ಕ್ರೀಡೆ

'ವಿಶ್ವನಾಥ'ನಾಗದ ಆನಂದ್

Lakshmi R

ಸೋಚಿ: ಹಾಲಿ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಆಕ್ರಮಣಕಾರಿ ಆಟದ ಮುಂದೆ ಮಂಕಾದ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.

ಭಾನುವಾರ ನಡೆದ 11ನೇ ಸುತ್ತಿನ ಪಂದ್ಯದಲ್ಲಿ ಕಾರ್ಲ್ಸನ್, ಆನಂದ್ ವಿರುದ್ಧ ಅರ್ಹ ಗೆಲುವು ದಾಖಲಿಸಿದರು. ಪಂದ್ಯದಲ್ಲಿ ಬಿಳಿ ಕಾಯಿ ಹಾಕುವಲ್ಲಿ ಯಶಸ್ವಿಯಾದರು. ಈ ಗೆಲುವಿನಿಂದ ಟೂರ್ನಿಯಲ್ಲಿ 6.5 ಅಂಕಗಳನ್ನು ಸಂಪಾದಿಸಿದ ಕಾರ್ಲ್ಸನ್, ತಮ್ಮ ವಿಶ್ವ ಚಾಂಪಿಯನ್ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟೂರ್ನಿಯಲ್ಲಿ ಇನ್ನು ಪಂದ್ಯ ಬಾಕಿ ಇರುವಾಗಲೇ ಆನಂದ್ ಪ್ರಶಸ್ತಿ ಆಸೆ ಕೈ ಬಿಟ್ಟಿದ್ದಾರೆ.

ಪಂದ್ಯದಲ್ಲಿ 24ನೇ ನಡೆಯಲ್ಲಿ ಆನಂದ್ ಎಸಗಿದ ತಪ್ಪು ದುಬಾರಿಯಾಗಿ ಪರಿಣಮಿಸಿತು. ಇದರ ಲಾಭ ಪಡೆದ ಕಾರ್ಲ್ಸನ್, ಆನಂದ್ಗೆ ಮತ್ತೆ ಚೇತಿರಿಸಿಕೊಳ್ಳುವ ಅವಕಾಶ ನೀಡಲೇ ಇಲ್ಲ. ಹಾಗಾಗಿ ಪಂದ್ಯ 45ನೇ ನಡೆಯಲ್ಲಿ ಅಂತ್ಯ ಕಂಡಿತು.

ಕಳೆದ ವರ್ಷ ಚೆನ್ನೈನಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ 10ನೇ ಸುತ್ತಿಗೆ ಪ್ರಶಸ್ತಿ ಸೋತಿದ್ದ ಆನಂದ್, ಈ ಬಾರಿಯೂ ನಿರಾಸೆ ಅನುಭವಿಸಿದ್ದಾರೆ. ಈ ಪಂದ್ಯದಲ್ಲಿ ಡ್ರಾ ಸಾಧಿಸಿದ್ದರೂ, ಆನಂದ್ ಮುಂದಿನ ಪಂದ್ಯದಲ್ಲಿ ಗೆಲುವಿನ ಪ್ರಯತ್ನ ನಡೆಸಬಹುದಾಗಿತ್ತು.

ಕಾರಣ ಮುಂದಿನ ಪಂದ್ಯದಲ್ಲಿ ಬಿಳಿ ಕಾಯಿ ನಡೆಸುವ ಅವಕಾಶ ಆನಂದ್ಗೆ ಲಭಿಸಿತ್ತು. ಆದರೆ, ಇಬ್ಬರು ಆಟಗಾರರ ನಡುವೆ 2 ಅಂಕಗಳ ಅಂತರವಿದ್ದು, ಒಂದು ಪಂದ್ಯದಲ್ಲಿ ಗೆದ್ದರೂ ಕಾರ್ಲ್ಸನ್ರನ್ನು ಮಣಿಸಲು ಅಸಾಧ್ಯ. ಹಾಗಾಗಿ ಆರನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಆನಂದ್ ಆಸೆ ಕಮರಿದೆ.

SCROLL FOR NEXT