ಚೆನ್ನೈ 'ಸಿಎಲ್' ಕಿಂಗ್ಸ್
ಎರಡನೇ ಬಾರಿಗೆ ಸಿಎಸ್‌ಕೆ ಚಾಂಪಿಯನ್! ಕೊಲ್ಕತಾಗೆ ರೈನಾ ಶತಕದ ಶಾಕ್
ಬೆಂಗಳೂರು: ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾರ ಭರ್ಜರಿ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್‌ಗಳಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸದೆಬಡಿದು ಎರಡನೇ ಬಾರಿಗೆ ಚಾಂಪಿಯನ್ಸ್ ಲೀಗ್ ಟಿ-20 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಗೆಲ್ಲಲು ಕೆಕೆಆರ್ ನೀಡಿದ್ದ 181 ರನ್‌ಗಳ ಗುರಿಯನ್ನು ಸಮರ್ಥವಾಗಿ ಬೆನ್ನಟ್ಟಿದ ಚೆನ್ನೈ 18.3 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಒಪ್ಪಿಸಿ 185 ರನ್ ಗಳಿಸುವ ಮೂಲಕ ವಿಜಯದ ಕೇಕೆ ಹಾಕಿತು.
ಆಕರ್ಷಕ ಶತಕ ಬಾರಿಸಿದ ಸುರೇಶ್ ರೈನಾ, ಕೇವಲ 62 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್‌ಗಳಿಂದ ಅಜೇಯ 109 ರನ್ ಗಳಿಸಿ ತಂಡದ ಸುಲಭ ಗೆಲುವಿಗೆ ನೆರವಾದರು.
ದುರ್ಬಲ ಬೌಲಿಂಗ್‌ನಿಂದಾಗಿ ಕೆಕೆಆರ್‌ಗೆ ಚಾಂಪಿಯನ್ ಪಟ್ಟ ಒಲಿದು ಬರಲಿಲ್ಲ. ಅನುಮಾನಾಸ್ಪದ ಬೌಲಿಂಗ್‌ನಿಂದಾಗಿ ತಂಡದಿಂದ ವಜಾಗೊಂಡಿರುವ ಸ್ಪಿನ್ನರ್ ಸುನೀಲ್ ನಾರಾಯಣ ಅನುಪಸ್ಥಿತಿ ಕೆಕೆಆರ್ ಮೇಲೆ ಗಂಭೀರ ಪರಿಣಾಮ ಬೀರಿತು.
ಸ್ಕೋರ್ ವಿವರ
ಕೋಲ್ಕತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 180
ಚೆನ್ನೈ ಸೂಪರ್ ಕಿಂಗ್ಸ್ 18.3 ಓವರ್‌ಗಳಲ್ಲಿ 2 ವಿಕೆಟ್‌ಗೆ 185