ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಉತ್ತಪ್ಪಗೆ ಆರ್‌ಸಿಬಿ ಬೆಪ್ಪಪ್ಪಾ!

ಬ್ಯಾಟಿಂಗ್‌ನಲ್ಲಿ ರಾರಾಜಿಸಿದ ರಾಬಿನ್ ಉತ್ತಪ್ಪ ಮತ್ತು ಬೌಲಿಂಗ್ ಬಿರುಗಾಳಿ...

Mainashree
Updated On : 22 May 2014, 10:47 am

ಕೋಲ್ಕತಾ: ಬ್ಯಾಟಿಂಗ್‌ನಲ್ಲಿ ರಾರಾಜಿಸಿದ ರಾಬಿನ್ ಉತ್ತಪ್ಪ ಮತ್ತು ಬೌಲಿಂಗ್ ಬಿರುಗಾಳಿ ತೋರಿದ ಸುನಿಲ್ ನಾರಾಯಣ ಅವರು ಗುರುವಾರ ನಡೆದ ಐಪಿಎಲ್ ಮೊದಲ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್‌ಗೆ 30 ರನ್‌ಗಳ ಅಂತರದಿಂದ ಜಯ ತಂದುಕೊಟ್ಟರು.     ಇದರೊಂದಿಗೆ ಗೌತಮ್ ಗಂಭೀರ್ ನಾಯಕತ್ವದ ಕೋಲ್ಕತಾ ತಂಡ, ಕ್ವಾಲಿಫೈಯರ್ ಹಂತಕ್ಕೆ ತನ್ನ ಸ್ಥಾನವನ್ನೂ ಖಚಿತಪಡಿಸಿಕೊಂಡಿತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಕೋಲ್ಕತಾ ನೈಟ್ ರೈಡರ್ಸ್ ತಂಡ, 4 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು.
ನಂತರ 196 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೇವಲ 165 ರನ್‌ಗಳಿಗೆ ನಿಯಂತ್ರಿಸಿದ ಕೋಲ್ಕತಾ, ವಿಜಯದ ದಡ ಸೇರಿತು. ಈ ಮೂಲಕ ಕೋಲ್ಕತಾ ಆಡಿರುವ ಒಟ್ಟು 13 ಪಂದ್ಯಗಳ ಪೈಕಿ 8ರಲ್ಲಿ ಜಯ ಸಾಧಿಸಿ 16 ಅಂಕಳೊಂದಿಗೆ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜತೆ ಜಂಟಿ 2ನೇ ಸ್ಥಾನ ಹಂಚಿಕೊಂಡಿದೆ.
ನಾರಾಯಣ ಮಾರಕ ಬೌಲಿಂಗ್: ಕಠಿಣ ಸವಾಲನ್ನು ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಮಾರಕವಾಗಿ ಪರಿಣಮಿಸಿದ್ದು ಕೋಲ್ಕತಾ ತಂಡದ ಸ್ಪಿನ್ ಬೌಲರ್ ಸುನಿಲ್ ನಾರಾಯಣ. ನಾಲ್ಕು ಓವರ್ ಬೌಲಿಂಗ್ ಮಾಡಿದ ನಾರಾಯಣ 20 ರನ್ ನೀಡಿ ನಾಲ್ಕು ಪ್ರಮುಖ ವಿಕೆಟ್ ಕಬಳಿಸಿದರು. ವಿರಾಟ್ ಕೊಹ್ಲಿ (38), ಯುವರಾಜ್ ಸಿಂಗ್ (22), ಡಿವಿಲಿಯರ್ಸ್ (13) ಹಾಗೂ ಯೋಗೇಶ್ ಟಕಾವಾಲೆ (45) ವಿಕೆಟ್ ಪಡೆದ ನಾರಾಯಣ್ ಆರ್‌ಸಿಬಿ ತಂಡಕ್ಕೆ ದೊಡ್ಡ ಶಾಖ್ ನೀಡಿದರು. ನಾರಾಯಣ ಹೊರತುಪಡಿಸಿದರೆ, ಕೋಲ್ಕತಾ ಪರ ಉಮೇಶ್ ಯಾದವ್ 1 ವಿಕೆಟ್ ಪಡೆದರು.
ಟಕಾವಾಲೆ ಮತ್ತು ವಿರಾಟ್ ಕೊಹ್ಲಿ ಹೊರತುಪಡಿಸಿದರೆ, ಇತರ ಬ್ಯಾಟ್ಸ್‌ಮನ್‌ಗಳು ತಕ್ಕ ಬ್ಯಾಟಿಂಗ್ ನಡೆಸಲಿಲ್ಲ. ಹೀಗಾಗಿ ಬೆಂಗಳೂರು ತಂಡ ಹೆಚ್ಚಿನ ರನ್‌ಗಳ ಅಂತರದಿಂದ ಸೋಲನುಭವಿಸಿತು.
ರಾಬಿನ್ ಆರೇಂಜ್ ಕ್ಯಾಪ್: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಬಿನ್ ಉತ್ತಪ್ಪ (ಅಜೇಯ 83) ಮತ್ತು ಆಲ್ರೌಂಡ್ ಆಟಗಾರ ಶಕಿಬ್ ಅಲ್ ಹಸನ್ (60) ಅಮೋಘ ಅರ್ಧ ಶತಕ ದಾಖಲಿಸುವ ಮೂಲಕ, ಆತಿಥೇಯ ಕೋಲ್ಕತಾ ಬೃಹತ್ ಮೊತ್ತ ದಾಖಲಿಸಿತ್ತು.
ರನ್ ಮಳೆಗರೆಯುತ್ತಿರುವ ಉತ್ತಪ್ಪ ಪ್ರಸಕ್ತ ಐಪಿಎಲ್‌ನಲ್ಲಿ ಒಟ್ಟು 13 ಪಂದ್ಯಗಳನ್ನಾಡಿದ್ದು, 47.66 ಸರಾಸರಿಯಲ್ಲಿ 572 ರನ್ ಗಳಿಸುವ ಮೂಲಕ ಆರೇಂಜ್ ಕ್ಯಾಪ್ ಗಿಟ್ಟಿಸಿದ್ದಾರೆ. ಇದರೊಂದಿಗೆ, ಅದ್ಭುತ ಫಾರ್ಮ್‌ಗೆ ಮರಳುವ ಮೂಲಕ ಟೀಂ ಇಂಡಿಯಾ ಟಿ20 ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ಮೂಡಿಸಿದ್ದಾರೆ.
51 ಎಸೆತಗಳನ್ನು ಎದುರಿಸಿದ ಉತ್ತಪ್ಪ ಅರ್ಧ ಶತಕದಲ್ಲಿ 1 ಸಿಕ್ಸರ್ ಮತ್ತು 10 ಬೌಂಡರಿಗಳು ಸೇರಿದ್ದರೆ, 38 ಎಸೆತಗಳನ್ನು ಎದುರಿಸಿದ ಶಕೀಬ್ ಅಲ್ ಹಸನ್ ಅರ್ಧ ಶತಕದಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು. ಅತ್ಯಾಕರ್ಷಕ ಜತೆಯಾಟ ಪ್ರದರ್ಶಿಸಿದ ಈ ಇಬ್ಬರು 4ನೇ ವಿಕೆಟ್‌ಗೆ 121 ರನ್‌ಗಳ ಶತಕದಾಟ ಪ್ರದರ್ಶಿಸಿದರು.
ಕೋಲ್ಕತಾ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಯೂಸುಫ್ ಪಠಾಣ್ (22) 7ನೇ ಓವರ್‌ನ ಕೊನೆಯಲ್ಲಿ ರನೌಟ್ ಆಗಿ ಪೆವಲಿಯನ್ ಸೇರಿಕೊಂಡರು.
ಇನ್ನು ನಾಯಕ ಗೌತಮ್ ಗಂಭೀರ್ (4) ವೈಫಲ್ಯ ಕಂಡರು. ಕರ್ನಾಟಕದ ಮನೀಷ್ ಪಾಂಡೆ (13) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.    ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮಿಚೆಲ್ ಸ್ಟಾರ್ಕ್, ಅಶೋಕ್ ದಿಂಡಾ ಹಾಗೂ ಅಬು ನಚಿಮ್ ಅವರು ತಲಾ ಒಂದು ವಿಕೆಟ್ ಕಬಳಿಸಿದರು.    

 ದಾಖಲೆ ಬರೆದ ರಾಬಿನ್
ಸ್ಥಿರ ಪ್ರದರ್ಶನದ ಮೂಲಕ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಯಶಸ್ಸಿನ ಬೆನ್ನೆಲುಬಾಗಿ ನಿಂತಿರುವ ರಾಬಿನ್ ಉತ್ತಪ್ಪ, ಗುರುವಾರ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.
ಆರ್‌ಸಿಬಿ ವಿರುದ್ಧ 51 ಎಸೆತಗಳಲ್ಲಿ ಅಜೇಯ 83 ರನ್ ದಾಖಲಿಸಿರುವ ಉತ್ತಪ್ಪ, ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಸತತ ಎಂಟು ಬಾರಿ 40ಕ್ಕೂ ಹೆಚ್ಚು ರನ್ ಬಾರಿಸಿದ ಆಟಗಾರನಾಗಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಎಚ್‌ಡಿ ಅಕರ್‌ಮನ್ 2006ರಲ್ಲಿ ಸತತ ಆರು ಬಾರಿ 40ಕ್ಕೂ ಹೆಚ್ಚು ರನ್ ಬಾರಿಸಿದ್ದರು.
ಇನ್ನು ಐಪಿಎಲ್‌ನಲ್ಲೂ ಇದು ದಾಖಲೆಯಾಗಿದ್ದು, ಈ ಹಿಂದೆ ಮ್ಯಾಥ್ಯೂ ಹೇಡನ್ (2009), ವೀರೇಂದ್ರ ಸೆಹ್ವಾಗ್ (2012) ಹಾಗೂ ಮೈಕಲ್ ಹಸ್ಸಿ (2013) ಸತತ ಐದಿ ಬಾರಿ 40ಕ್ಕೂ ಹೆಚ್ಚಿನ ರನ್ ದಾಖಲಿಸಿದ್ದು, ಎರಡನೇ ಸಾಧನೆಯಾಗಿದೆ.

ಸ್ಕೋರ್ ವಿವರ

ಕೋಲ್ಕತಾ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 195
ರಾಬಿನ್ ಉತ್ತಪ್ಪ ಅಜೇಯ 83 (51), ಗೌತಮ್ ಗಂಭೀರ್ ಸಿ ಟಕಾವಾಲೆ ಬಿ ಸ್ಟಾರ್ಕ್ 4 (4), ಮನೀಷ್ ಪಾಂಡೆ ಸಿ ಸ್ಟಾರ್ಕ್ ಬಿ ದಿಂಡಾ 13 (12), ಯೂಸುಫ್ ಪಠಾಣ್ ರನೌಟ್ (ಕೊಹ್ಲಿ/ಟಾಕಾವಾಲೆ) 22 (13), ಶಕಿಬ್ ಅಲ್ ಹಸನ್ ಬಿ ಅಹ್ಮದ್ 60 (38), ರೇಯನ್ ಟೆನ್ ಡಯಾಶೇಟ್ ಅಜೇಯ 6 (3), ಇತರೆ (ಬೈ-1, ಲೆಗ್‌ಬೈ-1, ವೈಡ್-4, ನೋಬಾಲ್-1) 7
ವಿಕೆಟ್ ಪತನ: 1-5, 2-23, 3-56, 4-177.
ಬೌಲಿಂಗ್ ವಿವರ: ಮಿಚೆಲ್ ಸ್ಟಾರ್ಕ್ 4-0-32-1, ಅಶೋಕ್ ದಿಂಡಾ 4-0-38-1, ಅಬು ನಚಿಮ್ 4-0-33-1, ಮುತ್ತಯ್ಯ ಮುರಳೀಧರನ್ 2-0-19-0, ಯುವರಾಜ್ ಸಿಂಗ್ 2-0-21-0,
ಯುಜುವೇಂದ್ರ ಚಹಾಲ್ 4-0-50-0
ಬೆಂಗಳೂರು 20 ಓವರ್‌ಗಳಲ್ಲಿ 5 ವಿಕೆಟ್‌ಗೆ 165
ಕ್ರಿಸ್ ಗೇಯ್ಲ್ ಎಲ್‌ಬಿ ಉಮೇಶ್ ಯಾದವ್ 6 (9), ಯೋಗೇಶ್ ಟಕಾವಾಲೆ ಹಿ ನಾರಾಯಣ 45 (36), ವಿರಾಟ್ ಕೊಹ್ಲಿ ಸಿ ಮಾರ್ಕೆಲ್ ಬಿ ನಾರಾಯಣ 38 (31), ಯುವರಾಜ್ ಸಿಂಗ್ ಸಿ ವಿನಯ್ ಬಿ ನಾರಾಯಣ 22 (12), ಡಿವಿಲಿಯರ್ಸ್ ಬಿ ನಾರಾಯಣ 13 (13), ಸಚಿನ್ ರಾಣಾ ಅಜೇಯ 19 (12), ಮಿಚೆಲ್ ಸ್ಟಾರ್ಕ್ ಅಜೇಯ 12 (8)
ಇತರೆ: (ಲೆಗ್‌ಬೈ-8, ವೈಡ್-1, ನೋಬಾಲ್-1) 10
ವಿಕೆಟ್ ಪತನ: 1-7, 2-92, 3-93, 4-129, 5-133.
ಬೌಲಿಂಗ್ ವಿವರ: ಮಾರ್ನ್ ಮಾರ್ಕೆಲ್ 4-0-21-0, ಉಮೇಶ್ ಯಾದವ್ 4-0-45-1, ಸುನಿಲ್ ನಾರಾಯಣ 4-0-20-4, ವಿನಯ್ ಕುಮಾರ್ 4-0-44-0, ಶಕೀಬ್ ಅಲ್ ಹಸನ್ 4-0-27-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement