ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಡೆದ ಸ್ಪಾಟ್‌ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ನಡೆದಿದೆ.
ಮುದ್ಗಲ್ ಸಮಿತಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್, ಈ ಹಗರಣಗಳಿಂದಾಗಿ ಸಾಮಾನ್ಯ ವ್ಯಕ್ತಿಗಳ ನಂಬಿಕೆಗೆ ಧಕ್ಕೆಯಾಗಿದೆ. ಆದ್ದರಿಂದ ಆ ನಂಬಿಕೆಯನ್ನು ಉಳಿಸಿಕೊಂಡು ಆಟದ ಘನತೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಬಿಸಿಸಿಐಗೆ ಹೇಳಿದೆ. ಅದೇ ವೇಳೆ ಐಪಿಎಲ್ ಪಂದ್ಯವು ಬಿಸಿಸಿಐ ಮತ್ತು ಐಪಿಎಲ್ ನಡುವೆ ಲಾಭದಾಯಕ ಸಂಬಂಧವನ್ನು ಕಟ್ಟಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಮುದ್ಗಲ್ ವರದಿಯಲ್ಲಿ ಉಲ್ಲೇಖಿಸಿದ ತಪ್ಪಿತಸ್ಥರ ವಿರುದ್ಧ ನಾವು ಕ್ರಮಕೈಗೊಳ್ಳುತ್ತೇವೆ ಎಂದು ಬಿಸಿಸಿಐ ಸುಪ್ರೀಂಗೆ ಮನವರಿಕೆ ಮಾಡಲು ಯತ್ನಿಸಿದೆ. ಇದಕ್ಕೆ ಕೋರ್ಟ್, ಸಮಿತಿಯಲ್ಲಿರುವ ಸದಸ್ಯರು ತಪ್ಪಿತಸ್ಥರು ಅಲ್ಲ ಎಂದು ಯಾವ ನಂಬಿಕೆಯಿಂದ ಹೇಳುತ್ತಿದ್ದೀರಿ? ಎಂದು ಮರುಪ್ರಶ್ನೆಯನ್ನೆಸೆದಿದೆ.
ಕ್ರಿಕೆಟ್‌ನ್ನು ಉಲ್ಲಾಸ, ಉತ್ಸಾಹದಿಂದ ಆಡಬೇಕಾಗಿದೆ, ಇದು ಜಂಟಲ್‌ಮೆನ್‌ಗಳ ಆಟ. ಹೀಗಿರುವಾಗ ಬಿಸಿಸಿಐ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್‌ಗಳಿಗೆ ಅವಕಾಶ ಕಲ್ಪಿಸುವ ಮೂಲಕ ಕ್ರಿಕೆಟ್‌ನ್ನು ನಾಶ ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದಾಗ್ಯೂ, ಎನ್.ಶ್ರೀನಿವಾಸನ್ ಅವರು ದೋಷಮುಕ್ತರಾಗಿರುವುದರಿಂದ ಅವರನ್ನು ಬಿಸಿಸಿಐ ಮುಖ್ಯಸ್ಥನಾಗಿ ನೇಮಕ ಮಾಡಬೇಕೆಂಬ ಬಿಸಿಸಿಐ ತೀರ್ಮಾನವನ್ನೂ ಸುಪ್ರೀಂ ಪ್ರಶ್ನಿಸಿದೆ.