ಕಬ್ಬಡ್ಡಿ ಚಿನ್ನದ ಕಲಿಗಳಿಗೆ ಅದ್ಧೂರಿ ಸ್ವಾಗತ
ಹೆಮ್ಮೆ ತಂದ ಸಾಧನೆ, ಸ್ವಾಗತಕ್ಕೂ ಬಾರದಷ್ಟು ಅಧಿಕಾರಿಗಳ ನಿರ್ಲಕ್ಷ್ಯ...
ಬೆಂಗಳೂರು: ದಕ್ಷಿಣ ಕೊರಿಯಾದ ಇಂಚಾನ್ನಲ್ಲಿ ನಡೆದ 17ನೇ ಕ್ರೀಡಾಕೂಟದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಂಡ ಭಾರತದ ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳನ್ನು ಪ್ರತಿನಿಧಿಸಿದ್ದ ಕರ್ನಾಟಕದ ಮೂವರು ಕ್ರೀಡಾಪಟುಗಳಾದ ರಾಜಗುರು ಹಾಗೂ ಜಯಂತಿ ಮತ್ತು ಸುಷ್ಮಿತಾ ಪವಾರ್ ಸೋಮವಾರ ನಗರಕ್ಕೆ ಆಗಮಿಸುತ್ತಿದ್ದಂತೆಯೇ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.
ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಮಧ್ಯಾಹ್ನ ಈ ಮೂವರೂ ಆಟಗಾರರು ಬಂದಿಳಿಯುತ್ತಿದ್ದಂತೆಯೇ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ವಿ.ಜಯರಾಂ ಮತ್ತು ಇತರೆ ಕೆಲ ಪದಾಧಿಕಾರಿಗಳು ಹಾಗೂ ಭಾರತ ತಂಡದ ಮಾಜಿ ನಾಯಕ ಬಿ.ಸಿ.ರಮೇಶ್, ಪೊಲೀಸ್ ಇಲಾಖೆ ಕ್ರೀಡಾ ಅಧಿಕಾರಿ ಸುಮಂತ್ ಹಾಗೂ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಅದರಿಂದ ಬರಮಾಡಿಕೊಳ್ಳಲಾಯಿತು. ಈ ಮೂವರೂ ಕ್ರೀಡಾಪಟುಗಳಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು.
ಕ್ರೀಡಾಪಟುಗಳ ಸಂತಸ
ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವುದು ಅಪಾರ ಖುಷಿ ತಂದಿದೆ.
ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದರಿಂದ ಸತತವಾಗಿ ಈ ಪದಕ ನಮ್ಮ ಬಳಿಯೇ ಇರಿಸಿಕೊಳ್ಳಲು ಸಾಧ್ಯವಾಯಿತು ಎಂದು ಈ ಮೂವರೂ ಕ್ರೀಡಾಪಟುಗಳು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸುಷ್ಮಿತಾ ಮತ್ತು ಜಯಂತಿ, ಫೈನಲ್ನಲ್ಲಿ ಇರಾನ್ ನಮಗೆ ಕಠಿಣ ಎದುರಾಳಿಯಾಗಿತ್ತು. ಅದಕ್ಕಾಗಿ ನಾವು ಸೂಕ್ತ ಯೋಜನೆ ರೂಪಿಸಿಕೊಂಡು ಹೋರಾಟಕ್ಕೆ ಅಣಿಯಾಗಿದ್ದೆವು. ಗೆಲ್ಲುವ ವಿಶ್ವಾಸ ನಮ್ಮಲ್ಲಿದ್ದು, ಕೊನೆಗೆ ನಮ್ಮ ಕನಸು ಈಡೇರಿತು ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ನೀಡಿದ ಪ್ರದರ್ಶನ ತೃಪ್ತಿ ತಂದಿದೆ ಎಂದ ಅವರು, ಪಂದ್ಯಗಳನ್ನು ಒಂದು ಸವಾಲೀಗಿಯೇ ಸ್ವೀಕರಿಸಿದ್ದೆವು. ಮುಂದಿನ ದಿನಗಳಲ್ಲಿ ಸಹ ಇದೇ ಸಾಮರ್ಥ್ಯ ಮುಂದುವರಿಸಿಕೊಂಡು ಹೋಗಬೇಕೆಂಬ ಆಸೆ ನಮ್ಮದು ಎಂದು ನುಡಿದರು.
ರಾಜಗುರು ಮಾತನಾಡಿ, ಇರಾನ್ ನಮ್ಮ ಪಾಲಿಗೆ ಸುಲಭ ಸವಾಲಾಗಿರಲಿಲ್ಲ, ಹಾಗಾಗಿ ಆ ತಂಡವನ್ನು ಸೋಲೀಸಲು ಸೂಕ್ತ ರಣತಂತ್ರ ಹೆಣೆದುಕೊಳ್ಳಬೇಕಾಗಿತ್ತು. ಅನೂಪ್ ಉತ್ತಮವಾಗಿ ಅಡಿ ಅಂಕಗಳಿಸಿದ್ದರಿಂದ ಆರಂಭದ ಹಿನ್ನಡೆಯಿಂದ ಹೊರಬಂದು ಅಂತಿಮವಾಗಿ ಚಿನ್ನದ ಪದಕ್ಕೆ ಭಾಜನರಾದೆವು ಎಂದರು.
ಪ್ರೊ. ಕಬಡ್ಡಿ ಲೀಗ್ನಲ್ಲಿ 14 ಪಂದ್ಯಗಳನ್ನು ಆಡಿದ್ದರಿಂದ ನಮಗೆ ಫಿಟ್ನೆಸ್ ಕಾಯ್ದುಕೊಳ್ಳಲು ಅದು ಹೆಚ್ಚು ನೆರವಾಗಿತ್ತು ಎಂದ ರಾಜಗುರು, ಮುಂದಿನ ದಿನಗಳಲ್ಲೂ ಸಹ ಭಾರತ ಕಬಡ್ಡಿ ತಂಡ ಮತ್ತಷ್ಟು ಬಲಗೊಳ್ಳಬೇಕಾಗಿದೆ. ಇಲ್ಲವಾದರೆ, ಇರಾನ್ನಂತಹ ತಂಡಗಳು ಎದುರಾದರೆ, ಗೆಲುವು ಕಷ್ಟವಾಗಬಹುದು ಎಂದಿದ್ದಾರೆ.
ಜಯಂತಿ ಮತ್ತು ಸುಷ್ಮಿತಾ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ರಾಜಗುರು ಅವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಉದ್ಯೋಗಿಯಾಗಿದ್ದಾರೆ. ಇದೇ ವೇಳೆ ಜಯಂತಿ ಮತ್ತು ಸುಷ್ಮಿತಾ ನಮ್ಮ ಈ ಸಾಧನೆಗೆ ಅವಕಾಶ ಮಾಡಿಕೊಟ್ಟ ಪೋಲೀಸ್ ಇಲಾಖೆಯ ಎಲ್ಲ ಅಧಿಕಾರಿಗಳಿಗೆ, ಕ್ರೀಡಾ ಇಲಾಖೆ ಅಧಿಕಾರಿಗಳ ಪ್ರೋತ್ಸಾಹ ಅಲ್ಲದೆ ಮಾರ್ಗದರ್ಶನ ನೀಡಿದ ಕೋಚ್ಗಳಿಗೂ ಅಭಿನಂದನೆ ಸಲ್ಲಿಸಿದರು.
ಸ್ವಾಗತಕ್ಕೂ ಬಾರದಷ್ಟು ಅಧಿಕಾರಿಗಳ ನಿರ್ಲಕ್ಷ್ಯ
ಏಷ್ಯನ್ ಕ್ರೀಡಾಕೂಟದಲ್ಲಿ ಇಡೀ ದೇಶವೇ ಹೆಮ್ಮೆ ಪಡುವಂತೆ ಪ್ರದರ್ಶನ ನೀಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಕ್ಕೆ ಕೀರ್ತಿ ಮೆರೆಸಿದ ಕ್ರೀಡಾಪಟುಗಳು ತವರಿಗೆ ಹಿಂತಿರುಗಿದಾಗ ಅವರಿಗೆ ಸಿಕ್ಕ ಸ್ವಾಗತ ನೋಡಿದರೆ, ಕ್ರೀಡೆ ಬಗ್ಗೆ ನಮ್ಮ ಸರ್ಕಾರ, ಸಚಿವರು ಹಾಗೂ ಅಧಿಕಾರಿಗಳಲ್ಲಿ ಬೇಜವಾಬ್ದಾರಿತನ ಎಷ್ಟಿದೆ ಎಂಬುದು ತಿಳಿಯುತ್ತದೆ.
ಇಂಚಾನ್ ಏಷ್ಯನ್ ಕ್ರೀಡಾಕೂಟದಲ್ಲಿ ನಮ್ಮ ಗ್ರಾಮೀಣ ಕ್ರೀಡೆ ಕಬಡ್ಡಿಯಲ್ಲಿ ಪ್ರಭುತ್ವ ಸ್ಥಾಪಿಸಿದ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಆಟಗಾರರು, ಸೋಮವಾರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಕ್ರೀಡಾಪಟುಗಳು ಸಾಧನೆ ಮಾಡಿ ತವರಿಗೆ ಮರಳಿದಾಗ ಸಚಿವರು ಹಾಗೂ ಅಧಿಕಾರಿಗಳ ಅನುಪಸ್ಥಿತಿ ಕಂಡು ಬಂದಿದ್ದು ಇದೇ ಮೊದಲೇನಲ್ಲ, ಈ ಹಿಂದೆಯೂ ಸಾಕಷ್ಟು ಬಾರಿ ಇಂತಹ ಘಟನೆಗಳ ಕುರಿತು ಮಾಧ್ಯಮಗಳಲ್ಲಿ ಟೀಕೆಗಳು ಕೇಳಿ ಬಂದಿವೆ. ಪ್ರತಿ ಬಾರಿ ಟೀತೆ ಬಂದಾಗಲೂ ಎಚ್ಚರಿಕೆಯ ಉತ್ತರ ನೀಡಲು ಬರುವ ಸಚಿವರು ಹಾಗೂ ಅಧಿಕಾರಿಗಳು ಮುಂದಿನ ಬಾರಿ ಈ ರೀತಿಯಾಗದಂತೆ ನೋಡಿಕೊಳ್ಳುವುದಾಗಿ ಸುಳ್ಳು ಭರವಸೆ ನೀಡುತ್ತಾ ಬಂದಿದ್ದಾರೆ.