ಭಾರತ- ವಿಂಡೀಸ್ ವಿವಾದದಲ್ಲಿ ಹಸ್ತಕ್ಷೇಪ ಮಾಡಲ್ಲ: ಐಸಿಸಿ
ಬಿಸಿಸಿಐ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ನಡುವಿನ ವಿವಾದಕ್ಕೆ ನಾವು ಹಸ್ತಕ್ಷೇಪ ಮಾಡುವುದಿಲ್ಲ, ನಮಗೆ ಆ ಅಧಿಕಾರ ಇಲ್ಲ....
ದುಬೈ: ಬಿಸಿಸಿಐ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ನಡುವಿನ ವಿವಾದಕ್ಕೆ ನಾವು ಹಸ್ತಕ್ಷೇಪ ಮಾಡುವುದಿಲ್ಲ, ನಮಗೆ ಆ ಅಧಿಕಾರ ಇಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರತಿಕ್ರಿಯಿಸಿದೆ.
ವಾರಗಳ ಹಿಂದೆ ಏಕದಿನ ಪಂದ್ಯಕ್ಕಾಗಿ ಭಾರತ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ದಿಢೀರನೆ ಪ್ರವಾಸವನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಿತ್ತು. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮತ್ತು ವೆಸ್ಟ್ ಇಂಡೀಸ್ ಆಟಗಾರರ ನಡುವಿನ ವೇತನ ವಿವಾದವೇ ಈ ಪ್ರವಾಸ ರದ್ದತಿಗೆ ಕಾರಣವಾಗಿತ್ತು.
ವೆಸ್ಟ್ ಇಂಡೀಸ್ ಆಟಗಾರರ ಕ್ರಮವನ್ನು ಖಂಡಿಸಿದ ಬಿಸಿಸಿಐ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಮುಂದಾಗಿತ್ತು.
ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ ಐಸಿಸಿ, ಈ ಸಮಸ್ಯೆಯನ್ನು ವೆಸ್ಟ್ ಇಂಡೀಸ್ ಆಟಗಾರರು, ವೆಸ್ಟ್ ಇಂಡೀಸ್ ಆಟಗಾರರ ಅಸೋಸಿಯೇಷನ್ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯವರೇ ಪರಿಹರಿಸಬೇಕು. ಇದರ ಮಧ್ಯೆ ಪ್ರವೇಶಿಸಲು ನಮಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದೆ.