ಆತಿಥೇಯರ ನೀರಸ ಪ್ರದರ್ಶನ
ನೀರಸ ಪ್ರದರ್ಶನ ನೀಡಿದ ಕರ್ನಾಟಕ ಇಲೆವೆನ್ ವನಿತೆಯರ ತಂಡ ಬೆಂಗಳೂರು ಕಪ್ ಹಾಕಿ...
ಬೆಂಗಳೂರು: ನೀರಸ ಪ್ರದರ್ಶನ ನೀಡಿದ ಕರ್ನಾಟಕ ಇಲೆವೆನ್ ವನಿತೆಯರ ತಂಡ ಬೆಂಗಳೂರು ಕಪ್ ಹಾಕಿ ಪಂದ್ಯಾವಳಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮಧ್ಯಪ್ರದೇಶ ಅಕಾಡೆಮಿ ವಿರುದ್ಧ ಸೋಲನುಭವಿಸಿತು.
ಇನ್ನೊಂದು ಪಂದ್ಯದಲ್ಲಿ ವೆಸ್ಟರ್ನ್ ರೈಲ್ವೆ ವಿರುದ್ಧ ಗೆದ್ದ ಹರ್ಯಾಣ ಮತ್ತು ಮಧ್ಯಪ್ರದೇಶ ಅಕಾಡೆಮಿ ತಂಡಗಳು ಪಂದ್ಯಾವಳಿಯ ಫೈನಲ್ ಪ್ರವೇಶಿಸಿದವು. ಕರ್ನಾಟಕದ ವನಿತೆಯರ ತಂಡ ಮಧ್ಯ ಪ್ರದೇಶ ಅಕಾಡೆಮಿ ವಿರುದ್ಧ 2-0 ಗೋಲುಗಳಿಂದ ಸೋಲನುಭವಿಸಿದರೆ, ವೆಸ್ಟರ್ನ್ ರೈಲ್ವೆ ತಂಡ ಹರ್ಯಾಣ ವಿರುದ್ಧ 1-3 ಗೋಲುಗಳ ಅಂತರದಿಂದ ಕಹಿ ಅನುಭವಿಸಿತು. ಗುರುವಾರ ಅಂತಿಮ ಲೀಗ್ ಪಂದ್ಯವನ್ನಾಡಲಿರುವ ಹರ್ಯಾಣ ಮತ್ತು ಮಧ್ಯ ಪ್ರದೇಶ ಅಕಾಡೆಮಿ ಲೀಗ್ ಹಂತದ ಅಗ್ರ ಸ್ಥಾನದ ಕಾತರದಲ್ಲಿವೆ.
ಮಹಿಳೆಯರ ವಿಭಾಗದ ದಿನದ ಮತ್ತೊಂದು ಪಂದ್ಯದಲ್ಲಿ ಸೆಂಟ್ರಲ್ ರೈಲ್ವೆ ತಂಡ ತಮಿಳುನಾಡು ವಿರುದ್ಧ 14-0 ಗೋಲುಗಳ ಭರ್ಜರಿ ಜಯ ಕಂಡುಕೊಂಡಿತು.
ರಾಜ್ಯ ಪುರುಷರಿಗೂ ನಿರಾಸೆ: ಪುರುಷರ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟರ ಇಲೆವನ್ ತಂಡ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ವಿರುದ್ಧ 1-5 ಗೋಲುಗಳಿಂದ ಭಾರೀ ಅಂತರದಿಂದ ಸೋಲನುಭವಿಸಿತು. ಇದರೊಂದಿಗೆ ಪಂದ್ಯವಾಳಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ 1ರಲ್ಲಿ ಜಯ ಕಂಡುಕೊಂಡ ಕರ್ನಾಟಕ ಪುರುಷರ ತಂಡ 3 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು.
ಬಿಪಿಸಿಎಲ್ ಪರ ಅಮೀರ್ ಖಾನ್ 2 ಗೋಲು ದಾಖಲಿಸಿದರೆ, ಗುರುಪ್ರೀತ್ ಸಿಂಗ್, ಜಗತ್ ಮತ್ತು ತುಷಾರ್ ಖಂಡೇಕರ್ ತಲಾ 1 ಗೋಲು ದಾಖಲಿಸಿದರು. ಕರ್ನಾಟಕದ ಪರ ಕುಶಾ ಕೆಪಿ ಅವರು ಏಕೈಕ ಗೋಲು ದಾಖಲಿಸಿದರು. ಪಂದ್ಯದಲ್ಲಿ ಏಳು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗಿಟ್ಟಿಸಿದರೂ, ಅತಿಥೇಯ ತಂಡಕ್ಕೆ ಹೆಚ್ಚಿನ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
ಇನ್ನೊಂದು ಪಂದ್ಯದಲ್ಲಿ ಹರ್ಯಾಣ ತಂಡ ರೈಲ್ವೆ ವಿರುದ್ಧ ಪಾರಮ್ಯ ಮರೆಯುವ ಮೂಲಕ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು.