ಹಾಕಿ ಕೋಚ್ ಟೆರ್ರಿ ವಾಲ್ಶ್ ರಾಜಿನಾಮೆ ವಾಪಸ್
ಭಾರತದ ಹಾಕಿ ತಂಡದ ಹಿರಿಯ ಕೋಚ್ ಟೆರ್ರಿ ವಾಲ್ಶ್ ಅವರು ಕೋಚ್ ...
ನವದೆಹಲಿ: ಭಾರತದ ಹಾಕಿ ತಂಡದ ಹಿರಿಯ ಕೋಚ್ ಟೆರ್ರಿ ವಾಲ್ಶ್ ಅವರು ಕೋಚ್ ಸ್ಥಾನಕ್ಕೆ ನೀಡಿದ್ದ ರಾಜಿನಾಮೆಯನ್ನು ಹಿಂಪಡೆದಿದ್ದಾರೆ ಎಂದು ಬುಧವಾರ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೋನೊವಾಲ್ ಅವರು ಟ್ವಿಟ್ ಮಾಡಿದ್ದಾರೆ.
'ಭಾರತೀಯ ಕ್ರೀಡಾ ಪ್ರಾಧಿಕಾರದ ಸಭೆಯಲ್ಲಿ ಟೆರ್ರಿ ಅವರ ಮನವೊಲಿಸಲಾಗಿದ್ದು, ಭಾರತದ ಹಾಕಿ ಭವಿಷ್ಯಕ್ಕಾಗಿ ಅವರು ರಾಜಿನಾಮೆ ಹಿಂಪಡೆದಿದ್ದಾರೆ' ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಇತ್ತೀಚಿಗೆ ಮುಕ್ತಾಯಗೊಂಡ ಇಂಚಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕೋಚ್ ಟೆರ್ರಿ ವಾಲ್ಶ್ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜಿನಾಮೆ ನೀಡಿದ್ದರು.
ಈ ಹಿಂದೆ ಕಳೆದ ಅಕ್ಟೋಬರ್ 19ರಂದು ಭಾರತ ಕ್ರೀಡಾ ಪ್ರಾಧಿಕಾರದ ನಿರ್ದೇಶಕ ಜೀ ಥಾಮ್ಸನ್ ಅವರಿಗೆ ಪತ್ರವೊಂದನ್ನು ಬರೆದಿದ್ದ ಟೆರ್ರಿವಾಲ್ಶ್ ಅವರು, ಆಡಳಿತ ಮಂಡಳಿಯಲ್ಲಿ ನಿರ್ಧಾರ ಕೈಗೊಳ್ಳವಾಗ ಭಾರತ ಕ್ರೀಡಾ ಪ್ರಾಧಿಕಾರದ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುವುದು ನನಗೆ ಕಷ್ಟಕರವಾಗುತ್ತಿದೆ. ಇದೇ ಬೆಳವಣಿಗೆ ದೀರ್ಘಕಾಲದವೆರೆಗೆ ಮುಂದುವರೆದರೆ ಇದು ಭಾರತ ಹಾಕಿ ಮತ್ತು ತಂಡದ ಆಟಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ನನ್ನ ವೃತ್ತಿ ಜೀವನದ ಒತ್ತಡಗಳು ನನ್ನ ವೈಯುಕ್ತಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಆಸ್ಟ್ರೇಲಿಯಾದಲ್ಲಿರುವ ನನ್ನ ಕುಟುಂಬ ವರ್ಗ ಇದರಿಂದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ವಾಲ್ಸ್ ಹೇಳಿಕೊಂಡಿದ್ದರು.