ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ನಯನಾ ಮನೋಹರ

Vishwanath S
Updated On : 23 May 2014, 2:22 am

'ವಿಶ್ವ ಚಾಂಪಿಯನ್‌' ಪಟ್ಟ ಬಹುಶಃ ಕ್ರೀಡಾಪಟು ಹೊರತುಪಡಿಸಿ ಇನ್ನಾರಿಗೂ ಸಾಧ್ಯವಿಲ್ಲ ಎನ್ನುವ ಮಾತೊಂದಿದೆ. ಅಂಥ ಬೃಹತ್ ಕನಸನ್ನು ಕಟ್ಟಿಕೊಂಡು ವಿದೇಶಕ್ಕೆ ಹಾರಿದ್ದ ಬ್ಯಾಡಗಿ ಕರಾಟೆ ಕ್ರೀಡಾಪಟು, ಎಂಜಿನಿಯರಿಂಗ್ ವಿದ್ಯಾರ್ಥಿನಿ ನಯನಾ ಹೊಸಮನಿ, ಮಲೇಷ್ಯಾದಲ್ಲಿ ಭಾರತದ ಧ್ವಜ ಹಾರಿಸುವ ಮೂಲಕ ಚಿನ್ನದ ಪದಕದೊಂದಿಗೆ ತವರಿಗೆ ಮರಳಿದ್ದಾಳೆ.
ಸೋಲಿನ ರುಚಿ
ಮೇ 1ರಿಂದ 4ರವರೆಗೆ ಮಲೇಷ್ಯಾದಲ್ಲಿ ನಡೆದ ವಿಶ್ವ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಂಡ ನಯನಾ ಬಾಲಕಿಯರ ಕಥಾ ವಿಭಾಗದ ಅಂತಿಮ ಪಂದ್ಯದಲ್ಲಿ ಕೊರಿಯಾ ಎದುರಾಳಿ ವಿರುದ್ಧ 5 ಅಂಕಗಳಿಂದ ಜಯ ದಾಖಲಿಸಿದ್ದಾಳೆ. ವಿಶ್ವ ಚಾಂಪಿಯನ್ ಗೆಲವು ಸುಲಭದ ಮಾತೇನಲ್ಲ. ಎರಡು ಮದಗಜಗಳ ಹೋರಾಟಕ್ಕೆ ಸಮ. ಆದರೆ, ತನ್ನ ಚಾಕಚಕ್ಯತೆ ಪ್ರದರ್ಶಿಸಿದ ನಯನಾ ಕೊನೆಗೂ ಕೊರಿಯಾದ ಆಟಗಾರ್ತಿಗೆ ಸೋಲಿನ ರುಚಿ ತೋರಿಸಿದ್ದಾಳೆ.
ಪಾಲಕರ ಇಚ್ಛಾಶಕ್ತಿ ವಿರುದ್ಧ
ಬಾಲ್ಯದಲ್ಲೇ ನಯನಾ ತುಂಟಾಟದ ಶಕ್ತಿ ಪ್ರದರ್ಶನಗಳಿಗೇನೂ ಕೊರತೆಯಿರಲಿಲ್ಲ. ಕುಟುಂಬದ ಹಿನ್ನೆಲೆ ನೋಡಿದರೆ ವ್ಯಾಪಾರಿ ಯುವಕನೊಬ್ಬನನ್ನು ವರಿಸಿ ಗಂಡನ ಮನೆ ಸೇರಬೇಕಾಗಿತ್ತು. ಆದರೆ, ಪಾಲಕರ ಇಚ್ಚಾಶಕ್ತಿಗೆ ವಿರುದ್ಧವಾಗಿ ಕರಾಟೆಯನ್ನು ಮೈಗೂಡಿಸಿಕೊಂಡ ಈಕೆ ಸತತ ಪರಿಶ್ರಮದಿಂದ ಸಾಧನೆಯ ಒಂದೊಂದೇ ಮೆಟ್ಟಿಲನ್ನೇರಿದ್ದಾಳೆ. ತಾಯಿ ಸುಧಾ ಆಸೆಯೇ ಬೇರೆಯಾಗಿತ್ತು. ಅದಾಗ್ಯೂ, ಒಲ್ಲದ ಮನಸ್ಸಿನಿಂದಲೇ ಮಗಳ ಸಾಧನೆಗೆ ಸಾಥ್ ನೀಡಿದ್ದಾರೆ.
ಹೇಳಿ ಮಾಡಿಸಿದ ಮೈಕಟ್ಟು
ಕರಾಟೆಗೆ ಎತ್ತರದ ನಿಲುವು ಮತ್ತು ದೇಹದ ಅವಶ್ಯಕತೆಯಿಲ್ಲ, ಕಪ್ಪನೆಯ ಬಣ್ಣ ತಲೆಯಲ್ಲಿ ಗುಂಗುರ ಕೂದಲು ಇರುವ ಈಕೆಯನ್ನು ನೋಡಿದರೆ ಥಟ್ಟನೆ ನೆನಪಾಗುವುದು ಸಿದ್ಧಿ ಜನಾಂಗ, ಸಾಮಾನ್ಯ ದೇಹದಾರ್ಢ್ಯ ಹೊಂದಿದ್ದರೂ, ಕರಾಟೆಗೆ ಮಾತ್ರ ಹೇಳಿಮಾಡಿಸಿದ ಮೈಕಟ್ಟು. ಎದುರಾಳಿಗಳ ಮೇಲೆ ದಾಳಿ ಪ್ರಾರಂಭಿಸಿದರೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮನೆ ಸಂಪ್ರದಾಯದಂತೆ ಸಸ್ಯಾಹಾರ ಸೇವನೆ ಮಾಡುತ್ತಿರುವ ನಯನಾ, ಅದರಲ್ಲೂ ಶಕ್ತಿ ಇದೆ ಎಂಬುದನ್ನು ಸಾಬೀತುಪಡಿಸಿದ್ದಾಳೆ.
