ಇಂಚಾನ್ನಿಂದ ಕಲಿತಿದ್ದೇನು?
ಸರಿತಾದೇವಿ ಚಿನ್ನದ ಪದಕ ವಂಚಿತರಾಗಿದ್ದು, ಮೇರಿ ಕೋಮ್ ಚಿನ್ನ ಗೆದ್ದ ಸಂಭ್ರಮ, ಹಾಕಿ ಮತ್ತು ಕಬಡ್ಡಿಯಲ್ಲಿ ವೈಭವ ಮೆರೆದಿದ್ದು...
ಏಷ್ಯಾಡ್ನ ಸೋಲು, ಗೆಲುವು ಹಾಗೂ ಬೇಸರಕ್ಕಿಂತ ನಾವು ಕಲಿತ ಪಾಠವೇನು ಎಂಬುದು ಅತಿ ಮುಖ್ಯ. ಅಂತಹ ಕೆಲ ಅಂಶಗಳನ್ನು ನೋಡೋಣ.
ಸರಿತಾದೇವಿ ಚಿನ್ನದ ಪದಕ ವಂಚಿತರಾಗಿದ್ದು, ಮೇರಿ ಕೋಮ್ ಚಿನ್ನ ಗೆದ್ದ ಸಂಭ್ರಮ, ಹಾಕಿ ಮತ್ತು ಕಬಡ್ಡಿಯಲ್ಲಿ ವೈಭವ ಮೆರೆದಿದ್ದು ಇಂಚಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಮಾಡಿದ ಸಾಧನೆಯ ಪ್ರತೀಕವಾಗಿತ್ತು. ಆದರೆ, ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಪ್ರಮುಖ ರಾಷ್ಟ್ರಗಳಲ್ಲೊಂದಾಗಿರುವ ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದ್ದು ಬೇಸರದ ಸಂಗತಿ. ಇಲ್ಲಿ ಸೋಲು, ಗೆಲುವು ಹಾಗೂ ಬೇಸರಕ್ಕಿಂತ ನಾವು ಕಲಿತ ಪಾಠವೇನು ಎಂಬುದು ಅತಿ ಮುಖ್ಯ. ಅಂತಹ ಹಲವಾರು ಅಂಶಗಳನ್ನು ಇಲ್ಲಿ ಪರಿಶೀಲಿಸೋಣ.
ಇನ್ನೂ ಬಲಿಷ್ಠ ಪ್ರದರ್ಶನ
ಯಾವುದೇ ಕ್ರೀಡಾಕೂಟದ ಪದಕಪಟ್ಟಿಯಲ್ಲಿ ರಾಷ್ಟ್ರವೊಂದು ಪಡೆಯುವ ಅಗ್ರಸ್ಥಾನ, ಅದು ಗೆಲ್ಲುವ ಚಿನ್ನದ ಪದಕಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ಆ ರಾಷ್ಟ್ರದ ಅಥ್ಲೀಟ್ಗಳು ಬಲಿಷ್ಟವಾಗಿದ್ದರೆ ಮಾತ್ರ ಸಾಧ್ಯ. ಇಂಚಾನ್ನಲ್ಲಿ ನಮ್ಮ ಅಥ್ಲೀಟ್ಗಳು ನೀಡಿದ ಪ್ರದರ್ಶನವನ್ನು ನೋಡಿದರೆ, ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಚೇತರಿಸಿಕೊಳ್ಳುವ ಅಗತ್ಯವಿದೆ. ಕ್ರೀಡಾಕೂಟಗಳಲ್ಲಿ ಯಾವುದೇ ರೀತಿಯ ತಾಂತ್ರಿಕ ತೊಂದರೆಗಳು ಉಂಟಾದರೆ, ಅದನ್ನು ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂಬುದನ್ನು ಕ್ರೀಡಾಪಟುಗಳು ಗಮನದಲ್ಲಿಟ್ಟುಕೊಳ್ಳಬೇಕು.
ಶ್ರೇಷ್ಠ ಅಥ್ಲೀಟ್ಗಳು
ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಭಾರತ ಪ್ರತಿಭಾನ್ವಿತ ಕ್ರೀಡಾಪಟುಗಳನ್ನೇ ಕಣಕ್ಕಿಳಿಸಬೇಕು. ಅಲ್ಲದೆ, ಅಗ್ರ ರ್ಯಾಂಕಿಂಗ್ ಹೊಂದಿರುವ ಆಟಗಾರರು ಫಿಟ್ ಆಗಿದ್ದಾರೆಯೇ ಎಂದು ಖಚಿತಪಡಿಸಿಕೊಂಡೇ ಕ್ರೀಡಾಕೂಟಕ್ಕೆ ಕಳುಹಿಸಿಕೊಡಬೇಕು. ಅಲ್ಲದೆ, ದೇಶಾಭಿಮಾನ ಮತ್ತು ದೇಶಕ್ಕಾಗಿ ಪದಕಗಳನ್ನು ಗೆಲ್ಲುವ ಕಿಚ್ಚನ್ನು ಅಥ್ಲೀಟ್ಗಳಲ್ಲಿ ಹೊತ್ತಿಸುವ ಕೆಲಸವಾಗಬೇಕಿದೆ.
ಜವಾಬ್ದಾರಿಯುತ ಅಧಿಕಾರಿಗಳು
ಕೆಲ ಕ್ರೀಡಾಪಟುಗಳನ್ನು ಆಯ್ಕೆ ಮಾಡುವುದು ಮತ್ತು ಅವರಿಗೆ ಸಂಬಂಧಿಸಿದ ವಿಷಯಗಳ ಕುರಿತು ತಕ್ಷಣವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಮಹತ್ವದ್ದಾಗಿದೆ. ಹೀಗಾಗಿ, ಕ್ರೀಡೆ ಮತ್ತು ದೇಶಾಭಿಮಾನ ಹೊಂದಿರುವ ಚುರುಕಾದ ಅಧಿಕಾರಿಗಳನ್ನು ಆಯ್ಕೆ ಮಾಡುವುದು ಅತಿ ಅಗತ್ಯ. ಈ ಬಾರಿ ಶೂಟರ್ ಅಭಿನವ್ ಬಿಂದ್ರಾಗೆ ವೀಸಾ ದೊರಕಿಸಿಕೊಡುವಲ್ಲಿ ಅಧಿಕಾರಿಗಳು ಮಾಡಿದ ವಿಳಂಬ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿಲ್ಲ ಎನ್ನಲಾಗುವುದಿಲ್ಲ. ಭಾರತೀಯ ಒಲಂಪಿಕ್ಸ್ ಸಂಸ್ಥೆ ಈ ಕುರಿತು ಜವಾಬ್ದಾರಿಯುತ ಕಾರ್ಯ ನಿರ್ವಹಿಸಬೇಕಾಗಿರುವುದು ತುಂಬಾ ಆಗತ್ಯ.
ಆನಗತ್ಯ ದಂಡು ಸಲ್ಲ
ಕ್ರೀಡಾ ಸಂಸ್ಥೆಗಳು ಪ್ರಭಾವಿ, ಆದರೆ ಅಂಗಳದ ಒಳಗೆ ನಿರುಪಯುಕ್ತರಾದ ವ್ಯಕ್ತಿಗಳನ್ನು ಮಹತ್ವದ ಕ್ರೀಡಾಕೂಟಗಳಿಗೆ ಕಳುಹಿಸುವುದನ್ನು ನಿಲ್ಲಿಸಬೇಕು. ಆಗತ್ಯ ಸಿಬ್ಬಂದಿಯನ್ನಷ್ಟೇ ಕಳುಹಿಸಿಕೊಡಬೇಕು. ಈ ಬಾರಿ ಐಒಎ ಮೊದಲು ಸಿದ್ಧಪಡಿಸಿದ್ದ ಪಟ್ಟಿಗೂ ನಂತರ ಕೇಂದ್ರ ಕ್ರೀಡಾ ಸಚಿವಾಲಯ ಅನುಮತಿ ನೀಡಿದ ಪಟ್ಟಿಗೂ ಆಜಗಜಾಂತರವಿತ್ತು. ಇಲ್ಲಿ ಅಧಿಕಾರಿಗಳ ಕೈವಾಡವಿರುವುದರಲ್ಲಿ ಅನುಮಾನವಿಲ್ಲ.
ಕ್ರೀಡಾ ಸ್ಫೂರ್ತಿ ಅಗತ್ಯ
ಕ್ರೀಡಾಪಟುಗಳಲ್ಲಿ ಹೆಚ್ಚಿನ ಕ್ರೀಡಾ ಸ್ಫೂರ್ತಿ ತುಂಬಿರುವುದು ಅಗತ್ಯ. ಅದೃಷ್ಟವಶಾತ್ ಈ ಬಾರಿ ಕ್ರೀಡಾಕೂಟದಲ್ಲಿ ಭಾರತದ ಯಾವುದೇ ಅಥ್ಲಿಟ್ಗಳು ಡೋಪಿಂಗ್ ಸೇವಿಸಿರುವ ಬಗ್ಗೆ ವರದಿಯಾಗಿಲ್ಲ. ಅಲ್ಲದೆ, ನಾವು ದೇಶವನ್ನು ಪ್ರತಿನಿಥಿಸುತ್ತಿದ್ದೇವೆ, ನಮ್ಮ ವಿಷಯಗಳಲ್ಲಿ ಕುಟುಂಬದ ಸದಸ್ಯರಾಗಲಿ ಅಥವಾ ಇತರರು ಭಾಗಿಯಾಗಬಾರದು ಎಂಬ ಅಂಶವನ್ನು ಗಮನದಲ್ಲಿರಿಸಿಕೊಳ್ಳಬೇಕು. ಎಂತಹ ಸಂದರ್ಭವೇ ಎಂದುರಾದರೂ, ಸರಿಯದು ಕಳೆದುಕೊಳ್ಳದೇ ಪ್ರಬುದ್ಧ ವ್ಯಕ್ತಿಯಂತೆ ನಡೆದುಕೊಳ್ಳಬೇಕು.