ಹೈದರಾಬಾದ್: ಆರಂಭಿಕ ಶಿಖರ್ ಧವನ್‌ರ ಮತ್ತೊಂದು ಅಮೋಘ ಕಾಣಿಕೆ ನೆರವಿನಿಂದ ಟೀಂ ಇಂಡಿಯಾ, ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಶ್ರೀಲಂಕಾವನ್ನು ಸದೆಬಡಿದಿದೆ. ಈ ಮೂಲಕ ಇನ್ನೂ ಎರಡು ಪಂದ್ಯಗಳು ಇರುವಂತೆಯೇ 3-0 ಮುನ್ನಡೆಯೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಂಡ ತನ್ನದಾಗಿಸಿಕೊಂಡಿದೆ.
ಉಪ್ಪಳದ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ, 6 ವಿಕೆಟ್‌ಗಳಿಂದ ಶ್ರೀಲಂಕಾ ವಿರುದ್ಧ ಜಯಭೇರಿ ಬಾರಿಸಿತು. ಗೆಲ್ಲಲು 243 ರನ್‌ಗಳ ಗುರಿ ಪಡೆದಿದ್ದ ಭಾರತ ಇನ್ನೂ 5.5 ಓವರುಗಳು ಉಳಿದಿರುವಂತೆಯೇ 4 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿ ವಿಜಯೋತ್ಸವ ಆಚರಿಸಿತು.
ಶಿಖರ್ ಧವನ್ ಕೇವಲ 79 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸೇರಿದಂತೆ 91 ರನ್‌ಗಳಿಸಿ ಭಾರದ ಗೆಲವಿಗೆ ನೆರವಾದರು. ಮಧ್ಯಮ ಹಂತದಲ್ಲಿ ಅರ್ಧಶತಕಗಳಿಸಿದ ನಾಯಕ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 4 ಬೌಂಡಿರಿ ಮತ್ತು 1 ಸಿಕ್ಸರ್ ಸೇರಿದಂತೆ 53 ರನ್‌ಗಳಿಸಿದರು. ಭಾರತದ ದಾಂಡಿಗರನ್ನು ಸೆರೆಹಿಡಿಯಲು ಲಂಕಾ ನಾಯಕ ಮ್ಯಾಥ್ಯೂಸ್ 8 ಬೌಲರ್‌ಗಳನ್ನು ಪ್ರಯೋಗಿಸಿದ್ದು ವ್ಯರ್ಥವಾಯಿತು.
ಲಂಕಾಗೆ ಜಯ ಶತಕದಾಸರೆ
ಇದಕ್ಕೆ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ 48.2 ಓವರುಗಳಲ್ಲಿ 242 ರನ್‌ಗಳಿಗೆ ಪತನಗೊಂಡಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಹೇಲ ಜಯವರ್ದನೆಯ ಆಕರ್ಷಕ ಶತಕದ ಹೊರತಾಗಿಯೂ ಇತರೆ ದಾಂಡಿಗರ ವೈಫಲ್ಯದಿಂದಾಗಿ ಪ್ರವಾಸಿ ಶ್ರೀಲಂಕನ್ನರು ಭಾರದ ಮುಂದೆ ಕಠಿಣ ಸವಾಲು ನೀಡುವಲ್ಲಿ ಮತ್ತೆ ವಿಫಲರಾದರು.
ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಮಹೇಲ 124 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸೇರಿದಂತೆ 118 ರನ್‌ಗಳಿಸಿದರು. ಇದು ಜಯವರ್ದನೆಗೆ 150ನೇ ಪಂದ್ಯದಲ್ಲಿ ಲಭಿಸಿದ 35ನೇ ಶತಕವಾಗಿದೆ.