ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಾಯ್‌ಚೆಂಡು!

Vishwanath S
Updated On : 23 May 2014, 2:22 am

ಮೌಥ್ ಟೇಬಲ್ ಟೆನ್ನಿಸ್!
ಇದೇನಿದು ಹೊಸ ಬಗೆಯ ಆಟ ಎಂದು ಆಶ್ಚರ್ಯವಾಯಿತೇ?
ಇಲ್ಲ, ಇದು ಹೊಸ ಆಟವೇನಲ್ಲ. ಸಾಧಕನ ಹೊಸದೊಂದು ಮಾರ್ಗ ಅಂದರೆ ಖಂಡಿತಾ ತಪ್ಪಾಗಲಾರದು. ಸಾಧನೆಗೆ ಯಾವುದೇ ದೈಹಿಕ ನ್ಯೂನತೆ ಅಡ್ಡಿ ಬಾರದು. ಸಾಧಿಸುವ ಛಲವೊಂದಿದ್ದರೆ ಎಂಥ ಸಾಧನೆಯನ್ನಾದರೂ ಮಾಡಬಹುದು. ಇದಕ್ಕೆ ತಾಜಾ ನಿದರ್ಶನವೇ ಇಬ್ರಾಹಿಮ್ ಹ್ಯಾಮ್ಯಾಟೋ.
ಆತ ಈಜಿಪ್ತ್ ದೇಶದ ಟೇಬಲ್ ಟೆನಿಸ್ ಆಟಗಾರ. ಚಿಕ್ಕಂದಿನಿಂದಲೂ ಟೇಬಲ್ ಟೆನಿಸ್‌ನಲ್ಲಿ ಆಸಕ್ತಿ. ಅದರಲ್ಲೇ ಸಾಧನೆ ಮಾಡಬೇಕೆಂಬ ಹಠ. ಆ ನಿಟ್ಟಿನಲ್ಲಿ ಸದಾ ಪರಿಶ್ರಮ ಪಡುತ್ತಿದ್ದ. ಆದರೆ, ವಿಧಿಯಾಟವೇ ಬೇರೆ ಆಗಿತ್ತು. ಇಬ್ರಾಹಿಂ 10 ವರ್ಷದ ಬಾಲಕನಾಗಿದ್ದಾಗ ಅಪಘಾತದಲ್ಲಿ ತನ್ನೆರಡು ಕೈಗಳನ್ನು ಕಳೆದುಕೊಂಡ. ಟೇಬಲ್ ಟೆನಿಸ್ ಆಡಲು ಮುಖ್ಯವಾಗಿ ಬೇಕಾಗಿರುವುದೇ ಕೈಗಳು. ಅವೇ ಇಲ್ಲದಾಗ ಟೆನಿಸ್ ಆಟ ಎಲ್ಲಿ? ಆದರೆ, ಇಬ್ರಾಹಿಂನ ಟೇಬಲ್ ಟೆನಿಸ್ ಪ್ರೀತಿ ಮಾತ್ರ ಒಂಚೂರು ಕಡಿಮೆ ಆಗಿರಲಿಲ್ಲ. ಅಪಘಾತದಿಂದಾಗಿ 3 ವರ್ಷದವರೆಗೆ ಉಪಚಾರ ಪಡೆದುಕೊಂಡ. ನಂತರ ನಿಧಾನಕ್ಕೆ ಟೇಬಲ್ ಟೆನಿಸ್ ಆಡಲು ಪ್ರಯತ್ನಿಸಿದ. ಜಪ್ಪಯ್ಯ ಅಂದರೂ ಪ್ರಯತ್ನ ಕೈಗೂಡಲೇ ಇಲ್ಲ. ಹೇಗೆ ಮಾಡೋದು ಅಂಥ ಯೋಚಿಸಿದ. ಕಡೆಗೊಂದು ಐಡಿಯಾ ಕಂಡುಕೊಂಡ. ಅದುವೇ ಬಾಯಿಯಲ್ಲೇ ಬ್ಯಾಟ್ ಹಿಡಿದು ಆಡುವುದು. ತನ್ನ ಐಡಿಯಾವನ್ನು ಕಾರ್ಯರೂಪಕ್ಕಿಳಿಸಿದ. ಆರಂಭದಲ್ಲಿ ಸಾಕಷ್ಟು ಶ್ರಮ ಪಟ್ಟ. ನಿರಂತರ ಶ್ರಮದ ನಂತರ ಅದರಲ್ಲಿ ಪಳಗಿದ.
ಐಟಿಟಿಎಫ್ ಟೂರ್ನಿಗೆ ಆಹ್ವಾನ
