ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸನ್‌ರೈಸರ್ಸ್‌ಗೆ ಸೂಪರ್ ಕಿಂಗ್ಸ್ ಸವಾಲು

Mainashree
Updated On : 21 May 2014, 10:22 am

ರಾಂಚಿ: ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದರೂ, ಕಳೆದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಏಳನೇ ಆವೃತ್ತಿಯ ಗುರುವಾರದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದ್ದು, ಗೆಲವಿನ ಲಯಕ್ಕೆ ಮರಳುವ ಒತ್ತಡದಲ್ಲಿದೆ.   ಇಲ್ಲಿನ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಸಿಎಸ್‌ಕೆ ಮತ್ತೆ ಗೆಲವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.
ಟೂರ್ನಿಯಲ್ಲಿ ಪ್ಲೇ ಆಫ್ ಸುತ್ತು ಆರಂಭವಾಗುವ ಮುನ್ನ ಸಿಎಸ್‌ಕೆ ಇನ್ನು ಎರಡು ಪಂದ್ಯಗಳನ್ನು ಆಡಬೇಕಿದ್ದು, ಈ ಪಂದ್ಯಗಳಲ್ಲಿ ಗೆಲವು ದಾಖಲಿಸುವ ಮೂಲಕ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸಿದ್ಧತೆ ನಡೆಸಿದೆ.
ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ಲೇ ಆಫ್ ಆಸೆ ಬಹುತೇಕ ಕಮರಿದೆ. ಹಾಗಾಗಿ ಈ ಪಂದ್ಯದಲ್ಲಿ ಗೆಲವು ಸಾಧಿಸುವ ಮೂಲಕ ಪಂದ್ಯಾವಳಿಗೆ ಉತ್ತಮ ರೀತಿಯಲ್ಲಿ ತೆರೆ ಎಳೆಯಲು ಸಜ್ಜಾಗಿದೆ.
ಸಿಎಸ್‌ಕೆ ತಂಡದ ಆರಂಭಿಕ ಜೋಡಿ ಪಂದ್ಯಾವಳಿಯಲ್ಲಿ ಅತ್ಯಂತ ಯಶಸ್ವಿಯಾಗಿದೆ. ಆದರೆ ಈ ಜೋಡಿ ಕಳೆದೆರಡು ಪಂದ್ಯಗಳಲ್ಲಿ ರನ್ ಗಳಿಸದಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಇನ್ನು ಸುರೇಶ್ ರೈನಾ ಎಂದಿನಂತೆ ತಂಡದ ಬೆನ್ನೆಲುಬಾಗಿ ನಿಂತಿದ್ದು, ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಹೆಚ್ಚು ರನ್ ಗಳಿಸಬೇಕಿದೆ.
ಸ್ಪಿನ್‌ಗೆ ನೆರವಾಗುವಂತಹ ಪಿಚ್‌ನಲ್ಲಿ ಎಂದಿನಂತೆ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಪ್ರಮುಖ ಪಾತ್ರ ವಹಿಸಲಿದ್ದು, ಅಗತ್ಯ ಬಿದ್ದರೆ ರೈನಾ ಬೌಲಿಂಗ್ ಸೇವೆಗೂ ಸಿದ್ಧವಾಗಿದ್ದಾರೆ.
ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಕಳೆದ ಕೆಲ ಪಂದ್ಯಗಳಲ್ಲಿ ಆರಂಭಿಕರಿಂದ ಉತ್ತಮ ಆರಂಭ ಪಡೆಯುತ್ತಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ರೀತಿಯಲ್ಲಿ ರನ್ ಗಳಿಸುತ್ತಿದ್ದು ತಂಡದಲ್ಲಿ ಒತ್ತಡ ಕಡಿಮೆ ಮಾಡಿದೆ.
ಉತ್ತಮ ವೇಗದ ಬೌಲಿಂಗ್ ವಿಭಾಗ ಹೊಂದಿರುವ ಸನ್‌ರೈಸರ್ಸ್ ಈ ಪಿಚ್‌ನಲ್ಲಿ ಪರಿಣಾಮಕಾರಿಯಾಗುವುದೇ ಎಂಬ ಪ್ರಶ್ನೆ ಇದೆ. ಅಮಿತ್ ಮಿಶ್ರಾ ಹಾಗೂ ಕರಣ್ ಶರ್ಮಾ ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಜವಾಬ್ದಾರಿ ನಿರ್ವಹಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement