ಅದೃಷ್ಟವಂತ ಮುಂಬೈಗೆ ಚೆನ್ನೈ ಸೂಪರ್ ಸವಾಲು
ಟೂರ್ನಿಯ ಮಧ್ಯಮ ಹಂತದಲ್ಲಿ ಇರುವಾಗಲೇ ಬಹುತೇಕ ಸ್ಪರ್ಧಾಕಣದಿಂದ...
ಮುಂಬೈ: ಟೂರ್ನಿಯ ಮಧ್ಯಮ ಹಂತದಲ್ಲಿ ಇರುವಾಗಲೇ ಬಹುತೇಕ ಸ್ಪರ್ಧಾಕಣದಿಂದ ಹೊರಬಿದ್ದಂತಿದ್ದ ಹಾಗೂ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸೋತೇ ಬಿಟ್ಟಿತು ಎನ್ನುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರೂ ಸಹ ಅಂತಿಮವಾಗಿ ಅದೃಷ್ಟದ ಬಲದಿಂದ ಪ್ಲೇಆಫ್ ಹಂತಕ್ಕೆ ಪ್ರವೇಶ ಗಿಟ್ಟಿಸಿರುವ ಮುಂಬೈ ಇಂಡಿಯನ್ಸ್ ಹಾಲಿ ಚಾಂಪಿಯನ್ಪಟ್ಟ ಉಳಿಸಿಕೊಳ್ಳಲು ಮತ್ತೊಂದು ಪ್ರಬಲ ಹೋರಾಟಕ್ಕೆ ಅಣಿಯಾಗುತ್ತಿದೆ.
ಹಾಗೆಯೇ ಮೂರನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಗುರಿಯೆಡೆಗೆ ಹೆಜ್ಜೆಹಾಕುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಮತ್ತೊಂದು ಜಯಭೇರಿಯೊಂದಿಗೆ ಪ್ರಶಸ್ತಿಯ ಹೊಸ್ತಿಲಿಗೆ ಬಂದು ನಿಲ್ಲುವ ಕನಸು ಕಟ್ಟಿಕೊಂಡಿದೆ.
ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಬುಧವಾರ ಮುಂಬೈನ ಬ್ರಾಬೊರ್ನ್ ಕ್ರೀಂಡಾಗಣದಲ್ಲಿ ನಡೆಯಲಿರುವ ಏಳನೇ ಆವೃತ್ತಿಯ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಈ ಪಂದ್ಯದಲ್ಲಿ ಗೆಲವು ದಾಖಲಿಸುವ ತಂಡ ಎರಡನೇ ಕ್ವಾಲಿಫೈರ್ ಪಂದ್ಯದಲ್ಲಿ ಮೊದಲ ಕ್ವಾಲಿಫೈರ್ ಪಂದ್ಯದ ವಿಜೇತರನ್ನು ಎದುರಿಸಲಿದೆ. ಇಲ್ಲಿ ಗೆದ್ದವರು ಫೈನಲ್ಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ.
ಮುಂಬೈ ಇಂಡಿಯನ್ಸ್ ಪಾಲಿಗೆ ಅದೃಷ್ಟವಿದೆ. ಆದರೆ, ಈ ಅದೃಷ್ಟ ನಾಳೆಯೂ ಕೂಡ ಮುಂಬೈ ತಂಡದ ಕೈಹಿಡಿಯಲಿದೆಯೇ ಎಂಬುದನ್ನು ನೋಡಬೇಕು. ಯುಎಇನಲ್ಲಿ ತಾನಾಡಿದ ಎಲ್ಲ ಐದೂ ಪಂದ್ಯಗಳಲ್ಲಿ ಅವಮಾನಕಾರಿ ಸೋಲುಂಡಿದ್ದ ಮುಂಬೈ ಪಡೆ, ಪ್ಲೇಆಫ್ ಸುತ್ತಿಗೆ ಪ್ರವೇಶ ಪಡೆಯಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಏಕೆಂದರೆ, ಟೂರ್ನಿಯ ಅರ್ಧಹಾದಿ ಸವೆದರೂ ಅಂಕಪಟ್ಟಿಯಲ್ಲಿ ಕೊನೆಯ ಒಂದೆರೆಡು ಸ್ಥಾನಗಳಲ್ಲಿಯೇ ಏರಿಳಿತ ಕಾಣುತ್ತ ಸಾಗಿತ್ತು. ಆದರೆ, ನಂತರದಲ್ಲಿ ಆಟಗಾರರ ಕೆಚ್ಚೆದೆಯ ಪ್ರದರ್ಶನ, ಅದರ ಜೊತೆಗೆ ಅದೃಷ್ಟವೂ ಬೆಂಬಲಕ್ಕೆ ಬರುವ ಮೂಲಕ ಅಚ್ಚರಿ ಎನ್ನುವಂತೆ ನಾಕೌಟ್ ಹಂತಕ್ಕೆ ಕಾಲಿಟ್ಟಿದೆ.
ಅದರಲ್ಲೂ ರಾಜಸ್ಥಾನ ರಾಯಲ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆಯಬೇಕಾದರೆ, ಎದುರಾಳಿ ತಂಡ ಒಡ್ಡಿದ್ದ 190 ರನ್ಗಳ ಗುರಿಯನ್ನು ಕೇವಲ 14.3 ಓವರುಗಳಲ್ಲಿ ತಲುಪಬೇಕಿತ್ತು. ಇದು ಕಷ್ಟವೇ ಎಂಬುದು ಎಲ್ಲರ ಲೆಕ್ಕವಾಗಿತ್ತು.
ಆದರೆ, 14.3 ಓವರುಗಳಾದಾಗ ಇನ್ನೂ 2 ರನ್ಗಳಿಂದ ಹಿಂದಿದ್ದರೂ ರನ್ ಸರಾಸರಿಯಲ್ಲಿ ರಾಜಸ್ಥಾನ ರಾಯಲ್ಸ್ ಜೊತೆ ಸಮಗೌರವ ಸಾಧಿಸಿದ್ದರಿಂದ ಹೆಚ್ಚುವರಿಯಾಗಿ ಮತ್ತೊಂದು ಎಸೆತ ಮುಂಬೈಗೆ ಸಿಕ್ಕಿತು. ಈ ಎಸೆತದಲ್ಲಿ ಮುಂಬೈಗೆ 4 ರನ್ಗಳ ಅಗತ್ಯವಿತ್ತು. ಆಗ ಆದಿತ್ಯ ತಾರೆ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಮುಂಬೈಗೆ ನಂಬಲರ್ಹ ಗೆಲವು ತಂದುಕೊಡುತ್ತಲೇ 4ನೇ ತಂಡವಾಗಿ ಪ್ಲೇಆಫ್ ಪ್ರವೇಶಿಸುವ ಸೌಭಾಗ್ಯ ದೊರೆಯಿತು. ಮತ್ತೊಂದೆಡೆ ಗೆದ್ದೇಬಿಟ್ಟೆವು ಎನ್ನುವ ಸ್ಥಿತಿಯಲ್ಲಿದ್ದ ರಾಜಸ್ಥಾನ ರಾಯಲ್ಸ್ಗೆ ದೊಡ್ಡ ಆಘಾತ ಉಂಟಾಯಿತು.
ಪ್ರಮುಖವಾಗಿ ಈ ಪಂದ್ಯದಲ್ಲಿ ಕೋರಿ ಆ್ಯಂಡರ್ಸನ್ ಕೇವಲ 44 ಎಸೆತಗಳಲ್ಲಿ ಅಜೇಯ 95 ರನ್ ಸಿಡಿಸಿದ್ದು ಮುಂಬೈ ಗೆಲವಿನಲ್ಲಿ ಮಹತ್ತರ ಪಾತ್ರವಹಿಸಿತು.
ನಾಯಕ ರೋಹಿತ್ ಶರ್ಮಾ, ಕೋರಿ, ಲೆಂಡ್ಸ್ ಸಿಮನ್ಸ್, ಕೀರನ್ ಪೊಲಾರ್ಡ್, ಅಂಬಟಿ ರಾಯುಡು, ಮೈಕ್ ಹಸ್ಸಿ, ಆದಿತ್ಯ ತಾರೆ ಹಾಗೂ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಹರ್ಭಜನ್, ಪ್ರಗ್ಯಾನ್ ಓಜಾ, ಶ್ರೇಯಸ್ ಗೋಪಾಲ್, ಪೊಲಾರ್ಡ್ ಮುಂಬೈ ಪಡೆಯಲ್ಲಿನ ನಂಬಿಕಸ್ತ ಆಟಗಾರರಾಗಿದ್ದಾರೆ.
ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪಡೆಯನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಲಾಗದು. ಈ ತಂಡದ ಪ್ರತಿಯೊಬ್ಬ ಆಟಗಾರ ಪ್ರತಿಶತ ನೂರರಷ್ಟು ಸಾಮರ್ಥ್ಯವನ್ನು ಧಾರೆಯರೆಯುವಷ್ಟು ಸಮರ್ಥನಿದ್ದಾನೆ.
ಡ್ವೈನ್ ಸ್ಮಿತ್, ಬ್ರೆಂಡನ್ ಮೆಕಲಂ, ಸುರೇಶ್ ರೈನಾ, ಡೇವಿಡ್ ಹಸ್ಸಿ, ಧೋನಿ, ರವೀಂದ್ರ ಜಡೇಜಾ, ಫಫ್ ಡು ಪ್ಲೆಸಿಸ್ ಅವರು ಚೆನ್ನೈನ ಬ್ಯಾಟಿಂಗ್ ಶಕ್ತಿಯಾಗಿದ್ದರೆ, ಆಶಿಶ್ ನೆಹ್ರಾ, ಈಶ್ವರ್ ಪಾಂಡೆ, ಮೋಹಿತ್ ಶರ್ಮಾ, ಬೆನ್ ಹಿಲ್ಫೆನ್ಹಾಸ್, ಸಾಮುಯೆಲ್ ಬದ್ರಿ, ಅಶ್ವಿನ್ ಮತ್ತು ಜಡೇಜಾ ಭರವಸೆಯುಳ್ಳ ದಾಳಿಕಾರರಾಗಿದ್ದಾರೆ.
ಲೀಗ್ನಲ್ಲಿ ಕೊನೆಯ ಹಂತದ ಸಮರಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೊಂಚ ಎಡವಿದೆ. ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯಗಳಿಸುವುದಕ್ಕಿಂತಲೂ ಹಿಂದಿನ ಮೂರು ಪಂದ್ಯಗಳಲ್ಲಿ ಸತತ ಸೋಲನುಭವಿಸಿತ್ತು. ಆದರೂ ಆಟದ ಎಲ್ಲ ವಿಭಾಗಗಳಲ್ಲೂ ಅಗತ್ಯ ಶಕ್ತಿ-ಸಾಮರ್ಥ್ಯ ಹೊಂದಿರುವ ಚೆನ್ನೈ ತಂಡದಿಂದ ಕಠಿಣ ಸವಾಲು ಎದುರಾಗುವ ಬಗ್ಗೆ ಮುಂಬೈ ಇಂಡಿಯನ್ಸ್ ಎಚ್ಚರದಿಂದಿರಲೇಬೇಕಾಗುತ್ತದೆ.