ಬ್ಯಾಟಿಂಗ್ ಅಭ್ಯಾಸಕ್ಕಾಗಿ 1500 ನೆಟ್ಸ್ ಬೌಲರ್ಗಳ ಹುಡುಕಾಟದಲ್ಲಿ 2015ರ ಏಕದಿನ ವಿಶ್ವಕಪ್ ಆಯೋಜಕರು
ಮುಂದಿನ ವರ್ಷ ಆಸ್ಟ್ರೇಲಿಯ ಹಾಗೂ ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು...
ದುಬೈ: ಮುಂದಿನ ವರ್ಷ ಆಸ್ಟ್ರೇಲಿಯ ಹಾಗೂ ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಅಭ್ಯಾಸ ನಡೆಸಲು ನೆರವಾಗುವ ಉದ್ದೇಶದಿಂದ ಪಂದ್ಯಾವಳಿಯ ಆಯೋಜಕರು ಒಟ್ಟು 1500 ನೆಟ್ಸ್ ಬೌಲರ್ಗಳ ಹುಡುಕಾಟದಲ್ಲಿದ್ದಾರೆ.
ವಿಶ್ವಕಪ್ ಪಂದ್ಯಾವಳಿಗೆ ಇನ್ನು ನಾಲ್ಕೇ ತಿಂಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಆಯೋಜಕರು, ನೆಟ್ಸ್ನಲ್ಲಿ ಬ್ಯಾಟ್ಸ್ಮನ್ಗಳ ಅಭ್ಯಾಸಕ್ಕೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಹೆಚ್ಚುವರಿ ಬೌಲರ್ಗಳನ್ನು ಒದಗಿಸಲು ಮುಂದಾಗಿದ್ದಾರೆ.
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಗಳ ಸದಸ್ಯ ಸಂಸ್ಥೆಗಳಲ್ಲಿ ನೆಟ್ಸ್ ಬೌಲರ್ಗಳ ಹುಡುಕಾಟದಲ್ಲಿ ಆಯೋಜಕರು ನಿರತರಾಗಿದ್ದಾರೆ ಎಂದು 2015ರ ವಿಶ್ವಕಪ್ ಪಂದ್ಯಾವಳಿಯ ಸ್ಥಳೀಯ ಆಯೋಜಕರಾದ ಜಾನ್ ಹಾರ್ನೆಡೆನ್ ತಿಳಿಸಿದ್ದಾರೆ. ವಿಶ್ವಕಪ್ನಲ್ಲಿ ಭಾಗವಹಿಸುವ ತಂಡಗಳ ತಯಾರಿಗೆ ತಮ್ಮ ಸಮಯವನ್ನು ಮೀಸಲಿಟ್ಟು, ನೆಟ್ಸ್ನಲ್ಲಿ ಬೌಲಿಂಗ್ ಮಾಡುವ ಆಟಗಾರರ ಹುಡುಕಾಟ ಸವಾಲಾಗಿದೆ. ಹಾಗಾಗಿ ಆಸೀಸ್ನ ಮಾಜಿ ಆಟಗಾರರಾದ ಮ್ಯಾಥ್ಯೂ ಹೇಡನ್ ಹಾಗೂ ಆಲನ್ ಬಾರ್ಡರ್ ಈ ನೆಟ್ಸ್ ಬೌಲರ್ಗಳ ಹುಡುಕಾಟದಲ್ಲಿ ಭಾಗವಹಿಸಿದ್ದಾರೆ.
ನೆಟ್ಸ್ ಬೌಲರ್ಗಳು ಸಾರ್ವಜನಿಕವಾಗಿ ಪ್ರಾಮುಖ್ಯತೆ ಪಡೆಯದಿದ್ದರೂ, ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಭಾಗವಹಿಸುವ ತಂಡಗಳ ಬ್ಯಾಟ್ಸ್ಮನ್ಗಳ ಅಭ್ಯಾಸದಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಹಾಗಾಗಿ ಈ ಬೌಲರ್ಗಳಿಗೂ ಉತ್ತಮ ಅನುಭವ ಪಡೆಯುವ ವಾತಾವರಣ ಕಲ್ಪಿಸಲಾಗುತ್ತಿದೆ. ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ಗಳಿಗೆ ಬೌಲಿಂಗ್ ಮಾಡುವ ಅವಕಾಶ ಸಿಗುವುದು ಪ್ರಮುಖವಾಗಿದೆ ಎಂದು ಆಸೀಸ್ನ ಮಾಜಿ ದೈತ್ಯ ಬ್ಯಾಟ್ಸ್ಮನ್ ಮ್ಯಾಥ್ಯೂ ಹೇಡನ್ ತಿಳಿಸಿದ್ದಾರೆ . ಪ್ರತಿಯೊಬ್ಬ ನೆಟ್ಸ್ ಬೌಲರ್ಗಳಇಗೂ ತರಬೇತಿ ಸಮವಸ್ತ್ರ, ವಿಶೇಷ ಉಡುಗೊರೆ ಹಾಗೂ 2 ಪಂದ್ಯದ ಟಿಕೆಟ್ಗಳನ್ನು ನೀಡಲು ಆಯೋಜಕರು ನಿರ್ಧರಿಸಿದ್ದಾರೆ.