ಇಬ್ರಾಹಿಂನ ಸಾಧನೆ ಐಟಿಟಿಎಫ್ ತಲುಪಿತು. ಹೀಗಾಗಿ ಇತ್ತೀಚೆಗೆ ಜಪಾನಿನ ಟೋಕಿಯೋದಲ್ಲಿ ನಡೆದ ಐಟಿಟಿಎಫ್ ಆಯೋಜಿಸಿದ್ದ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಗೌರವ ಆಟಗಾರನಾಗಿ ಭಾಗವಹಿಸುವ ಅವಕಾಶ ಸಿಕ್ಕಿತು. ಅಲ್ಲಿ ವಿಶ್ವದ ಟಾಪ್- 10 ಟೇಬಲ್ ಟೆನಿಸ್ ಆಟಗಾರರ ಜತೆ ಬಾಯಿಯಲ್ಲಿ ಬ್ಯಾಟ್ ಹಿಡಿದು ಸೆಣಸಿದ. ಸೋಲು- ಗೆಲವು ಪಕ್ಕಕಿರಲಿ. ಆತ ಬಾಯಿಂದ ಬ್ಯಾಟ್ ಹಿಡಿದು ಸರ್ವ್ ಮಾಡುತ್ತಿದ್ದ ರೀತಿ ನಿಜಕ್ಕೂ ಎಂಥವನನ್ನೂ ಭಾವೋದ್ರೇಕಗೊಳಿಸುವಂತಿತ್ತು. ಕೈ- ಕಾಲು, ಇತರ ಅಂಗಾಂಗ ನೆಟ್ಟಗಿದ್ದರೂ ಆಲಸ್ಯ ತೋರುವವರ ಮಧ್ಯ ಎರಡು ಕೈಗಳಿಲ್ಲದೆ ಬಾಯಿಯಲ್ಲಿ ಬ್ಯಾಟ್ ಹಿಡಿದು ವಿಶ್ವದ ದಿಗ್ಗಜ ಟೆನಿಸ್ ಆಟಗಾರರು ಬೆರಗುಗೊಳಿಸುವಂತೆ ಆಡುತ್ತಾನೆಂದರೆ ನಿಜಕ್ಕೂ ಸೋಜಿಗದ ಸಂಗತಿ ಅನಿಸದೆ ಇರಲಾರದು. ಅಲ್ಲದೆ, ಮುಂದಿನ ಪ್ಯಾರಾಲಿಂಪಿಕ್‌ನಲ್ಲಿ ಭಾಗವಹಿಸುವ ಇರಾದೆಯನ್ನು ಇಬ್ರಾಹಿಂ ಹೊಂದಿದ್ದಾನೆ.
ಸಾಧನೆ ಹಿಂದಿನ ಶಕ್ತಿ
'ಈ ಸಾಧನೆ ಹಿಂದಿರುವ ಶಕ್ತಿ ತನ್ನ ಪತ್ನಿ ಎಂದು ಹೇಳುವುದನ್ನು ಆತ ಮರೆಯುವುದಿಲ್ಲ. ಆಕೆಯೇ ನನಗೆ ಸರ್ವಸ್ವ. ನನ್ನ ಎರಡನೇ ಆದ್ಯತೆಯೇ ಟೇಬಲ್ ಟೆನಿಸ್. ಇದರಲ್ಲೇ ಸಾಕಷ್ಟು ಯಶಸ್ಸು ಗಳಿಸಿದ್ದೇನೆ. ಜತೆಗೆ ಸಂತೋಷವೂ ನನ್ನದಾಗಿದೆ. ಅಸಾಧ್ಯವಾದದ್ದು ಯಾವುದೂ ಇಲ್ಲ. ಅಂದುಕೊಂಡಿದ್ದನ್ನು ಸಾಧಿಸಲು ನಿರಂತರ ಪ್ರಯತ್ನ, ಕಠಿಣ ಶ್ರಮ ಬೇಕು' ಎನ್ನುತ್ತಾರೆ ಇಬ್ರಾಹಿಂ ಹ್ಯಾಮ್ಯಾಟೋ. ವಿಶ್ವದ 9ನೇ ಶ್ರೇಯಾಂಕದ ಟೇಬಲ್ ಟೆನಿಸ್ ಆಟಗಾರ ಹೇಳುವ ಪ್ರಕಾರ, 'ಇಬ್ರಾಹಿಂ ಬಾಯಿ ಮೂಲಕ ಆಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಆತ ನಿಜಕ್ಕೂ ಉತ್ತಮವಾಗಿ ಆಟವಾಡಿದ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


-ಮಹೇಶ್ ಅರಳಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement