ಒಂದು BLACK ಪರ್ಲ್ ಕತೆ
ಫುಟ್ಬಾಲ್ ದೇವರು ಚಹಾ ಮಾರುತ್ತಿದ್ದ, 'ಬ್ಲ್ಯಾಕ್ ಪರ್ಲ್' ಪೇಲೆಯ ಬಾಲ್ಯದ ದಿನಗಳು
ಚಹಾದ ಅಂಗಡಿಯಲ್ಲಿ ವೇಯ್ಟರ್ ಕೆಲಸ ಮಾಡುತ್ತಿದ್ದ ಒಬ್ಬ ಹತ್ತು ವರ್ಷದ ಕಪ್ಪುಹುಡುಗ ಸಾಯಂಕಾಲದ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ. ಅವನಪ್ಪನೂ ಸುಮಾರು ಅದೇ ಹೊತ್ತಿಗೆ ಕೆಲಸದಿಂದ ಬರುತ್ತಿದ್ದ. ಇಬ್ಬರೂ ರಾತ್ರಿಯ ಊಟಮುಗಿಸಿಕೊಂಡು ರಸ್ತೆಗಿಳಿಯುತ್ತಿದ್ದರು. ಅಪ್ಪನ ಕಂಕುಳಲ್ಲಿ ರದ್ದಿಯ ಚೆಂಡು ಹಾಗೂ ಮಗನ ಕಾಲಲ್ಲಿ ಹರಿದ ಬೂಟುಗಳು. ರಸ್ತೆಬದಿಯ ಪುಟ್ಟಬಯಲಿನಲ್ಲಿ ತಾಸುಹೊತ್ತು ಫುಟ್ಬಾಲ್ ಅಭ್ಯಾಸ ಮಾಡಿಸುತ್ತಿದ್ದ ಅವನಪ್ಪ ಕೂಡ ಒಬ್ಬ ಉತ್ತಮ ಫುಟ್ಬಾಲ್ ಆಟಗಾರ.ಅಭ್ಯಾಸದ ನಂತರ ಕುಳಿತು ದಣಿವಾರಿಸಿಕೊಳ್ಳುವಾಗ ಆತ ಮಗನಿಗೆ 'ನೋಡು ಮಗಾ, ಫುಟ್ಬಾಲ್ ಸೂಪರ್ಸ್ಟಾರ್ ಆಗುವುದು ನನ್ನಿಂದಂತೂ ಸಾಧ್ಯವಾಗಲಿಲ್ಲ. ಆದರೆ ನಿನ್ನನ್ನು ವಿಶ್ವದ ಮಹಾನ್ ಫುಟ್ಬಾಲ್ ಆಟಗಾರನಾಗಿ ಮಾಡಿಯೇ ತೀರುತ್ತೇನೆ' ಎಂದು ಹೇಳುತ್ತ ಅವನನ್ನು ಕನಸುಗಾರನಾಗಿ ರೂಪಿಸುತ್ತಿದ್ದ. ಅವನಲ್ಲಿ ಫುಟ್ಬಾಲ್ ಬಗ್ಗೆ ಆಸಕ್ತಿ ಹುಟ್ಟಿಸಿ ಆಟವೇ ನಿನ್ನ ಪ್ರಾಣವೆನ್ನುವಂತೆ ಪ್ರೇರಣೆ ನೀಡುತ್ತಿದ್ದ. ತಂದೆ ಮಗನಿಗೆ ಫುಟ್ಬಾಲ್ನ ಮೊದಲ ಪಾಠಗಳನ್ನು ಕಲಿಸುತ್ತಿರುವಾಗ ಅವರ ಬಡತನ ಎಷ್ಟಿತ್ತೆಂದರೆ ಅವರಿಗೆ ಅಭ್ಯಾಸಕ್ಕಾಗಿ ಒಂದು ಚೆಂಡನ್ನು ಹೊಂದಿಸಿಕೊಳ್ಳುವುದೂ ಸಹಅಸಾಧ್ಯವಾಗಿತ್ತು. ಆದರೂ ಅವರು ಕೈಕಟ್ಟಿ ಕುಳಿತುಕೊಳ್ಳದೆ ಹಳೆಯ ವೃತ್ತಪತ್ರಿಕೆಗಳನ್ನು ಬಟ್ಟೆಯಲ್ಲಿ ಸುತ್ತಿ ದ್ರಾಕ್ಷಿಹಣ್ಣಿನ ಬಳ್ಳಿಯಿಂದ ಅದನ್ನು ಬಿಗಿಯಾಗಿ ಕಟ್ಟಿ ಚೆಂಡಿನಂತೆ ರೂಪಕೊಟ್ಟು ಉತ್ಸಾಹದಿಂದ ಆಡುತ್ತಿದ್ದರು. ಒಂದೊಂದು ದಿನ ಹಗಲೊತ್ತು ದೊರಕುವ ಬಿಡುವಿನ ವೇಳೆಯಲ್ಲಿ ಆ ಹುಡುಗನೊಬ್ಬನೇ ಮನೆಯ ಮಗ್ಗುಲಿನ ಖಾಲಿ ಗೋದಾಮಿನಲ್ಲಿ ಚೆಂಡಿನೊಂದಿಗೆ ಸ್ಪರ್ಧೆಗಿಳಿಯುತ್ತಿದ್ದ. ಆ ಸಂದರ್ಭದಲ್ಲಿ ಚೆಂಡು ಮತ್ತು ಅವನ ನಡುವೆ ನೀರು ಮತ್ತು ಮೀನಿಗಿರುವ ಸಂಬಂಧವಿರುತ್ತಿತ್ತು. ಆತನ ಹೆಸರೇ ಪೇಲೆ!
'ಬ್ಲ್ಯಾಕ್ ಪರ್ಲ್' ಪೇಲೆಯ ಬಾಲ್ಯದ ದಿನಗಳು
ಸಮವಯಸ್ಕರೊಂದಿಗೆ ಆಡುವಾಗ ಎಲ್ಲರನ್ನೂ ಮೀರಿಸುತ್ತಿದ್ದ ಪೇಲೆ ವಯಸ್ಕ ಆಟಗಾರರೊಂದಿಗೆ ಆಡಲು ಮುಂದಾದಾಗ 'ಈ ಹುಡುಗ ಇನ್ನೂ ಬಹಳ ಚಿಕ್ಕವನು, ಇಂಥ ವೇಗದ ಆಟವಾಡುವುದು ಇವನಿಂದ ಸಾಧ್ಯವಿಲ್ಲ' ಎಂದು ಅವನನ್ನು ತಂಡಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿತು. ಆದರೆ ಹೇಗೋ ಸ್ಥಾನ ಗಿಟ್ಟಿಸಿದ ಆತ ಹದಿನಾಲ್ಕು ಗೋಲುಗಳನ್ನು ಬಾರಿಸಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಕೀರ್ತಿಗೆ ಭಾಜನನಾದ. ಪಂದ್ಯಾವಳಿಯುದ್ದಕ್ಕೂ ತನ್ನನ್ನು ಚಿಕ್ಕವನೆಂದು ಕಡೆಗಣಿಸಿದವರೂ ಹುಬ್ಬೇರಿಸುವಂತೆ ಆಡಿದ 'ಪೇಲೆ'(ಪೀಲೆ ಸರಿಯಾದ ಉಚ್ಛಾರವಲ್ಲ), ದ ಕಿಂಗ್ ಪೇಲೆ..! ಆ ಸ್ಥಳೀಯ ಪಂದ್ಯಾವಳಿಯಲ್ಲಿನ ಯಶಸ್ಸು ಪೇಲೆಯ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು. ಮುಂದೆ ವಿಶ್ವದಾದ್ಯಂತ ಪ್ರಸಿದ್ಧನಾಗಿ ಅಭಿಮಾನಿಗಳಿಂದ 'ಬ್ಲ್ಯಾಕ್ ಪರ್ಲ್' ಎಂದೇ ಕರೆಸಿಕೊಂಡ ಪೇಲೆಯ ನಿಜನಾಮ 'ಎಡಸನ್ ಅರ್ಯಾಂಟೆಸ್ ದೊ ನಾಸ್ಕಿಮೆಂಟೊ'. ಎಡಸನ್ ಹುಟ್ಟಿದ್ದು 21 ಅಕ್ಟೋಬರ್ 1940 ರಂದು, ಬ್ರೆಝಿಲ್ ದೇಶದ ಟ್ರೆಸ್ ಕೊರ್ಯಾಕೊಸ್ನಲ್ಲಿ. ಡಾಂದಿನ್ಹೊ ನಾಸ್ಕಿಮೆಂಟೊ ಮತ್ತು ಕೆಲೆಸ್ಟೆ ಅರ್ಯಾಂಟೆಸ್ ದಂಪತಿಗಳ ಇಬ್ಬರು ಮಕ್ಕಳಲ್ಲಿ ಎಡ್ಸನ್ ದೊಡ್ಡವನು. ಎಡಸನ್ನ ತಂದೆಗೆ ಫುಟ್ಬಾಲ್ ಎಂದರೆ ಪ್ರಾಣ. ತಾನೊಬ್ಬ ದೊಡ್ಡ ಆಟಗಾರನಾಗಬೇಕೆಂಬ ಹಂಬಲವಿತ್ತು ಅವನಿಗೆ. ಆದರೆ ಬಡತನ ಅವನ ಎಲ್ಲ ಆಸೆಗಳನ್ನು ಕೊಂದುಹಾಕಿತ್ತು. ವಿಜ್ಞಾನದಲ್ಲಿ ಅಪಾರ ಆಸಕ್ತಿಹೊಂದಿದ್ದ ಎಡಸನ್ನ ತಂದೆ ಅವನಿಗೆ ಥಾಮಸ್ ಅಲ್ವ್ ಎಡಿಸನ್ನಹೆಸರನ್ನಿಟ್ಟಿದ್ದ, ಆದರೆ ಬೇಕೆಂದೇ ಶಾಲೆಯಲ್ಲಿ ಎಡಿಸನ್ಬದಲಾಗಿ ಎಡಸನ್ ಎಂದು ಬರೆಯಿಸಿದ. ಎಡಸನ್ನಿಗೆಅವನ ಪರಿವಾರವು ಪ್ರೀತಿಯಿಂದ 'ಡಿಕೊ' ಎಂದು ಕರೆಯುತ್ತಿತ್ತು. ಶಾಲಾದಿನಗಳಲ್ಲಿ ವಾಸ್ಕೊ-ದ-ಗಾಮ್ ತಂಡದ ಗೋಲ್ಕೀಪರ್ 'ಬೇಲೆ' ಎಡಸನ್ನ ನೆಚ್ಚಿನ ಆಟಗಾರನಾಗಿದ್ದ. ಮುಂದಿನ ದಿನಗಳಲ್ಲಿ ಎಡಸನ್ನ ಸಹಪಾಠಿಗಳು ಬೇಲೆಯನ್ನು 'ಪೇಲೆ' ಎಂದು ಕರೆಯತೊಡಗಿದರು. ಅಲ್ಲಿಂದ ಅವನಿಗೆ ಪೇಲೆ ಎಂಬ ಉಪನಾಮ ದೊರೆಯಿತು. ಪೋರ್ಚುಗೀಸ್ ಭಾಷೆಯಲ್ಲಿ ಪೇಲೆ ಎಂದರೆ ಚಮತ್ಕಾರ ಎಂದರ್ಥವಂತೆ. ಅಲ್ಲದೆ ಎಡಸನ್ ವಾಸಿಸುತ್ತಿದ್ದ ಕೊಳಚೆ ಪ್ರದೇಶದಲ್ಲಿಯ ಜನರ ಜೀವನೊದ್ಧಾರಕ್ಕೆಂದು ಶ್ರಮಿಸುತ್ತಿದ್ದ ಐರಿಶ್ ಪ್ರವಾದಿಯೊಬ್ಬ ಎಡಸನ್ನ ಫುಟ್ಬಾಲ್ ಕೌಶಲ್ಯಗಳನ್ನು ಕಂಡು ಅಚ್ಚರಿಯಿಂದ "Ag imirt peile..' ಎಂದು ಉದ್ಘರಿಸಿದ. ಈ ಶಬ್ದಗಳೇ ಅವನಿಗೆ ಹೆಸರು ದೊರೆಯುವುದಕ್ಕೆ ಇನ್ನೊಂದು ಕಾರಣ.
ಚಹಾದಂಗಡಿಯ ಹುಡುಗಫುಟ್ಬಾಲ್ ದಂತಕತೆಯಾದ!
ಅತ್ಯಂತ ಬಡತನದಲ್ಲಿ ಬೆಳೆಯುತ್ತಿದ್ದ ಎಡಸನ್ ಮುಂಜಾನೆ ಮತ್ತು ಸಾಯಂಕಾಲದ ಹೊತ್ತಲ್ಲಿ ಜನರು ಆಫೀಸಿಗೆ ಹೋಗುವಾಗ ಹಾಗೂ ಮರಳುವಾಗ ರಸ್ತೆಬದಿಯ ಚಹಾದ ಅಂಗಡಿಯೊಂದರ ಮುಂದೆ ಒಂದು ಪುಟ್ಟ ಪೆಟ್ಟಿಗೆಯನ್ನಿಟ್ಟುಕೊಂಡು ಕುಳಿತು ಜನರ ಬೂಟ್ಪಾಲಿಶ್ ಮಾಡುತ್ತಿದ್ದ ಹಾಗೂ ಗಿರಾಕಿಗಳಿಲ್ಲದ ಮಧ್ಯಾಹ್ನದ ಹೊತ್ತಲ್ಲಿ ಆತ ಚಹಾದ ಅಂಗಡಿಯಲ್ಲಿ ಕೂಲಿಕಾರನಾಗಿಯೂ ದುಡಿದು ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದ. ತಂದೆಯಿಂದ ಫುಟ್ಬಾಲ್ ಕೌಶಲ್ಯಗಳನ್ನು ಕರಗತ ಅಲ್ಲ ಪಾದಗತ ಮಾಡಿಕೊಂಡ ಪೇಲೆ ತನ್ನ ಫುಟ್ಬಾಲ್ ಕರಿಯರ್ ಪ್ರಾರಂಭಿಸಿದ್ದು ಬುರೋ ಕ್ಲಬ್ ಪರವಾಗಿ ಆಡುತ್ತ. ಒಂದು ದಿನ ಸ್ಥಳೀಯ ಪಂದ್ಯವೊಂದರಲ್ಲಿ ಆಡುತ್ತಿದ್ದ ಎಡಸನ್ನ ಚುರುಕಿನ ಆಟ ನೋಡಿ ದಂಗಾಗಿಹೋದ ಸ್ಯಾಂಟೊಸ್ನ ಕೋಚ್ 'ವ್ಲಾಡೆಮಿರ್ ಡಿ ಬ್ರಿಟೊ' ಅವನನ್ನು ತನ್ನ ಜೊತೆಗೆ ಕರೆದುಕೊಂಡು ಹೋದ. ಬ್ರಿಟೊನ ಸಂಪರ್ಕ ಪೇಲೆಯ ಜೀವನವನ್ನೇ ಬದಲಿಸಿತು. ಬ್ರಿಟೊ ಹಗಲಿರುಳೆನ್ನದೆ ಪೇಲೆಯನ್ನು ಅಭ್ಯಾಸಕ್ಕೆ ತೊಡಗಿಸಿ ಫುಟ್ಬಾಲ್ ಮೈದಾನದ ಪಟ್ಟುಗಳನ್ನು ಒಂದಿಂಚೂ ಬಿಡದೇ ಹೇಳಿಕೊಟ್ಟ. ಬ್ರಿಟೋನ ಕೈಕೆಳಗೆ ಪಳಗಿದ ಪೇಲೆ ಅದ್ಭುತ ಪ್ರತಿಭಾವಂತನಾಗಿ ಹೊರಹೊಮ್ಮಿದ. ಪೇಲೆ ಹದಿನಾಲ್ಕನೇ ವಯಸ್ಸಿನಲ್ಲಿಯೇ ಇಂಡೋರ್ ಫುಟ್ಬಾಲ್ನಲ್ಲಿ ಅಚ್ಚರಿಯ ಆಟ ಪ್ರದರ್ಶಿಸಿದ. ಮುಂದೆ 1956ರಲ್ಲಿ ಬ್ರಿಟೊ ಪೇಲೆನನ್ನು ಸ್ಯಾಂಟೊಸ್ ಫುಟ್ಬಾಲ್ ಕ್ಲಬ್ಗೆ ಸೇರಿಸುತ್ತ 'ಹದಿನೈದು ವರ್ಷದ ಈ ಬಡಹುಡುಗ ಮುಂದೆ ವಿಶ್ವದ ಮಹಾನ್ ಆಟಗಾರನಾಗಲಿದ್ದಾನೆ' ಎಂದು ಭವಿಷ್ಯ ನುಡಿದ ಹಾಗೂ ಅದು ನಿಜವೂ ಆಯಿತು. 1957ರಲ್ಲಿ ಅವನನ್ನು ಬ್ರೆಝಿಲ್ನ ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಲಾಯಿತು. 1957ರಲ್ಲಿ ಪೇಲೆ ತನ್ನ ತಾಯ್ನಾಡು ಬ್ರೆಝಿಲ್ ಪರವಾಗಿ ಆಡುತ್ತಅರ್ಜೆಂಟೈನಾ ವಿರುದ್ಧ ಗೋಲು ಬಾರಿಸಿ ಅಂತರಾಷ್ಟ್ರೀಯ ಪಂದ್ಯದಲ್ಲಿ ಗೋಲು ಬಾರಿಸಿದ ಅತ್ಯಂತ ಕಿರಿಯ ಆಟಗಾರನೆನಿಸಿದ, ಆಗ ಅವನ ವಯಸ್ಸು 16 ವರ್ಷ 9 ತಿಂಗಳು. 1958ರ ವಿಶ್ವಕಪ್, ಪೇಲೆಯನ್ನು ದಾಖಲೆಗಳ ಸರದಾರನನ್ನಾಗಿಸಿತು. ಅಲ್ಲಿಂದ ಪೇಲೆ 1958, 1962 ಮತ್ತು 1970ರ ಫೀಫಾ ವಿಶ್ವಕಪ್ಗಳನ್ನು ಬ್ರೆಝಿಲ್ನ ಮುಡಿಗೇರಿಸಿದ. ವಿಶ್ವದ ಶ್ರೀಮಂತ ಫುಟ್ಬಾಲ್ ಕ್ಲಬ್ಗಳು ಪೇಲೆಯನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸಿದಾಗ ಬ್ರೆಝಿಲ್ನ ಅಂದಿನ ಅಧ್ಯಕ್ಷರಾದ ಜ್ಯಾನಿಯೊ ಕ್ವಾಡ್ರಾಸ್ ಪೇಲೆಯನ್ನು 'ರಾಷ್ಟ್ರೀಯ ಸಂಪತ್ತು' ಎಂದು ಘೋಷಿಸಿ ಈ ದೈತ್ಯಪ್ರತಿಭೆಯು ದೇಶದಿಂದ ನಿರ್ಗಮಿಸದಂತೆ ನೋಡಿಕೊಂಡರು.
1962ರ ವಿಶ್ವಕಪ್ಫೈನಲ್ ಪಂದ್ಯವನ್ನು ಬ್ರೆಝಿಲ್ 4-1 ರಿಂದ ಇಟಲಿ ವಿರುದ್ಧ ಗೆದ್ದುಕೊಂಡಿತು. ಪಂದ್ಯದ ನಂತರ ಮಾತಾಡುತ್ತ ಇಟಲಿಯ ಬ್ರಂಗಿಚ್ 'ಪಂದ್ಯಕ್ಕೂ ಮೊದಲು ನನಗೆ ನಾನೇ ಹೇಳಿಕೊಳ್ಳುತ್ತ ಅವನೂ ಎಲ್ಲರಂತೆಯೇ ಎಲುಬು-ಮಾಂಸದಿಂದ ಮಾಡಲ್ಪಟ್ಟ ಒಬ್ಬ ಸಾಧಾರಣ ಮನುಷ್ಯ ಎಂದುಕೊಂಡಿದ್ದೆ. ಆದರೆ ನನ್ನ ಗ್ರಹಿಕೆ ತಪ್ಪಾಗಿತ್ತು' ಎಂದಿದ್ದ.
ಶರವೇಗದ ದಾಖಲೆಗಳ ಸರದಾರ
ಪೇಲೆಯ ಆಟ ನೋಡುವುದೆಂದರೆ ಅದೊಂದು ಮಾಂತ್ರಿಕನ ಮೋಡಿಗೆ ಒಳಗಾಗುವ ಪ್ರಕ್ರಿಯೆಯೇ ಆಗಿತ್ತು. ಆ ದಿನಗಳಲ್ಲಿಅವನು ಪ್ರೇಕ್ಷಕರಿಗೆ ಯಾವ ಪರಿಯ ಮೋಡಿ ಮಾಡಿದ್ದನೆಂದರೆ ಲೋಗಸ್ನಲ್ಲಿ ನಡೆಯಬೇಕಿದ್ದ ಪಂದ್ಯದಲ್ಲಿ ಪೇಲೆಯ ಆಟ ನೋಡಲೆಂದು 1967 ರಲ್ಲಿ ನೈಜೀರಿಯ 48 ಗಂಟೆಗಳ ಕದನವಿರಾಮವನ್ನು ಘೋಷಿಸಿ ಪಂದ್ಯವನ್ನು ವೀಕ್ಷಿಸಲು ಅನುವು ಮಾಡಿಕೊಡಲಾಯಿತು. ಕ್ರೀಡಾ ಇತಿಹಾಸದಲ್ಲಿ ಇಂಥ ಘಟನೆ ಅದೇ ಮೊದಲು. ಪೇಲೆ ಒಬ್ಬ ಪರಿಪೂರ್ಣ ಆಟಗಾರನಾಗಿದ್ದ. ಶರವೇಗ,ವಿಸ್ಮಯಕಾರಿ ಸಮತೋಲನ, ಅಭೇದ್ಯ ರಣತಂತ್ರ ಹೀಗೆ ಜನರನ್ನು ಮಂತ್ರಮುಗ್ಧರನ್ನಾಗಿಸಬಲ್ಲ ಹಲವಾರು ಕೌಶಲ್ಯಗಳುಅವನಲ್ಲಿದ್ದವು. ವಿಶ್ವವು ಸಚಿನ್ನನ್ನು'ಕ್ರಿಕೆಟ್ನ ದೇವರು' ಎನ್ನುವಂತೆಯೇ ಪೇಲೆ 'ಫುಟ್ಬಾಲ್ನ ದೇವರು'.
1969ರ ಪಂದ್ಯದಲ್ಲಿ ಪೇಲೆ ತನ್ನ ಕ್ರೀಡಾಜೀವನದ 1000ನೇ ಗೋಲು ಬಾರಿಸಿದ. ಬ್ರೆಝಿಲ್ಗೆ ಅದೊಂದು ಅತ್ಯಂತ ಅಭಿಮಾನದ ಕ್ಷಣವಾಗಿತ್ತು. ಫುಟ್ಬಾಲ್ನಲ್ಲಿ ಅಧಿಪಥ್ಯ ಮೆರೆಯುತ್ತಿದ್ದ ಪೇಲೆ 1974ರಂದು ಸ್ವಯಂನಿವೃತ್ತಿ ಘೋಷಿಸಿದ. ಸಾಧನೆಯ ಶಿಖರದ ಉತ್ತುಂಗದಲ್ಲಿರುವಾಗಲೇ ಪೇಲೆ ನಿವೃತ್ತಿಯ ನಿರ್ಣಯ ಕೈಗೊಂಡಿದ್ದು ವಿಶ್ವಕ್ಕೆ ಅಚ್ಚರಿಯಾಯಿತು. ಈ ಸುದ್ದಿ ತಿಳಿದು ಅಭಿಮಾನಿಗಳು ಕಣ್ಣೀರು ಹಾಕಿದರು. ಅವನಿಲ್ಲದೆ ಫುಟ್ಬಾಲ್ ಆಟವೇ ಇಲ್ಲ ಎಂಬಂತಹ ಮನಸ್ಥಿತಿಯಲ್ಲಿದ್ದ ಅಮೇರಿಕಾ ಪೇಲೆಯನ್ನು ಮತ್ತೆ ಆಡುವಂತೆ ಒತ್ತಾಯಿಸಿತು. ಅಭಿಮಾನಿಗಳಿಗಾಗಿ ಪೇಲೆ ಪುನಃ ಬೂಟು ತೊಟ್ಟು ಮೈದಾನಕ್ಕಿಳಿದು ಮತ್ತೆ ಮೂರು ವರ್ಷ ಅಂದರೆ 1977ವರೆಗೆ ತನ್ನ ಯಕ್ಷಿಣಿಯನ್ನು ಪ್ರದರ್ಶಿಸಿದ. ಅಭ್ಯಾಸಕ್ಕೆಂದು ಒಂದು ಚೆಂಡು ಹೊಂದಿಸಿಕೊಳ್ಳಲಾಗದ ಬಡಹುಡುಗ ಅದೇ ಚೆಂಡಿನ ಬಲದಿಂದ ಜಗತ್ತಿನ ಶ್ರೀಮಂತ ಹಾಗೂ ಪ್ರಸಿದ್ಧ ಆಟಗಾರನಾದ. ಫುಟ್ಬಾಲ್ನಿಂದಾಗಿ ಪೇಲೆ ಜನಪ್ರಿಯನಾದ, ಅಂತೆಯೇ ಪೇಲೆಯಿಂದಾಗಿ ಫುಟ್ಬಾಲ್ ಜನಪ್ರಿಯವಾಯಿತು.
ಕೀರ್ತಿಗೆ ಕೇವಲ ಪ್ರತಿಭೆ ಮುಖ್ಯವಲ್ಲ, ನಡತೆಯೂ..
ವ್ಯಾಪಕ ಪ್ರಸಿದ್ಧಿ-ಪ್ರತಿಷ್ಠೆಗಳನ್ನು ಬೆನ್ನಹಿಂದೆ ಹಾಕಿಕೊಂಡಿದ್ದರೂ ಎಂದಿಗೂ ಪೇಲೆ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳಲಿಲ್ಲ, ಅಹಂ ಅನ್ನು ತನ್ನತ್ತ ಸುಳಿಯಗೊಡಲಿಲ್ಲ. ಪೇಲೆ ಹಲವಾರು ಡಾಕ್ಯುಮೆಂಟರಿಗಳಲ್ಲಿ ಕಾಣಿಸಿದ, ಅಲ್ಲದೆ ತನ್ನ ಒಂದು ಚಿತ್ರಕ್ಕಾಗಿ ಸಂಗೀತವನ್ನೂ ಸಂಯೋಜಿಸಿದ, ಆತ್ಮಕತೆಯನ್ನೂ ಬರೆದು ಪ್ರಕಟಿಸಿದ. ಇವೆಲ್ಲ ಅಂಶಗಳಿಂದಾಗಿ ಆತ ಇತರೆ ಆಟಗಾರಿರಿಗಿಂತ ಭಿನ್ನವಾಗಿ ಕಂಡ. ಆದರೆ ಬೆಳಕಿನ ಹಿಂದೆ ಕತ್ತಲೆ ಇರುವಂತೆಯೇ ಈ ಮಹಾನ್ ಸಾಧಕನಿಗೂ ಗ್ರಹಣಗಳು ತಪ್ಪಲಿಲ್ಲ. ಅವನ ವೈವಾಹಿಕ ಜೀವನವು ಏರುಪೇರಿನಿಂದ ಕೂಡಿತ್ತು. 1966ರಲ್ಲಿ ರೋಸ್ಮೇರಿಯನ್ನು ಮದುವೆಯಾದ ಪೇಲೆ 1982ರಲ್ಲಿ ವಿಚ್ಛೇದನ ಪಡೆದ. ನಂತರ 17 ವರ್ಷದ ಮಾಡೆಲ್ ಕ್ಷುಜಾಳೊಂದಿಗೆ 1981ರಿಂದ 86ರವರೆಗೆ ಇದ್ದ ಆತ 1994ರಲ್ಲಿ ಅಸ್ಸಿರಿಯಾ ಎಂಬ ಗಾಯಕಿಯನ್ನು ವರಿಸಿದ. ಅಲ್ಲದೆ 1968ರಲ್ಲಿ ಲೆನಿಥಾ ಎಂಬ ಪತ್ರಕರ್ತೆಯೊಂದಿಗೂ ಆತ ಸಂಬಂಧವಿಟ್ಟುಕೊಂಡಿದ್ದ. 1997ರಲ್ಲಿ ಅಮೇರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ರೊಂದಿಗೆ ಹೆಚ್ಚುವರಿ ಕ್ರೀಡಾಮಂತ್ರಿಯಾಗಿ ಕಾರ್ಯನಿರ್ವಹಿಸುತ್ತ ಪೇಲೆ ಬ್ರೆಜಿಲ್ ಫುಟ್ಬಾಲ್ನಲ್ಲಿಯ ಭ್ರಷ್ಟಾಚಾರವನ್ನು ಮಟ್ಟ ಹಾಕುವಂತೆ ಸರಕಾರವನ್ನು ವಿನಂತಿಸಿಕೊಂಡ. ಆದರೆ 2001ರಲ್ಲಿ ಸ್ವತಃ ತಾನೇ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ತನ್ನ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು. ಯುನಿಸೆಫ್ ಕೂಡ ಈ ಆರೋಪವನ್ನು ಖಂಡಿಸಿತು. ಆದರೆ ವಿಚಾರಣೆ ಮುಂದುವರಿಯಿತು ಆದರೆ ಆರೋಪಗಳು ಮಾತ್ರ ಸಾಬೀತಾಗಲೇ ಇಲ್ಲ.
ಫುಟ್ಬಾಲ್ ದೇವರ ನಿವೃತ್ತ ಜೀವನ
1977ರಲ್ಲಿ ಪೇಲೆಯ ಕೊನೆಯ ಪಂದ್ಯವನ್ನು ನೋಡಲೆಂದು ಬಂದಿದ್ದ ಆತನ ತಂದೆಯ ಕಣ್ಣುಗಳು ತುಂಬಿಬಂದಿದ್ದವು. ಅಂದು ಬಾಕ್ಸರ್ ಮಹಮ್ಮದ್ ಅಲಿ, ಸಿಂಗರ್ ಬಾಬ್ ಮಾರ್ಲೆ ಮುಂತಾದ ಖ್ಯಾತರೂ ಹಾಗೂ ಅಪಾರ ಪ್ರಮಾಣದ ಅಭಿಮಾನಿಗಳು ಜೇಂಟ್ಸ್ ಸ್ಟೇಡಿಯಂನಲ್ಲಿ ಸೇರಿದ್ದರು. ಅಚ್ಚರಿಯೆಂದರೆ ಪೇಲೆ ಆಟದ ಪ್ರಥಮಾರ್ಧವನ್ನು ಕಾಸ್ಮಾಸ್ ತಂಡದ ಪರವಾಗಿ ಹಾಗೂ ದ್ವಿತೀಯಾರ್ಧವನ್ನು ಸ್ಯಾಂಟೊಸ್ ತಂಡದ ಪರವಾಗಿಯೂ ಆಡಿದ. ಕಾಸ್ಮಾಸ್ ಪಂದ್ಯ ಗೆದ್ದುಕೊಂಡಿತು. ಆದರೆ ನಿಜಕ್ಕೂ ಗೆದ್ದಿದ್ದು ಪೇಲೆ! ಪಂದ್ಯದ ನಂತರ ಬಲಗೈಯಲ್ಲಿ ಬ್ರೆಝಿಲ್ ಧ್ವಜ ಹಾಗೂ ಎಡಗೈಯಲ್ಲಿಅಮೇರಿಕನ್ ಧ್ವಜವನ್ನು ಹಿಡಿದು ಕ್ರೀಡಾಂಗಣವನ್ನು ಸುತ್ತಿದ ಪೇಲೆ, ಅಭಿಮಾನಿಗಳಿಗೆ ಭಾವಪೂರ್ಣವಾಗಿ ಬೀಳ್ಕೊಟ್ಟ. ನಿವೃತ್ತಿ ಪಡೆದ ಮೇಲೂ ನಿಷ್ಕ್ರಿಯನಾಗದ ಪೇಲೆ ಫುಟ್ಬಾಲ್ ಕ್ರೀಡೆಯನ್ನು ಬೆಳೆಸುವುದರ ಜೊತೆಗೆ ಬಡವರ ಸಾಮಾಜಿಕ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾದ. ಶತಮಾನದ ಆಟಗಾರ ಎಂಬ ಹೆಗ್ಗಳಿಕೆ ಪಡೆದ ಪೇಲೆ 1999ರಲ್ಲಿ ಟೈಮ್ಸ್ ಬಿಡುಗಡೆ ಮಾಡಿದ ಇಪ್ಪತ್ತನೆ ಶತಮಾನದ ಮಹತ್ವದ 100 ಜನರಲ್ಲಿ ಒಬ್ಬನಾಗಿದ್ದ. ಆ ದಿನಗಳಲ್ಲಿ ಬಡವ-ಬಲ್ಲಿದರೆಂಬ ಭೇದವಿಲ್ಲದೆ ಪ್ರತಿಯೊಬ್ಬರು ಪ್ರೀತಿಸುತ್ತಿದ್ದ ಏಕೈಕ ವ್ಯಕ್ತಿ ಎಂದರೆ ಪೇಲೆ. ಅವನ ಅಭಿಮಾನಿಗಳಲ್ಲಿ ಅವನ ಬಗ್ಗೆ ಎಷ್ಟು ಪ್ರೀತಿಯಿತ್ತೆಂದರೆ ವಿಶ್ವದ ಯಾವುದೇ ಮೂಲೆಯಲ್ಲಿ ಆಟ ನಡೆಯಲಿ ಅವನನ್ನು ನೋಡಲು ಜನ ಮುಗಿಬೀಳುತ್ತಿದ್ದರು. ನೋಡಿದವರು ಅವನನ್ನು ಮುಟ್ಟಲು ಹಾತೊರೆಯುತ್ತಿದ್ದರು. ಮುಟ್ಟಿದವರು ಮುತ್ತಿಡಲು ಯತ್ನಿಸುತ್ತಿದ್ದರು. ಮುತ್ತಿಡುವುದು ಅಸಾಧ್ಯವಾದಾಗ ಅವರು ಪೇಲೆ ಓಡಾಡಿದ ಅಂಗಳಕ್ಕೆ ಮುತ್ತಿಟ್ಟು ಸಮಾಧಾನಿಯಾಗುತ್ತಿದ್ದರು. ಕ್ರೀಡಾಪಟುವಾಗಿ ಖ್ಯಾತಿಯನ್ನು ಗಳಿಸಿದಂತೆ ಉತ್ತಮ ನಡತೆಯ ಮನುಷ್ಯ ಎಂದು ಖ್ಯಾತಿ ಗಳಿಸಿದ ಕೆಲವೇ ಆಟಗಾರರಲ್ಲಿ ಪೇಲೆಯೂ ಒಬ್ಬ. ನಿಜಕ್ಕೂ ಅಚ್ಚಬಿಳಿಯ ಮುತ್ತುಗಳ ನಡುವೆ ನಿಂತಿರುವ ಪೇಲೆ ಸದಾಕಾಲಕ್ಕೂ ಆಕರ್ಷಣೆಯ ಕೇಂದ್ರವಾಗಿರುವಬ್ಲ್ಯಾಕ್ ಪರ್ಲ್..!
-ಗಿರೀಶ ಚಂದ್ರಕಾಂತ ಜಕಾಪುರೆ, ಕೊಲ್ಹಾಪುರ
girishcjakapure@gmail.com
9860838605
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.