ಲಯ ಕಳೆದುಕೊಂಡು ಸೋಲಿನ ಹಾದಿಯಲ್ಲಿ ಸಾಗಿತು. ಇನ್ನು ಕೆಕೆಆರ್ ಆರಂಭಿಕ ಪಂದ್ಯಗಳಲ್ಲಿ ಹೆಚ್ಚು ಸೋಲಿನ ಕಹಿ ಅನುಭವಿಸಿತು. ಟೂರ್ನಿಯ ದ್ವಿತಿಯಾರ್ಧದ ಪಂದ್ಯಗಳಲ್ಲಿ ಗೆಲವಿನ ಕುದುರೆ ಏರುವ ಮೂಲಕ ಕಠಿಣವಾಗಿದ್ದ ಪ್ಲೇ ಆಫ್ ಹಂತದ ಪ್ರವೇಶವನ್ನು ಸುಲಭವಾಗಿಸಿಕೊಂಡಿದೆ.
ಆರ್ಸಿಬಿ ತಂಡ ಆರಂಭಿಕ ಓವರ್ಗಳಲ್ಲಿ ಟಿ20 ಪಂದ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವಲ್ಲಿ ವಿಫಲವಾಗುತ್ತಿದೆ. ಟಿ20 ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಯ್ಲ್ ಸೇರಿದಂತೆ ಇತರೆ ಬ್ಯಾಟ್ಸ್ಮನ್ಗಳ ಸ್ಥಿರ ಪ್ರದರ್ಶನದ ಕೊರತೆ ತಂಡಕ್ಕೆ ಮುಳುವಾಗಿದೆ. ಅಲ್ಲದೆ ತಂಡ ಎಬಿ ಡಿವಿಲಿಯರ್ಸ್ ಇನಿಂಗ್ಸ್ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದರೆ ತಪ್ಪಿಲ್ಲ.
ಪಾರ್ಥಿವ್ ಪಟೇಲ್ ಹಾಗೂ ಕ್ರಿಸ್ ಗೇಯ್ಲ್ ಜೋಡಿ ಇನಿಂಗ್ಸ್ ಆರಂಭದಲ್ಲಿ ಮಂದಗತಿಯ ಬ್ಯಾಟಿಂಗ್ ಮಾಡುತ್ತಿದೆ. ಇದು ಅಂತಿಮ ಓವರ್ಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ.
ಯುವರಾಜ್ ಹಾಗೂ ಎಬಿ ಡಿವಿಲಿಯರ್ಸ್ ಅಂತಿಮ ಓವರ್ಗಳಲ್ಲಿ ರನ್ ಗಳಿಸಿದರೆ ಮಾತ್ರ ತಂಡ ಸುಸ್ಥಿತಿಗೆ ತಲುಪುತ್ತದೆ. ಇಲ್ಲವಾದರೆ ತಂಡ ಅಲ್ಪಮೊತ್ತಕ್ಕೆ ತೃಪ್ತಿಪಡುವಂತಾಗುತ್ತದೆ.ಇನ್ನು ಕಳೆದ ಪಂದ್ಯದಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ದಾಖಲಿಸಿದ್ದು, ತಂಡಕ್ಕೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.
ಇನ್ನು ಕೆಕೆಆರ್ ಆರಂಭದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತಾದರೂ, ಭಾರತ ತಂಡದ ಬಾಗಿಲು ತಟ್ಟುವ ಪ್ರಯತ್ನ ನಡೆಸುತ್ತಿರುವ ಗೌತಮ್ ಗಂಭೀರ್ ಹಾಗೂ ರಾಬಿನ್ ಉತ್ತಪ್ಪ ತಂಡಕ್ಕೆ ಅಗತ್ಯ ರೀತಿಯಲ್ಲಿ ಭದ್ರ ಅಡಿಪಾಯ ಹಾಕಿಕೊಡುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ, ಆಲ್ರೌಂಡ್ ಆಟಗಾರ ಶಕೀಬ್ ಅಲ್ ಹಸನ್, ಜಾಕ್ ಕಾಲಿಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಕಾಣಿಕೆ ನೀಡುತ್ತಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಸುನಿಲ್ ನಾರಾಯಣ್ ಎಂದಿನಂತೆ ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದು, ಮಾರ್ನ್ ಮಾರ್ಕೆಲ್, ಪಿಯೂಶ್ ಹಾಗೂ ವಿನಯ್ ಪ್ರಮುಖ ಅಸ್ತ್ರವಾಗಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲೂ ಆರ್ಸಿಬಿಗಿಂತ ಕೆಕೆಆರ್ ಸಂಘಟಿತ ದಾಳಿ ನಡೆಸುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.