ವೆಸ್ಟ್ ಇಂಡೀಸ್ ಗೆ 264 ರನ್‌ಗಳ ಸಾಧಾರಣ ಗುರಿ
ಭಾರತ ವೆಸ್ಟ್ ಇಂಡಿಸ್ ನಡುವೆ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡಿಸ್‌ಗೆ ಗೆಲ್ಲಲು 264 ರನ್‌ಗಳ ಸಾಧಾರಣ ಮೊತ್ತವನ್ನು ಭಾರತ ನೀಡಿದೆ.
ನವದೆಹಲಿ: ಭಾರತ ವೆಸ್ಟ್ ಇಂಡಿಸ್ ನಡುವೆ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡಿಸ್‌ಗೆ ಗೆಲ್ಲಲು 264 ರನ್‌ಗಳ ಸಾಧಾರಣ ಮೊತ್ತವನ್ನು ಭಾರತ ನೀಡಿದೆ.
ದೆಹಲಿಯ ಫಿರೋಜ್ ಶಾ ಕೊಟ್ಲಾ ಕ್ರೀಡಾಂಗಣದಲ್ಲಿ ಎರಡನೇ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಟೀಂ ಇಂಡಿಯ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರರ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ನಿಗದಿತ ಓವರ್‌ನಲ್ಲಿ 263 ರನ್‌ಗಳನ್ನು ಗಳಿಸಿದೆ. ಇದರೊಂದಿಗೆ ವೆಸ್ಟ್ ಇಂಡಿಸ್‌ಗೆ ಗೆಲ್ಲಲು ಸಾಧಾರಣ ಮೊತ್ತ ನೀಡಿದೆ.
ಆರಂಭಿಕ ಆಟಗಾರರಾದ ಶಿಖರ್ ಧವನ್ ಕೇವಲ 1 ರನ್ ಗಳಿಸಿ ಔಟಾದರು. ನಂತರ ಅಜಿಂಕ್ಯಾ ರಹಾನೆ 12 ರನ್ ಗಳಿಸಿ ಪೆವಿಲಿಯನ್ ಸೇರಿದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಅಂಬಟ್ಟಿ ರಾಯುಡು 32 ರನ್ ಗಳಿಸಿದ್ದಾಗ ಬೆನ್ ಎಸೆದ ಚೆಂಡನ್ನು ಡೆರನ್ ಸಮಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಅಲ್ಪಮೊತ್ತಕ್ಕೆ ಕುಸಿಯುತ್ತಿದ್ದ ಭಾರತಕ್ಕೆ ಚೇತರಿಗೆ ತಂದುಕೊಟ್ಟಿದ್ದು, ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ. ಇಬ್ಬರು ಆಟಗಾರರು ತಲಾ 62 ರನ್ ಗಳಿಸಿ ಭಾರತ ಹೀನಾಯ ಮೊತ್ತಕ್ಕೆ ಔಟಾಗುವುದನ್ನು ತಪ್ಪಿಸಿದರು.
ಕೊಹ್ಲಿ, ರೈನಾರ ಜುಗಲ್‌ಬಂದಿ ನಂತರ ಬಂದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಸಹ ಅರ್ಧ ಶತಕ ದಾಖಲಿಸಿದ್ದರು. ಇದರೊಂದಿಗೆ ಭಾರತ 250 ಗಡಿ ದಾಟಲು ಸುಲಭವಾಯಿತು.