ಬಾಲ್ಯದಲ್ಲಿ ನನ್ನ ಮೇಲೆ ಲೈಂಗಿಕ ಶೋಷಣೆ ನಡೆದಿತ್ತು: ಖ್ಯಾತ ಬಾಕ್ಸರ್ ಮೈಕ್ ಟೈಸನ್
ತಾನು ಏಳು ವರ್ಷದ ಬಾಲಕನಾಗಿದ್ದಾಗ ಬಲಿಷ್ಠ ವ್ಯಕ್ತಿಯೊಬ್ಬನಿಂದ ಬೀದಿಯಲ್ಲೇ ಲೈಂಗಿಕ ಶೋಷಣೆಗೊಳಗಾಗಿದ್ದಾಗಿ...
ಲಾಸ್ ಏಂಜಲಿಸ್: ತಾನು ಏಳು ವರ್ಷದ ಬಾಲಕನಾಗಿದ್ದಾಗ ಬಲಿಷ್ಠ ವ್ಯಕ್ತಿಯೊಬ್ಬನಿಂದ ಬೀದಿಯಲ್ಲೇ ಲೈಂಗಿಕ ಶೋಷಣೆಗೊಳಗಾಗಿದ್ದಾಗಿ ವಿಶ್ವ ಹೆವಿವೇಟ್ ಬಾಕ್ಸಿಂಗ್ ಚಾಂಪಿಯನ್ ಅಮೆರಿಕದ ಮೈಕ್ ಟೈಸನ್ ಶನಿವಾರ ರೇಡಿಯೇ ಒಂದಕ್ಕೆ ಹೇಳಿಕೊಂಡಿದ್ದಾರೆ.
ವಯಸ್ಕ ಪುರುಷನೊಬ್ಬ ಬೀದಿಯಲ್ಲೇ ತಮ್ಮ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾಗಿ 48 ವರ್ಷದ ಮಾಜಿ ಬಾಕ್ಸರ್ ಹೇಳಿಕೊಂಡಿದ್ದಾರೆ. ಆತ ನನ್ನನ್ನು ಬೆದರಿದ. ಲೈಂಗಿಕ ಶೋಷಣೆ ನಡೆಸಿದ. ಘಟನೆಯ ನಂತರ ಮತ್ತೆ ನಾನು ಆತನನ್ನು ಯಾವತ್ತೂ ನೋಡಲೇ ಇಲ್ಲ. ನನ್ನ ತಂದೆ ತಾಯಿಗಳಿಗೆ ಆ ಕುರಿತು ಹೇಳಲೂ ಇಲ್ಲ. ನಾನು ಆ ಘಟನೆಯನ್ನು ಸದಾ ನೆನಪಿಸಿಕೊಳ್ಳುವುದಿಲ್ಲ. ಆತ ನಡೆಸಿದ ಲೈಂಗಿಕ ಶೋಷಣೆ ನನ್ನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ. ನಾನು ಮೊದಲು ಹೇಗೆ ಇದ್ದೆನೋ ನಂತರವೂ ಹಾಗೆ ಇದ್ದೇನೆ' ಎಂದು ರೇಡಿಯೋಗೆ ನೀಡಿದ ಸಂದರ್ಶನದಲ್ಲಿ
ಟೈಸನ್ ತಿಳಿಸಿದರು.
ಟೈಸನ್ ಕೇವಲ 20ನೇ ವಯಸ್ಸಿನಲ್ಲೇ 1986ರಲ್ಲಿ ವಿಶ್ವ ಬಾಕ್ಸಿಂಗ್ ಹೆವಿವೇಟ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದು ವಿಶ್ವ ಚಾಂಪಿಯನ್ಶಿಪ್ ಗೆದ್ದ ವಿಶ್ವದ ಕಿರಿಯ ಬಾಕ್ಸರ್ ಎಂಬ ದಾಖಲೆಯಾಗಿತ್ತು.
ತಮ್ಮ ವೃತ್ತಿ ಜೀವನದಲ್ಲಿ ಆಡಿದ 58 ಪಂದ್ಯಗಳಲ್ಲಿ 50 ರಲ್ಲಿ ಜಯ ಕಂಡುಕೊಂಡಿದ್ದಾರೆ ಬಾಕ್ಸಿಂಗ್ ದಂತಕತೆ ಟೈಸನ್. 1992ರಲ್ಲಿ ಕೆಲ ಪ್ರಕರಣಗಳಲ್ಲಿ ಭಾಗಿಯಾಗುವ ಮೂಲಕ ಸಹ ಟೈಸನ್ ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದರು. ಹದಿಹರೆಯದ ಸುಂದರಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಟೈಸನ್ ದೋಷಿಯಾಗಿದ್ದರು. ಆಗ ಕೋರ್ಟ್ ನೀಡಿದ 6 ವರ್ಷಗಳಲ್ಲಿ ಜೈಲು ಶಿಕ್ಷೆಯಲ್ಲಿ ಮೂರು ವರ್ಷ ಸೆರೆವಾಸ ಅನುಭವಿಸಿದರು.
ಬಾಕ್ಸಿಂಗ್ ಕಿಂಗ್ ಟೈಸ,ನ್ ಬೇರೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಸಹ ದೋಷಿಯಾಗಿದ್ದಾರೆ. ಅಲ್ಲದೆ, ಪ್ರಭಾವಿಗಳ ಮೂಲಕ ಕೊಕೇನ್ ಹೊಂದುವುದು ಮತ್ತು ಅದನ್ನು ಮಾರಾಟ ಮಾಡಿದ ಪ್ರಕರಣದಲ್ಲೂ ದೋಷಿಯಾಗಿದ್ದಾರೆ.