ಫ್ರೆಂಚ್ ಓಪನ್: ಭಾರತಕ್ಕೆ ಸೈನಾ ನೇತೃತ್ವ
ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಭಾರತದ ಸೈನಾ ನೆಹ್ವಾಲ್ ಮಂಗಳವಾರದಿಂದ ಇಲ್ಲಿ ಆರಂಭವಾಗಲಿರುವ...
ಪ್ಯಾರಿಸ್: ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಭಾರತದ ಸೈನಾ ನೆಹ್ವಾಲ್ ಮಂಗಳವಾರದಿಂದ ಇಲ್ಲಿ ಆರಂಭವಾಗಲಿರುವ 2 ಲಕ್ಷದ 75 ಸಾವಿರ ಡಾಲರ್ ಬಹುಮಾನ ಮೊತ್ತದ ಫ್ರೆಂಚ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.
ಐದನೇ ಶ್ರೇಯಾಂಕಿತ ಆಟಗಾರ್ತಿಯಾಗಿರುವ ಸೈನಾ, 2012 ರಲ್ಲಿ ಇಲ್ಲಿ ಫೈನಲ್ ಪ್ರವೇಶಿಸಿದ್ದರು. ಈ ಬಾರಿ ಮಹಿಳೆಯರ ಸಿಂಗಲ್ಸ್ ವಿಭಾಗದ ತಮ್ಮ ಮೊದಲ ಸುತ್ತಿನ ಸೆಣಸಿನಲ್ಲಿ ಭಾರತೀಯ ಆಟಗಾರ್ತಿಯು, ಅತಿಥೇಯ ಸಾಶಿನಾ ವಿಗ್ನೇಸ್ ವಾರನ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಅದೇ ರೀತಿ ಎರಡು ಬಾರಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿರುವ ಪಿ.ವಿ ಸಿಂಧು, ಬುಧವಾರ ನಡೆಯಲಿರುವ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್ನ ಪೋರ್ನ್ಟಿಪ್ ಬುರಾನಪ್ರಸೆರ್ಸುಕ್ ಅವರ ವಿರುದ್ಧ ಹೋರಾಟ ನಡೆಸಲಿದ್ದಾರೆ. ಹೈದರಾಬಾದ್ನ ಈ ಇಬ್ಬರೂ ಆಟಗಾರ್ತಿಯರು ಯಶಸ್ವಿ ಹೆಜ್ಜೆ ಇಡುತ್ತ ಮುಂದೆ ಸಾಗಿದರೆ ಸೆಮಿಫೈನಲ್ ಸುತ್ತಿನಲ್ಲಿ ಪರಸ್ಪರ ಎದುರಾಗುವ ಸಾಧ್ಯತೆಯಿದೆ.
ಮಹಿಳೆಯರ ಡಬಲ್ಸ್ನಲ್ಲಿ ಭಾರತದ ಸವಾಲು ಮುನ್ನಡೆಸಲಿರುವ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಡಚ್ನ ಏಫ್ಜೇ ಮುಸ್ಕನ್ಸ್ ಮತ್ತು ಸೆಲೆನಾ ಪೀಕ್ ವಿರುದ್ಧ ಸೆಣಸಿನೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಹಾಲಿ ಕಾಮನ್ವಲ್ತ್ ಗೇಮ್ಸ್ ಚಾಂಪಿಯನ್ ಪರುಪಳ್ಳಿ ಕಶ್ಯಪ್, ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 4ನೇ ಶ್ರೇಯಾಂಕಿತ ಜಪಾನಿನ ಕೆನಿಚಿ ಟ್ಯಾಗೊ ಅವರನ್ನು ಎದುರಿಸಲಿದ್ದಾರೆ. ಕಿಡಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಸುಲಭ ಡ್ರಾ ಪಡೆದಿದ್ದು, ಅರ್ಹತಾ ಸುತ್ತಿನ ಆಟಗಾರನ ವಿರುದ್ಧ ಸೆಣಸಲಿದ್ದಾರೆ. ಉಳಿದಂತೆ, ಆರ್.ಎಂ.ವಿ. ಗುರುಸಾಯಿದತ್ ಮತ್ತು ಎಚ್.ಎಸ್. ಪ್ರಣಯ್ ಕ್ರಮವಾಗಿ ವಿಶ್ವದ 16ನೇ ಶ್ರೇಯಾಂಕಿತ ಕೆಂಟೋ ಮೊಮೊಟಾ ಅವರ ಕಠಿಣ ಸವಾಲು ಎದುರಿಸಬೇಕಾಗಿದೆ. ಡಬಲ್ಸ್ನಲ್ಲಿ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ ಹಾಗೂ ಮಿಶ್ರ ಡಬಲ್ಸ್ ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ರಷ್ಯಾದ ವಾಡ್ಲಿಮಿರ್ ಇವಾನೊವ್, ಪ್ರಶಸ್ತಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ.