ಕೊಹ್ಲಿ ಶತಕ, ಭಾರತದ ಮಡಿಲಿಗೆ ಸರಣಿ
ಕೊನೆಗೂ ಅತ್ಯುತ್ತಮ ಬ್ಯಾಟಿಂಗ್ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿಯ ಶತಕ ಹಾಗೂ ಬೌಲರ್ಗಳ ಕರಾರುವಾಕ್...
ಧರ್ಮಶಾಲಾ: ಕೊನೆಗೂ ಅತ್ಯುತ್ತಮ ಬ್ಯಾಟಿಂಗ್ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿಯ ಶತಕ ಹಾಗೂ ಬೌಲರ್ಗಳ ಕರಾರುವಾಕ್ ದಾಳಿಯ ಪರಿಣಾಮ ಟೀಂ ಇಂಡಿಯಾ, ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ವೆಸ್ಟ್ ಇಂಡೀಸ್ಗೆ ಸೋಲುಣಿಸಿದೆ. ಆ ಮೂಲಕ ಮಹೇಂದ್ರ ಸಿಂಗ್ ಧೋನಿ ಪಡೆ, ಏಕದಿನ ಸರಣಿಯಲ್ಲಿ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.
ವೆಸ್ಟ್ ಇಂಡೀಸ್ ಮಂಡಳಿಯೊಂದಿಗಿನ ಸಂಭಾವನೆ ವಿವಾದ ಬಗೆಹರಿಯದ ಹಿನ್ನೆಲೆಯಲ್ಲಿ ಕೆರಿಬಿಯನ್ ಆಟಗಾರರು ನಾಲ್ಕನೇ ಪಂದ್ಯದ ಬಳಿಕ ಭಾರತದ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು. ಆದರೆ ವಿಂಡೀಸ್ ಕ್ರಿಕೆಟ್ ಮಂಡಳಿ ನಾವು ಅಧಿಕೃತವಾಗಿ ಸರಣಿಯಿಂದ ಹಿಂದೆಸರಿದಿಲ್ಲ. ಮಾಧ್ಯಮಗಳಲ್ಲಿನ ವರದಿಯನ್ನು ಸುಳ್ಳು ಎಂದು ಹೇಳಿದೆ.
ಅಲ್ಲದೆ 4ನೇ ಪಂದ್ಯ ಮುಕ್ತಾಯದ ನಂತರ ಭಾರತ ತಂಡಕ್ಕೆ ಟ್ರೋಫಿಯನ್ನು ನೀಡಿಲ್ಲ. ಹಾಗಾಗಿ ಸರಣಿ ನಡೆಯುವುದೇ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲದಂತಾಗಿದೆ.
ಶುಕ್ರವಾ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 59 ರನ್ಗಳಿಂದ ವೆಸ್ಟ್ ಇಂಡೀಸ್ ವಿರುದ್ಧ ಜಯ ಗಳಿಸಿತು. ಗೆಲ್ಲಲು 331 ರನ್ಗಳ ಕಠಿಣ ಸವಾಲು ಪಡೆದಿದ್ದ, ಪ್ರವಾಸಿಗರು 48.1 ಓವರ್ಗಳಲ್ಲಿ 271 ರನ್ ಗಳಿಸಲಷ್ಟೇ ಶಕ್ತರಾದರು.
ಮಧ್ಯಮ ಕ್ರಮಾಂಕದ ದಾಂಡಿಗ ಮರ್ಲಾನ್ ಸ್ಯಾಮುಯೆಲ್ಸ್(112 ರನ್, 106 ಎಸೆತ, 9 ಬೌಂಡರಿ, 6 ಸಿಕ್ಸರ್) ಬಿಟ್ಟರೆ, ಇತರೆ ಪ್ರಮುಖ ಬ್ಯಾಟ್ಸ್ಗಳ ವೈಫಲ್ಯ ವಿಂಡೀಸ್ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಡಾರೆನ್ ಬ್ರಾವೋ(40) ಮತ್ತು ಕೆಳ ಕ್ರಮಾಂಕದಲ್ಲಿ ಆ್ಯಂಡ್ರೆ ರಸೆಲ್(46) ಸ್ಪಲ್ಪ ಮಟ್ಟಿಗೆ ಪ್ರತಿರೋಧ ತೋರಿದರೂ ಪ್ರಯೋಜನವಾಗಲಿಲ್ಲ.