ಪರಿಶ್ರಮಕ್ಕೆ ಸಂದ ಫಲ
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬ್ಯಾಡಗಿಯಲ್ಲೇ ಮುಗಿಸಿದ ನಯನಾ, ಸದ್ಯ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಗ್ಲೋಬಲ್ ತಾಂತ್ರಿಕ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ, ಓದಿನ ಜೊತೆಗೆ ನಿರಂತರ ಅಭ್ಯಾಸ ನಡೆಸುವ ಈಕೆ ಜಪಾನಿನ ಹಿರೋಮೂ ಮತ್ತು ಹಿನೋಜಾವಾ ಅವರಲ್ಲಿ ಕಠಿಣ ತರಬೇತಿ ದಿನಗಳನ್ನು ಮೆಲುಕು ಹಾಕುತ್ತಾಳೆ. ಅಂದು ಕಷ್ಟಪಟ್ಟಿದ್ದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾಳೆ. ಕರಾಟೆ ಗುರು ನಾರಾಯಣ ಪೂಜಾರ ಬೆಂಬಲವೇ ಇಷ್ಟೆಲ್ಲ ಸಾಧನೆಗೆ ಕಾರಣವೆನ್ನುತ್ತಾಳೆ.
ಬ್ಲಾಕ್ ಬೆಲ್ಟ್
ಬ್ಯಾಡಗಿ ಚಿಲ್ಲೀಸ್ ಕ್ಲಬ್‌ನಲ್ಲಿ 2003 ರಿಂದ ಕರಾಟೆ ತರಬೇತಿ ಪಡೆಯಲಾರಂಭಿಸಿದ ನಯನಾ, 2008ರಲ್ಲಿ ಕೋರಿಯೋ- ಗುಜೋರಿಯೋ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಫಸ್ಟ್ ಡಿಗ್ರಿ ಬ್ಲ್ಯಾಕ್ ಬೆಲ್ಟ್, 2013ರಲ್ಲಿ ಜರುಗಿದ ಜಪಾನ್ ಕನರಿಯೋಕಾ ನುಗಜೋರಿಯೋ ಪರೀಕ್ಷೆಯಲ್ಲಿ ಸೆಕೆಂಡ್ ಡಿಗ್ರಿ ಬ್ಲ್ಯಾಕ್ ಬೆಲ್ಟ್, ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾ ಚೆನ್ನೈನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಫಸ್ಟ್ ಡಿಗ್ರಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾಳೆ.
ಕರಾಟೆ ಇದೊಂದು ಆತ್ಮರಕ್ಷಣಾ ಕಲೆ (ಮಾರ್ಷಲ್ ಆರ್ಟ್ಸ್) ಆಗಿದ್ದರೂ ಏಕಾಗ್ರತೆ, ಶ್ರಮ, ಗಟ್ಟಿತನ, ಚಾಣಾಕ್ಷತೆ ಎಲ್ಲವನ್ನೂ ಒಳಗೊಂಡಿರುವ ನಯನಾಳ ಕ್ರೀಡಾ ಬೆಳವಣಿಗೆ ನೋಡಿದರೆ ಎಂಥವರೂ ನಿಬ್ಬೆರಗಾಗುವಂತಿದೆ.
ವ್ಯಾಪಾರಿ ಕುಟುಂಬದ ಪ್ರತಿಭೆ
ನಯನಾ ಜನಿಸಿದ್ದು ಅಪ್ಪಟ ವ್ಯಾಪಾರೀ ಕುಟುಂಬದಲ್ಲಿ. ಅಪ್ಪ ಬಸನಗೌಡ ಹೊಸಮನಿ. ಅಜ್ಜ ಮಹದೇವಪ್ಪ. ಈ ಇಬ್ಬರೂ ಮೆಣಸಿನಕಾಯಿ ವ್ಯಾಪಾರದಿಂದಲೇ ತಮ್ಮನ್ನು ಪರಿಚಯಿಸಿಕೊಂಡಿರುವ ವ್ಯಕ್ತಿಗಳು.


-ಶಿವಾನಂದ ಮಲ್ಲನಗೌಡರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement