ರಾಂಚಿ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಭಾರತದ ಕನಸು ನನಸಾಗಿದೆ. ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಲಂಕಾ ತಂಡವನ್ನು 3 ವಿಕೆಟ್‌ಗಳ ಅಂತರದಲ್ಲಿ ಮಣಿಸಿದ ಟೀಂ ಇಂಡಿಯಾ, ಸರಣಿಯನ್ನು 5-0 ಅಂತರದಲ್ಲಿ ಗೆದ್ದುಕೊಂಡಿತು.
ಮೊದಲು ಬ್ಯಾಟ್ ಮಾಡಿದ್ದ ಲಂಕಾ ತಂಡ, ನಿಗದಿ. 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 286ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು. ಈ ಮೊತ್ತ ಬೆನ್ನಟ್ಟಿದ ಭಾರತ 48.4 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 288 ರನ್‌ಗಳಿಸಿ ಜಯದ ನಗೆ ಬೀರಿತು.
ಕೊಹ್ಲಿ ಮಿಂಚು
ಲಂಕಾ ನೀಡಿದ್ದ ಸ್ಪರ್ಧಾತ್ಮಕ ಮೊತ್ತದ ಬೆನ್ನಟ್ಟಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ ಕೇವಲ 6 ರನ್ ಆಗಿದ್ದಾಗಲೇ ರಹಾನೆ ಅವರನ್ನು ಭಾರತ ಕಳೆದುಕೊಂಡಿತು. ಅದರ ಹಿಂದೆಯೇ 4ನೇ ಏಕದಿನದಲ್ಲಿ 'ದ್ವಿಶತಕ ಹೀರೊ' ಆಗಿದ್ದ ರೋಹಿತ್ ಶರ್ಮಾ ಸಹ ಬೇಗನೆ ವಿಕೆಟ್ ಚೆಲ್ಲಿದರು. ಈ ಹಂತದಲ್ಲಿ ಕ್ರೀಸ್‌ಗೆ ಕಾಲಿಟ್ಟ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿದರು.
ಮೂರನೇ ಕ್ರಮಾಂಕದ ರಾಯುಡು ಜೊತೆ 3ನೇ ವಿಕೆಟ್‌ಗೆ ಬರೋಬ್ಬರಿ 136 ರನ್‌ಗಳ ಜೊತೆಯಾಟ ನೀಡಿದ ಅವರು, ತಂಡದ ಗೆಲುವಿಗೆ ಶ್ರೀಕಾರ ಹಾಕಿದರು. 28ನೇ ಓವರ್‌ನಲ್ಲಿ ರಾಯುಡು ವಿಕೆಟ್ ಉರುಳಿದ ಮೇಲೂ ಧೃತಿಗೆಡದ ಕೊಹ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಪ್ರಮುಖ ಹೈಲೈಟ್ಸ್
1. ಭಾರತಕ್ಕೆ 5-0 ಅಂತರದಲ್ಲಿ ಸರಣಿ ಗೆಲುವು
2. ಏಕದಿನದಲ್ಲಿ 21ನೇ ಶತಕ ದಾಖಲಿಸದಿ ವಿರಾಟ್ ಕೊಹ್ಲಿ
3. ಏಕದಿನದಲ್ಲಿ ಹೆಚ್ಚು ಶತಕ ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನ
4. ವೇಗವಾಗಿ ಏಕದಿನದಲ್ಲಿ 21ನೇ ಶತಕ ದಾಖಲಿಸಿದ ಸಾಧನೆ (138 ಇನ್ನಿಂಗ್ಸ್) ಈ ಮೂಲಕ ಸಚ್ಚಿನ್ ತೆಂಡೂಲ್ಕರ್ ಸಾಧನೆ ಹಿಂದಕ್ಕೆ(200 ಇನ್ನಿಂಗ್ಸ್)
5. ಲಂಕಾ ವಿರುದ್ದ ಎಲ್ಲಾ ಮಾದರಿ ಸೇರಿದಂತೆ ಭಾರತಕ್ಕೆ 100ನೇ ಗೆಲುವು (83 ಏಕದಿನ, 14 ಟೆಸ್ಟ್, 3 ಟಿ20)
6. ಮ್ಯಾಥ್ಯೂಸ್‌ಗೆ ಚೊಚ್ಚಲ ಏಕದಿನ ಶತಕ